ADVERTISEMENT

ಜಾಗರಣೆ ಬದಲು ಜವರಾಯನ ಮನೆಗೆ...

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 9:40 IST
Last Updated 22 ಫೆಬ್ರುವರಿ 2012, 9:40 IST

ಮುಗಳಿಹಾಳ (ತಾ. ಸವದತ್ತಿ): ಶಿವರಾತ್ರಿಯ ಜಾಗರಣೆಗೆ ಹೋಗಬೇಕು ಎಂದು ಹೊಲದಿಂದ ಮನೆಗೆ ಹೊರಟವರು ಹೋಗಿದ್ದು ಜವರಾಯನ ಮನೆಗೆ...!

“ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದ ಗಾಣಿಗೇರ ಮನೆತನಕ್ಕೆ ಸೇರಿದ ಸಂಬಂಧಿಗಳು ಬಾವಿ, ಪಂಪ್‌ಸೆಟ್ ಪೂಜೆ ಮಾಡಿ ಎಲ್ಲರೂ ಊಟ ಮುಗಿಸಿಕೊಂಡು ಘಟಪ್ರಭಾ ಬಲ ದಂಡೆ ಕಾಲುವೆ ಪಕ್ಕದ ಕಚ್ಚಾ ರಸ್ತೆಯಲ್ಲಿ ಚಕ್ಕಡಿ ಗಾಡಿಯಲ್ಲಿ ಮನೆಗೆ ಹೊರಟಿದ್ದರು. ಚಕ್ಕಡಿ ಎದುರಿಗೆ ನಾಯಿಗಳೆರಡು ಕಚ್ಚಾಡುತ್ತ ಎತ್ತುಗಳ ಬಳಿಗೆ ಬಂದಾಗ ಬೆದರಿದ ಎತ್ತಿನ ಕಾಲು ಜಾರಿ, ಕಾಲುವೆಗೆ ಚಕ್ಕಡಿ ಉರುಳಿತು” ಎಂದು ಚಕ್ಕಡಿ ಓಡಿಸುತ್ತಿದ್ದ ಫಕೀರಪ್ಪ (ಅಜ್ಜಪ್ಪ) ಬಸಪ್ಪ ಗಾಣಿಗೇರ `ಪ್ರಜಾವಾಣಿ~ಗೆ ತಿಳಿಸಿದಾಗ, ಸೋಮವಾರ ಸಂಜೆ ನಡೆದ ದುರಂತದ ಭೀತಿಯಿಂದ ಅವರು ಇನ್ನೂ ಹೊರ ಬಂದಿರಲಿಲ್ಲ.

