ADVERTISEMENT

ಚಿಲ್ಲರೆ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:50 IST
Last Updated 20 ಮಾರ್ಚ್ 2012, 5:50 IST

ಚಿಕ್ಕೋಡಿ: ಕೂಲಿಕಾರನಿಂದ ಹಿಡಿದು ಉದ್ಯಮಿಗಳವರೆಗೂ ಕಾಡುತ್ತಿರುವ ಚಿಲ್ಲರೆ ನಾಣ್ಯ ಸಮಸ್ಯೆಯನ್ನು ನೀಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದ ಅಲ್ಲಮಪ್ರಭು ಅನ್ನದಾನ ಸಮಿತಿಯ ಸಂಸ್ಥಾಪಕ ಚಂದ್ರಕಾಂತ ಹುಕ್ಕೇರಿ ಅವರು ಕೊಡೆಗೆ ಹರಿದ ನೋಟುಗಳನ್ನು ನೇತು ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಪಟ್ಟಣದಲ್ಲಿ ಈ ಕುರಿತು ಜನಜಾಗೃತಿ ಮೆರವಣಿಗೆ ನಡೆಸಿದ ಚಂದ್ರಕಾಂತ ಹುಕ್ಕೇರಿ ಅವರು, ವರ್ತಕರು ಮತ್ತು ಸಾರ್ವಜನಿಕರ ಸಹಿ ಸಂಗ್ರಹಿಸಿದರು. ನಂತರ ನೂರಾರು ಜನ ಬೆಂಬಲಿಗರೊಂದಿಗೆ ಇಲ್ಲಿನ ಮಿನಿ ವಿಧಾನಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ಭಾರತೀಯ ರಿಸರ್ವ ಬ್ಯಾಂಕ್‌ನ ಗರ್ವನರ್ ಅವರಿಗೆ ಮನವಿ ಸಲ್ಲಿಸಿದರು.

ದೇಶದಲ್ಲಿ ಒಂದು, ಎರಡು ಮತ್ತು ಐದು ರೂ.ಗಳ ಮುಖಬೆಲೆಯ ನಾಣ್ಯ ಮತ್ತು ನೋಟುಗಳ ತೀವ್ರ ಆಭಾವ ಉಂಟಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. `ಚಿಲ್ಲರೆ~ ಸಮಸ್ಯೆಯಿಂದಾಗಿ ಹಲವು ಕಡೆಗಳಲ್ಲಿ ಜಗಳಗಳೂ ಉಂಟಾದ ಉದಾಹರಣೆಗಳಿವೆ ಎಂದು ಹೇಳಿದರು.

ಹೋಟೆಲ್, ದಿನಸಿ ಅಂಗಡಿ, ಬಸ್‌ಗಳಲ್ಲಿ ಸೇರಿದಂತೆ ಜನರ ದಿನನಿತ್ಯದ ಚಟುವಟಿಕೆಗಳಲ್ಲಿ ಚಿಲ್ಲರೆಗಾಗಿ ಪರದಾಡುವಂತಾಗಿದೆ. ಬ್ಯಾಂಕುಗಳಲ್ಲೂ ಚಿಲ್ಲರೆ ಆಭಾವ ಇದೆ ಎಂದು ಸಿಬ್ಬಂದಿ ಹೇಳುತ್ತಾರೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಒಂದು, ಎರಡು ಮತ್ತು ಐದು ರೂಪಾಯಿ ಮುಖಬೆಲೆಯ ನಾಣ್ಯ ಮತ್ತು ನೋಟುಗಳನ್ನು ಬಿಡುಗಡೆ ಮಾಡಬೇಕು ಎಂದು ಹುಕ್ಕೇರಿ ಒತ್ತಾಯಿಸಿದರು.

ಸಮಿತಿಯ ಮಹಾದಾನಿ ಶ್ರೀಕಾಂತ ಜಂಬಗಿ, ಮಲ್ಲಿಕಾರ್ಜುನ ದಾನನ್ನವರ, ಸ್ವಪ್ನೀಲ್ ಮಾನಕಾಪುರೆ, ಕಾಶೀಂಸಾಬ ಝಾಡವಾಲೆ, ಶಿವಶಂಕರ ಚಿಕ್ಕೋಡಿ, ದುಂಡಪ್ಪ ಹಾಲಭಾವಿ, ಸಂದೀಪ ಪಾಟೀಲ, ಬಾಳಾಸಾಹೇಬ ಹೊನ್ನಾಯಿಕ, ಬಿ.ಡಿ.ದವಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.