ADVERTISEMENT

ಜಾಗನೂರ ಗ್ರಾಮದಲ್ಲಿ ಶಾಲೆ ತೆರೆಯಲು ಮಕ್ಕಳ ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 9:45 IST
Last Updated 13 ಸೆಪ್ಟೆಂಬರ್ 2013, 9:45 IST

ಚಿಕ್ಕೋಡಿ: ಶಾಲೆ ಕಲಿತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸುವ ಆಸೆ. ಆದರೆ, ಗ್ರಾಮದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆ ಇದೆ. ಪಕ್ಕದ ಗ್ರಾಮಗಳಲ್ಲಿನ ಖಾಸಗಿ ಶಾಲೆಯಲ್ಲಿ ಕಲಿಸುವ ಆರ್ಥಿಕ ಸಬಲತೆ ಕುಟುಂಬಕ್ಕಿಲ್ಲ. ಗ್ರಾಮದಲ್ಲೇ ಹೈಸ್ಕೂಲ್ ತೆರೆಯಿರಿ. ಇಲ್ಲದಿದ್ದರೆ ಶಿಕ್ಷಣದಿಂದ ವಂಚಿತವಾಗುವ ನಮ್ಮನ್ನು ಬಾಲ್ಯದಲ್ಲೇ ಅವ್ವ–ಅಪ್ಪ ಮದುವೆ ಮಾಡಿ ಕೊಡುತ್ತಾರೆ. ಗಂಡು ಮಕ್ಕಳು ಬಾಲ ಕಾರ್ಮಿಕರಾಗುತ್ತಾರೆ. ಗ್ರಾಮದಲ್ಲಿ ಹೈಸ್ಕೂಲು ಆರಂಭಿಸದಿದ್ದರೆ ನಮ್ಮ ಭವಿಷ್ಯ ಹಾಳಾಗುತ್ತದೆ. ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ...,

ತಾಲ್ಲೂಕಿನ ಜಾಗನೂರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್‌.ಆರ್‌.ಉಮೇಶ ಆರಾಧ್ಯ ಹಾಗೂ ಸದಸ್ಯರ ಎದುರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಬಡ ಮಕ್ಕಳಾದ ಲಕ್ಷ್ಮಿ, ಗೋಪಿ ಪೆಡ್ಡಾರೆ, ಲಕ್ಷ್ಮಿ ಮುಂತಾದವರು ಮಾಡಿಕೊಂಡ ಮನವಿಯ ಪರಿಯಿದು.

ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆ ಬೆಳಗಾವಿ ಜಿಲ್ಲಾ ಸಂಚಾಲಕಿ ಶೋಭಾ ಘಸ್ತಿ ಅವರು, ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದೇ ಇರುವುದರಿಂದ ಬಡ ಮಕ್ಕಳು ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. 2012 ಫೆಬ್ರುವರಿಯಿಂದ 2013 ಆಗಸ್ಟ್ ವರೆಗೆ ಗ್ರಾಮದಲ್ಲಿ 34 ಬಾಲ್ಯ ವಿವಾಹಗಳಾಗಿವೆ. 32 ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ.
 ಇದಕ್ಕೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದೇ ಇರುವುದು ಒಂದು ಕಾರಣವಾಗಿದೆ. ಪ್ರೌಢಶಾಲೆ ಆರಂಭಕ್ಕೆ ಕಳೆದ ಮೂರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬರಲಾಗಿದೆ. ಇದುವರೆಗೆ ಮಂಜೂರು ಮಾಡಿಲ್ಲ ಎಂದು ಆಯೋಗದ ಪದಾಧಿಕಾರಿಗಳ ಎದುರು ಮನವರಿಕೆ ಮಾಡಿಕೊಟ್ಟರು.

