ADVERTISEMENT

ಜಿಲ್ಲೆಯ ವಿವಿಧೆಡೆ ಮುಂದುವರಿದ ಮಳೆ

ಹಲವು ಮತಗಟ್ಟೆಗಳಲ್ಲಿ ನೀರು ಸೋರಿಕೆ, ವಿದ್ಯುತ್ ವ್ಯತ್ಯಯ, ಚುನಾವಣಾ ಸಿಬ್ಬಂದಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 4:31 IST
Last Updated 12 ಮೇ 2018, 4:31 IST

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಶುಕ್ರವಾರವೂ ಮಳೆ ಮುಂದುವರೆಯಿತು. ಬೆಳಗಾವಿ, ಹಿರೇಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ ಭಾಗದಲ್ಲಿ ಬಿರುಗಾಳಿ ಹಾಗೂ ರಭಸದ ಮಳೆ ಆರಂಭವಾಗಿ ಸುಮಾರು ಒಂದು ತಾಸು ಕಾಲ ಸುರಿಯಿತು. ಭಾರೀ ಗಾಳಿಗೆ ಅಲ್ಲಲ್ಲಿ ಮನೆಗಳ ಮೇಲಿನ ಹೆಂಚು ಹಾರಿ ಹೋಗಿವೆ. ಮರಗಳು ಧರೆಗುರುಳಿವೆ. ಹುಕ್ಕೇರಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿಯೂ ಮಳೆ ಅಬ್ಬರಿಸಿದೆ.

ಗೋಕಾಕದಲ್ಲಿ ರಾತ್ರಿ ಅರ್ಧ ಗಂಟೆ ಮಳೆ ಸುರಿಯಿತು. ಅಥಣಿಯಲ್ಲಿ ಅರ್ಧ ಗಂಟೆ ಸಾಧಾರಣ ಮಳೆಯಾಗಿದೆ. ಹಾರೂಗೇರಿಯಲ್ಲಿ ಮಳೆಯಾಗುತ್ತಿದ್ದ ವೇಳೆ ಭಾರೀ ಗಾಳಿ ಬೀಸಿದೆ. ರಾಯಬಾಗದಲ್ಲಿ ಜಿಟಿಜಿಟಿಯಾಗಿ ಮುಕ್ಕಾಲು ಗಂಟೆಗಿಂತಲೂ ಹೆಚ್ಚು ಮಳೆಯಾಗಿದೆ. ಹುಕ್ಕೇರಿ, ಘಟಪ್ರಭಾ ಮತ್ತು ಯಮಕನಮರಡಿಯಲ್ಲಿ  ಸಿಡಿಲು, ಗುಡುಗು ಸಮೇತ ಮಳೆ ಸುರಿದಿದೆ. ವಿದ್ಯುತ್‌ ತಂತಿಯ ಮೇಲೆ ಮರಗಳು ಉರುಳಿಬಿದ್ದಿದ್ದರಿಂದ ವಿದ್ಯುತ್‌ ಸಂಪರ್ಕ ಕೈಕೊಟ್ಟಿದೆ.

ಬೆಳಗಾವಿಯ ಖಾಸಬಾಗ, ಗಾಂಧಿನಗರ, ವಡಗಾವಿ ಸಂಭಾಜಿ ವೃತ್ತ, ಚನ್ನಮ್ಮ ವೃತ್ತ ಸೇರಿದಂತೆ ಅನೇಕ ಕಡೆ ಸುಮಾರು ಒಂದು ಗಂಟೆಯವರೆಗೆ ಜೋರಾಗಿ ಮಳೆ ಸುರಿದಿದೆ. ಚರಂಡಿಗಳು ತುಂಬಿ ಹರಿದವು. ಕೆಲವೆಡೆ ಮರಗಳು ಉರುಳಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣಿ ಉಂಟಾಗಿತ್ತು. ಸ್ಥಳೀಯರ ನೆರವಿನಿಂದ ಅಧಿಕಾರಿಗಳು ತೆರವುಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.