ಸುಮಾರು 4.5 ಮೀಟರ್ ನೀರು ಹರಿಯುತ್ತಿದ್ದ ಕಾಲುವೆಗೆ ಚಕ್ಕಡಿ ಬೀಳುತ್ತಿದ್ದಂತೆಯೇ ನಾನು ಈಜುತ್ತ ದಂಡೆಗೆ ಬಂದು `ಅಯ್ಯೋ ಯಾರಾದ್ರೂ ಬರ‌್ರೋ ! ಕೆನಾಲ್‌ದಾಗ ಚಕ್ಕಡಿ ಬಿದ್ದೈತಿ~ ಎಂದು ಕೂಗಿಕೊಂಡೆ. ಸಮೀಪದ ಮನೆಯಲ್ಲಿದ್ದ ಯುವಕ ಸಿದ್ಧಾರೂಢ ಹಾಗೂ ಕಬ್ಬು ಕಡಿಯುವ ಗ್ಯಾಂಗದ ಹತ್ತು ಜನರು ಸೇರಿ ಅಕ್ಕನ ಮಗಳಾದ ಎರಡು ವರ್ಷದ ದೀಪಾಳನ್ನು ಮೇಲೆತ್ತಿದೆವು. ತಕ್ಷಣವೇ ಶಾಂತವ್ವ ಗಾಣಿಗೇರ ಹಾಗೂ ಪಾರವ್ವ ಬೆಂಡವಾಡ ಅವರನ್ನೂ ನೀರಿನಿಂದ ಹೊರ ತೆಗೆಯಲಾಯಿತು. ನೀರಿನ ರಭಸ ಹೆಚ್ಚಿರುವುದರಿಂದ ಹಾಗೂ ಕತ್ತಲು ಕವಿದಿದ್ದರಿಂದ ಉಳಿದವರನ್ನು ರಕ್ಷಿಸಲು ಅಡ್ಡಿಯಾಯಿತು ಎಂದು ಫಕೀರಪ್ಪ ವಿವರಿಸಿದರು.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಮನೆ ಯಿಂದ ಚಕ್ಕಡಿಯಲ್ಲಿ ಕೆನಾಲ್ ಪಕ್ಕದ ಮೂರು ಕಿ.ಮೀ. ದೂರ ಹೊಲದಲ್ಲಿದ್ದ ಬಾವಿ, ಹೊಸ ಪಂಪಸೆಟ್ ಪೂಜೆ ಸಲ್ಲಿಸಿದೆವು. ಮುತ್ತೈದೆಯರಿಗೆ ಹಾಗೂ ಜೋಗಮ್ಮನಿಗೆ ಉಡಿ ತುಂಬಿ ಊಟ ಮಾಡಿದ ಬಳಿಗ ಪುರುಷರು ಇದ್ದ ಚಕ್ಕಡಿ ಮೊದಲು ಮನೆಗೆ ಹೋಯಿತು. ಸಂಜೆ 7 ಗಂಟೆಯ ಹೊತ್ತಿಗೆ ಹೆಂಗಸರನ್ನೆಲ್ಲ ಕರೆದು ಕೊಂಡು ಮನೆಗೆ ಹೋಗಲು ದಾರಿ ಹಿಡಿದೆವು. ಆದರೆ...” ಎಂದು ಫಕೀರಪ್ಪ ತುಂಬಿ ಬಂದ ದುಃಖ ವನ್ನು ತಡೆಯಲಾಗದೇ ಕಣ್ಣೀರಿಟ್ಟ.

`ಅಯ್ಯೋ ಅವ್ವಾ ನನಗ್ಯಾರು ದಿಕ್ಕು, ನನ್ನನ್ನು ಸಾಕುವವರು ಯಾರು? ಕಾಳಜಿ ಮಾಡುವವರು ಯಾರು? ನನ್ನನ್ನು ನಿನ್ನ ಜೊತೆಗೆ ಕರೆದುಕೋ...~ ಎಂದು ಮೃತ ಗಂಗಮ್ಮನ ಮಗಳಾದ ಅಂಗವಿಕಲಳಾದ ರೇಣುಕಾ ರೋದಿಸುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು.

ಎಂಟನೇ ತರಗತಿಯಲ್ಲಿ ಓದುತ್ತಿದ್ದ ಸಂಗೀತ, ಆರನೇ ತರಗತಿಯಲ್ಲಿ ಓದುತ್ತಿದ್ದ ಭಾರತಿ, ಎರಡನೇ ತರಗತಿಯಲ್ಲಿ ಓದುತ್ತಿದ್ದ ವೀಣಾ (ವಿನೋದಾ) ಗಾಣಿಗೇರ ಮೂವರು ಓದುತ್ತಿದ್ದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲೂ ಸ್ಮಶಾನ ಮೌನ ತುಂಬಿತ್ತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶೋಕದ ಮಡುವಿನಲ್ಲಿದ್ದರು.

ಸಹೋದರಿಯರಾದ ಸಂಗೀತಾ, ಭಾರತಿ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಹಾಗೂ ಸ್ಪರ್ಧೆಗಳಲ್ಲಿ `ನಾ ಮುಂದು, ತಾ ಮುಂದು~ ಎಂದು ಪಾಲ್ಗೊಳ್ಳುತ್ತಿದ್ದರು ಎಂದು ಗ್ರಾಮದ ಯುವಕ ಸಂಘದ ಸದಸ್ಯ ಸಂಜೀವ ನಾಂವಿ ವಿದ್ಯಾರ್ಥಿನಿಯರ ಪ್ರತಿಭೆಯನ್ನು ಸ್ಮರಿಸಿದರು.

