ಚಿಕ್ಕೋಡಿ: ರಾಜ್ಯದಲ್ಲಿಯೇ ವಿಸ್ತಾರವಾದ ಬೆಳಗಾವಿ ಗಡಿಜಿಲ್ಲೆಯ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಬೆಳವಣಿಗೆಯು ಕನ್ನಡದ ಸಾಮರ್ಥ್ಯ ಮತ್ತು ಜೀವಂತಿಕೆಯನ್ನು ಅವಲಂಬಿಸಿದ್ದು, ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ ಕನ್ನಡ ನಾಡು, ನುಡಿ ಸೇವೆಗೆ ಶಕ್ತಿಮೀರಿ ದುಡಿಯುವ ಸಂಕಲ್ಪ ಮಾಡಿದ್ದಾಗಿ ರೈತ ಹೋರಾಟಗಾರ, ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಏ.29 ರಂದು ನಡೆಯಲಿ ರುವ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲ್ಲೂಕಿನಲ್ಲಿ ಪ್ರಚಾರ ಕೈಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡಿಗರು ಬದುಕಿದರೆ ಕನ್ನಡ ಭಾಷೆ, ಸಂಸ್ಕೃತಿ ಬದುಕುಳಿಯಲು ಸಾಧ್ಯ ಎಂಬ ಧ್ಯೇಯವಾಕ್ಯವನ್ನು ಅನುಷ್ಠಾನಕ್ಕೆ ತರುವುದೇ ತಮ್ಮ ಮೂಲ ಉದ್ದೇಶವಾಗಿದೆ ಎಂದರು. ಸ.ರಾ. ಸುಳಕೂಡೆ, ಬಾಬು ನಾಯಿಕ ಮುಂತಾದವರು ಉಪಸ್ಥಿತರಿದ್ದರು.
ಗೋಕಾಕ ವರದಿ
ಗೋಕಾಕ: ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಹಿರಿಯ ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ಅವರು ಇತ್ತೀಚೆಗೆ ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿದರು.
ನಂತರ ನಡೆದ ಸರಳ ಸಮಾರಂಭ ದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ ಮಾತನಾಡಿ, ಕಳೆದ ಎರಡೂವರೆ ದಶಕಗಳಿಂದ ಪತ್ರಕರ್ತರಾಗಿ, ರೈತ ಮುಖಂಡರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದಿರುವ ಕಲ್ಯಾಣರಾವ್ ಅವರಿಗೆ ಬೆಳಗಾವಿ ಜಿಲ್ಲೆಯ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಅಭ್ಯರ್ಥಿ ಕಲ್ಯಾಣರಾವ್ ಅವರು ಮಾತನಾಡಿ, ಸಾಹಿತ್ಯಕ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆ ಸಾಹಿತ್ಯ ದಿಗ್ಗಜರನ್ನು ಜನ್ಮ ನೀಡಿದ ಜಿಲ್ಲೆಯಾಗಿದೆ. ಹೀಗಾಗಿ ಸಾಹಿತ್ಯಿಕ ಕ್ಷೇತ್ರದಲ್ಲಿ ತಮಗೆ ಸೇವೆ ಸಲ್ಲಿಸಲು ತಾವು ಈ ಬಾರಿ ಚುನಾವಣೆಯಲ್ಲಿ ತಮ್ಮ ಆಯ್ಕೆಗೆ ಶ್ರಮಿಸುವಂತೆ ವಿನಂತಿಸಿಕೊಂಡರು.
ಇದೇ ಸಂರ್ಭದಲ್ಲಿ ಕಲ್ಯಾಣರಾವ್ ಅವರನ್ನು ಶೂನ್ಯ ಸಂಪಾದನಮಠದ ಪರವಾಗಿ ಮುರುಘ ರಾಜೇಂದ್ರ ಸ್ವಾಮೀಜಿ ಸತ್ಕರಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಡಾ. ಸಿ.ಕೆ. ನಾವಲಗಿ, ರಮೇಶಗೌಡ ಪಾಟೀಲ, ಆನಂದ ಗೋಟಡಕಿ, ಈಶ್ವರಚಂದ್ರ ಬೆಟಗೇರಿ, ಶಕುಂತಲಾ ದಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.