ಸ್ಥಳದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಂ. ದಾನೋಜಿ ಅವರು, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಗ್ರಾಮದಲ್ಲಿ ಪ್ರೌಢಶಾಲೆ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅದರ ನಿಯಮಾವಳಿಗಳಡಿ ಗ್ರಾಮದಲ್ಲಿ ಪ್ರೌಢಶಾಲೆ ಮಂಜೂರು ಮಾಡಲು ಅನುಮತಿ ದೊರಕಿಲ್ಲ. ರಾಜ್ಯ ಶಿಕ್ಷಣ ಯೋಜನೆಯಡಿ ಪ್ರೌಢಶಾಲೆ ಮಂಜೂರು ಮಾಡುವ ಅವಕಾಶವಿದೆ. ಈ ಕುರಿತು ತಾವು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

ರಾಜ್ಯ ಶಿಕ್ಷಣ ಯೋಜನೆಯಡಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾತಿಗೆ ಬರುವ ಸೋಮವಾರದ ಒಳಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಡಿಡಿಪಿಐ ಡಿ.ಎಂ.ದಾನೋಜಿ ಅವರಿಗೆ ಸೂಚನೆ ನೀಡಿದ  ಎಚ್‌.ಆರ್‌.ಉಮೇಶ ಆರಾಧ್ಯ ಅವರು, ಬರುವ ಶೈಕ್ಷಣಿಕ ವರ್ಷದಿಂದಲೇ ಪ್ರೌಢಶಾಲೆ ಆರಂಭಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.

ಜೋಡಕುರಳಿಗೆ ಭೇಟಿ: ತಾಲ್ಲೂಕಿನ ಜೋಡಕುರಳಿ ಗ್ರಾಮಕ್ಕೂ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್‌.ಆರ್‌.ಉಮೇಶ ಆರಾಧ್ಯ ಹಾಗೂ ಸದಸ್ಯರು, ಅಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪರಿಸ್ಥಿತಿಯ ಅವಲೋಕನ ನಡೆಸಿದರು. ಅಪೌಷ್ಟಿಕ ಮಕ್ಕಳ ತಾಯಂದಿರ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಅರಿತುಕೊಂಡರು. ಒಂದೆಡೆ ಆಯೋಗದ ಸದಸ್ಯರು ತಾಯಂದಿರ ಜೊತೆಗೆ ಮಾತುಕತೆ ನಡೆಸುತ್ತಿದ್ದರೆ ಇನ್ನೊಂದೆಡೆ ಗ್ರಾಮದ ಇಬ್ಬರು ತಮ್ಮಲ್ಲಿಯೇ ಕಿತ್ತಾಟ ನಡೆಸಿ ಗೊಂದಲ ಸೃಷ್ಟಿಸಿದ ಘಟನೆಯೂ ನಡೆಯಿತು.

ಜೋಡಕುರಳಿಯಲ್ಲಿ 27 ಮಕ್ಕಳನ್ನು ಗುರುತಿಸ ಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರಕಾರ ಕೇವಲ 4 ಮಕ್ಕಳು ಮಾತ್ರ ದಾಖಲಾಗಿದ್ದಾರೆ ಎಂದು ಸಾಮಾಜಿಕ ಪರಿವ ರ್ತನಾ ಜನಾಂದೋಲನ ಸಂಘಟನೆ ಪದಾಧಿಕಾರಿ ಗಳು ದೂರಿದರು.

ಆಯೋಗದ ವನಿತಾ ತೊರವಿ, ಶಿವರಾಜೇಗೌಡ, ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆ ರಾಜ್ಯ ಸಮಿತಿ ಸದಸ್ಯ ಅಂಬಣ್ಣ ಅರೋಲಿಕರ,  ಗುಲ್ಬರ್ಗ  ವಲಯ ಸಂಘಟಕ ವಿಠಲ್ ಚಿಕಣಿ, ರಾಜ್ಯ ಸಂಘಟಕ ವೈ. ಮರಿಸ್ವಾಮಿ, ಬೆಂಗಳೂರಿನ ಕ್ರೈ ಸಂಸ್ಥೆಯ ಮಹೇಶ ಕುಮಾರ, ಗೋಕಾಕ ಶಕ್ತಿ ಸಂಘದ ಅಧ್ಯಕ್ಷೆ ಲಲಿತಾ ಹೊಸಮನಿ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ, ಘಟಪ್ರಭಾ ಮಾಸ್‌ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಸೀತವ್ವ ಜೋಡಟ್ಟಿ, ಎವರಿ ಚೈಲ್ಡ್ ಸಂಯೋಜಕಿ ಐರಾವತಿ ಮಾಂಗ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.