ಸೋಮವಾರ ರಾತ್ರಿಯೇ ಕೆಲವು ಉತ್ಸಾಹಿ ಗ್ರಾಮಸ್ಥರು ಕಾಲುವೆಯಲ್ಲಿ ಈಜಿ ಶೋಧ ಕಾರ್ಯ ನಡೆಸಿದಾಗ ಭಾರತಿ ಗಾಣಿಗೇರ, ಅನಸೂಯ ಗಾಣಿಗೇರ ಹಾಗೂ ಸಿದ್ಧವ್ವ ಅರಬಾವಿ ಅವರ ಶವ ಸಿಕ್ಕಿತು. ಮಂಗಳವಾರ ಮುಂಜಾನೆಯಿಂದ ಗ್ರಾಮದ ರಾಮಣ್ಣ ದಳವಾಯಿ ಹಾಗೂ ಹನುಮಂತ ದಳವಾಯಿ ಕಾಲುವೆಯಲ್ಲಿ ಮುಳುಕು ಹಾಕಿ ಶವಗಳನ್ನು ತೆಗೆಯಲು ಸಹಕರಿಸಿದರು. ಕಾಲುವೆಯ ಎರಡು ಕಿ.ಮೀ. ಅಂತರದಲ್ಲಿ ಬೆಳಿಗ್ಗೆ 9 ಗಂಟೆಯ ನಂತರ ಸರೋಜಿನಿ ಗಾಣಿಗೇರ, ಸಂಗೀತಾ ಗಾಣಿಗೇರ, ಲಕ್ಷ್ಮೀ ಗಾಣಿಗೇರ ಅವರ ಶವಗಳು ಪತ್ತೆಯಾದವು. 13 ಕಿ.ಮೀ. ದೂರದ ಕೌಜಲಗಿ ಬಳಿ ಗಂಗಮ್ಮ ಗಾಣಿಗೇರ ಶವ ಪತ್ತೆಯಾಯಿತು. ಮಧ್ಯಾಹ್ನ 1 ಗಂಟೆಯ ಸಮೀಪ ವೀಣಾಳ ಶವವನ್ನು ಹೊರ ತೆಗೆಯುವ ಮೂಲಕ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿತು.

ರಾತ್ರಿಯಿಡೀ ಘಟನೆ ಸಂಭವಿಸಿದ ಸ್ಥಳದಲ್ಲಿದ್ದು ಶವ ಶೋಧ ಕಾರ್ಯ ವೀಕ್ಷಣೆ ಮಾಡಿದ್ದ ಪ್ರೊಬೇಷನರಿ ಉಪವಿಭಾಗಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, “ಘಟನೆಗೆ ಇಕ್ಕಟ್ಟಾದ ರಸ್ತೆಯೇ ಕಾರಣ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ರಸ್ತೆ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ” ಎಂದರು.

“ದುರಂತ ಹೃದಯ ವಿದ್ರಾವಕವಾಗಿದೆ. ಮೃತಪಟ್ಟವರೆಲ್ಲರೂ ಮಹಿಳೆಯರು, ಮೂವರು ಚಿಕ್ಕ ಮಕ್ಕಳು ಎಂಬುದು ದುಃಖದ ವಿಷಯ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಎಲ್ಲ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ಸವದತ್ತಿ ತಹಸೀಲ್ದಾರ ಶಾಂತಾ ಸಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ಗಂಗರಡ್ಡಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡಿದರು. 

