ADVERTISEMENT

ಚಿನ್ನಾಭರಣ ಅಬಕಾರಿ ಸುಂಕ ಹೆಚ್ಚಳಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:55 IST
Last Updated 22 ಮಾರ್ಚ್ 2012, 6:55 IST

ಗೋಕಾಕ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಚಿನ್ನಾಭರಣಗಳ ಮೇಲೆ ಅಬಕಾರಿ ಸುಂಕ ಏರಿಕೆ ಹಾಗೂ ಅಕ್ಕಸಾಲಿಗರಿಗೆ ಸೇವಾ ತೆರಿಗೆ ವಿಧಿಸಿರುವುದನ್ನು  ವಿರೋಧಿಸಿ ನಗರದ ಸರಾಫ್ ಮರ್ಚೆಂಟ್ಸ್  ಹಾಗೂ ಅಕ್ಕಸಾಲಿಗರ ಅಸೋಶಿಯೇಷನ್ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

2 ಲಕ್ಷ ಮೇಲೆ ಖರೀದಿಸುವ  ಚಿನ್ನಾಭರಣಗಳ ಮೇಲೆ ಶೇ. 1 ರಷ್ಟು ತೆರಿಗೆ ಹಾಗೂ ರಾಜ್ಯ ಸರ್ಕಾರದ ಶೇ. 2ರಷ್ಟು ತೆರಿಗೆ ಸೇರಿ ಗ್ರಾಹಕರು ಶೇ. 7ರಷ್ಟು  ತೆರಿಗೆ ನೀಡಬೇಕಾಗುತ್ತದೆ ಹಾಗೂ ಅಕ್ಕಸಾಲಿಗರಿಗೆ ವಿಧಿಸಿರುವ  ಶೇ. 12 ರಷ್ಟು  ಸೇವಾ ತೆರಿಗೆ ಹೊರೆಯಾಗಲಿದೆ. ಇದಕ್ಕಾಗಿ  ಶೇ. 2ರಷ್ಟಿದ್ದ ಸುಂಕವನ್ನು ಶೇ. 4ಕ್ಕೆ ಏರಿಸಿರುವುದನ್ನು ಹಿಂದಕ್ಕೆ  ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸರಾಫ್ ಮರ್ಚೆಂಟ್ಸ್  ಹಾಗೂ ಅಕ್ಕಸಾಲಿಗರ ಅಸೋಶಿಯೇಷನ್  ಅಧ್ಯಕ್ಷರಾದ  ಪ್ರಕಾಶ ರಾಠೋಡ ಹಾಗೂ  ಅರುಣ ಸಾಲಳ್ಳಿ ನೇತೃತ್ವದಲ್ಲಿ  ಪ್ರತಿಭಟನಾ ಮೆರವಣಿಗೆ ನಡೆಯಿತು.ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಈ ನಿರ್ಧಾರಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರ ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು. 

ಬೈಲಹೊಂಗಲ ವರದಿ

ಬೈಲಹೊಂಗಲ: ಕೇಂದ್ರ ಸರ್ಕಾರ ಚಿನ್ನ-ಬೆಳ್ಳಿ ಮಾರಾಟದ ಮೇಲೆ ವಿಧಿಸಲಾದ ಸುಂಕವನ್ನು  ಕಡಿಮೆ ಮಾಡುವಂತೆ ಆಗ್ರಹಿಸಿ, ಸ್ಥಳೀಯ ಸರಾಫ ಅಸೋಶಿಯೇಶನ್ ವತಿಯಿಂದ ಎರಡು ದಿನ ಅಂಗಡಿ ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆಯ ಮೂಲಕ ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಬಜೆಟ್‌ದಲ್ಲಿ ಘೋಷಣೆ ಮಾಡಿದ ಸ್ಟ್ಯಾಂಡರ್ಡ್‌ ಬಾರ್ ಹಾಗೂ ಪ್ಲ್ಯಾಟಿನಂ ಬಾರ್ ಆಮದು ಕರವನ್ನು ಕಡಿಮೆ ಮಾಡಬೇಕು ಹಾಗೂ  ಬ್ರ್ಯಾಂಡೆಡ್ ಜ್ಯುವೆಲರಿ, ಪ್ರಸಿಯಸ್ ಮೆಟಲ್ ಮೇಲೆ ಅಬಕಾರಿ ಕರದ ವ್ಯಾಪ್ತಿ  ವಿಸ್ತರಣೆ  ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರ ಚಿನ್ನ ಖರೀದಿಯಲ್ಲಿ ವಿಧಿಸಿರುವ ಟಿಸಿಎಸ್ ನಿಯಮ ಜಾರಿಗೊಳಿಸಿದ್ದು ಅದನ್ನು ಹಿಂಪಡೆಯಬೇಕು ಎಂದು ಚಿನ್ನಾಭರಣ ವ್ಯಾಪಾರಸ್ಥರು  ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜವಳಿ ಕೂಟದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಿತು. ವಿ.ಬಿ.ಅಂಗಡಿ, ರಮೇಶ ಶಿರೋಮನಿ, ನಾರಾಯಣ ಪತ್ತಾರ, ಎಂ.ಆರ್.ಬಡಿಗೇರ, ವಿ.ಬಿ.ಪತ್ತಾರ, ನಕುಲ ಪತ್ತಾರ, ಇಬ್ರಾಹಿಂ ಶೇಖ, ಉಮೇಶ ರೇವಣಕರ, ಸದಾನಂದ ಕಮ್ಮಾರ ಮತ್ತು ಸುಭಾಸ ದೇಶನೂರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.