ಕಾಲುವೆ ರಸ್ತೆ ಅಗಲಗೊಳಿಸಲು ಒತ್ತಾಯ

ಮುಗಳಿಹಾಳ: ಸವದತ್ತಿ ತಾಲ್ಲೂಕಿನ ಮುಗಳಿಹಾಳ ಸಮೀಪದ ಘಟಪ್ರಭಾ ಬಲದಂಡೆ ಕಾಲುವೆಗೆ ಚಕ್ಕಡಿಯಲ್ಲಿ ಉರುಳಿ ಬಿದ್ದು 8 ಜನರು ಜಲಸಮಾದಿಯಾಗಲು ಇಕ್ಕಟ್ಟಾಗಿರುವ ಕಚ್ಚಾ ರಸ್ತೆಯೇ ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಸುಮಾರು 5 ಮೀಟರ್‌ನಷ್ಟು ನೀರು ಹರಿಯುತ್ತಿ ರುತ್ತದೆ. ಮುಗಳಿಹಾಳದ ಗ್ರಾಮಸ್ಥರ ಹೊಲವು ಕಾಲುವೆ ಪಕ್ಕದಲ್ಲೇ ಇದೆ. ಹೀಗಾಗಿ ಈ ಕಾಲುವೆಗೆ ತಾಗಿಕೊಂಡು ಇರುವ ಇಕ್ಕಟ್ಟಾದ ರಸ್ತೆಯಲ್ಲೇ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ರೈತರು ನಿತ್ಯ ಸಂಚರಿ ಸುತ್ತಾರೆ. ಎಂಡು- ಒಂಬತ್ತು ಅಡಿ ಮಾತ್ರ ಅಗಲ ಇರುವ ಕಚ್ಚಾ ರಸ್ತೆಯು ಉಬ್ಬು ತಗ್ಗಿನಿಂದ ಕೂಡಿದೆ. ಜೊತೆಗೆ ಕಾಲುವೆಗೆ ತಡೆ ಗೋಡೆ ಇಲ್ಲದಿರುವುದಂದ ಅಪಾಯಕಾರಿಗಾಗಿದೆ.

“ಕಾಲುವೆ ಪಕ್ಕದ ರಸ್ತೆಗೆ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ, ಯಾರೂ ಇದಕ್ಕೆ ಸ್ಪಂದಿಸಿಲ್ಲ. ಕನಿಷ್ಠ ಪಕ್ಷ ಈ ರಸ್ತೆಯನ್ನು ಅಲಗೊಳಿಸಿ ದುರಸ್ತಿಗೊಳಿಸಿದ್ದರೆ ಇಂದು ಈ ದುರಂತ ಬಹುಶಃ ನಡೆಯುತ್ತಿರಲಿಲ್ಲ” ಮುಗಳಿಹಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ ಪರಸಪ್ಪ ದಳವಾಯಿ `ಪ್ರಜಾವಾಣಿ~ಗೆ ತಿಳಿಸಿದರು.

“ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ರಸ್ತೆ ಅಗಲಗೊಳಿಸುವಂತೆ ಮನವಿ ಮಾಡಿದಾಗ, ಈ ಬಗ್ಗೆ ಪಂಚಾಯಿತಿಯಿಂದ ಠರಾವು ಪಾಸು ಮಾಡಿ ಕಳುಹಿಸಿಕೊಡುಂತೆ ಸೂಚಿಸಿದರು. ರಸ್ತೆಯನ್ನು ಕನಿಷ್ಠ 15 ಅಡಿಯಷ್ಟಾದರೂ ಅಲಗೊಳಿಸಬೇಕು” ಎಂದು ಅವರು ಹೇಳಿದರು. ಮೂರು ವರ್ಷದ ಹಿಂದೆ ಘಟಪ್ರಭಾ ಬಲದಂಡೆ ಕಾಲುವೆ ಮೇಲಿನ ಇದೇ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಮೂವರು ನೀರಿಗೆ ಬಿದ್ದು ಮೃತಪಟ್ಟಿದ್ದರು ಎಂದು ಗ್ರಾಮಸ್ಥರು ಸ್ಮರಿಸಿಕೊಂಡರು.  
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.