ADVERTISEMENT

ತಹಸೀಲ್ದಾರ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 7:10 IST
Last Updated 14 ಜೂನ್ 2011, 7:10 IST

ರಾಯಬಾಗ: ಪ್ರಕರಣವೊಂದರ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಅನುಚಿತವಾಗಿ ವರ್ತಿಸಿರುವ ತಹಸೀಲ್ದಾರ ಪ್ರವೀಣ ಬಾಗೇವಾಡಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಇಲ್ಲಿನ ವಕೀಲರ ಸಂಘದ ಸದಸ್ಯರು ಸೋಮವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿನ ವಕೀಲ ಎ.ಎಂ.ಗೆಜ್ಜೆ ಅವರು ತಹಸೀಲ್ದಾರ ನ್ಯಾಯಾಲಯದ ಪ್ರಕರಣದಲ್ಲಿ ಅರ್ಜಿಯನ್ನು ಸಲ್ಲಿಸಲು ಕಳೆದ ಶುಕ್ರವಾರ ಮಧ್ಯಾಹ್ನ ತಹಸೀಲ್ದಾರರ ಕಾರ್ಯಾಲಯಕ್ಕೆ ಹೋದಾಗ, ತಹಸೀಲ್ದಾರರು ಪ್ರಕರಣವನ್ನು ಕೈಗೆತ್ತಿಕೊಳ್ಳದೆ ವಿಳಂಬ ಮಾಡಿದರು. ಈ ಬಗೆಗೆ ವಿಚಾರಿಸಿದಾಗ, `ನನ್ನ ಮನಸ್ಸಿಗೆ ಬಂದಾಗ ಕರೆಯುತ್ತೇನೆ. ನನ್ನನ್ನು ಕೇಳಲು ನೀನು ಯಾರು? ಚೇಂಬರಿನಿಂದ ಹೊರಗೆ ಹೋಗು; ಇಲ್ಲದಿದ್ದರೆ ಪೊಲೀ ಸರನ್ನು ಕರೆಸಿ ದಸ್ತಗೀರಿ ಮಾಡಿಸುತ್ತೇನೆ~ ಎಂದು ತಹಸೀಲ್ದಾರ ಪ್ರವೀಣ ಬಾಗೇವಾಡಿ ಅನುಚಿತವಾಗಿ ಮಾತನಾಡಿದರು ಎಂದು ವಕೀಲರು ಆರೋಪಿಸಿದ್ದಾರೆ.

ವಕೀಲರನ್ನು ಅವಮಾನಗೊಳಿಸಿ ಕರ್ತವ್ಯಲೋಪ ಎಸಗಿರುವ ತಹಸೀಲ್ದಾರ ಬಾಗೇವಾಡಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಹೋಳಕರ ನೇತೃತ್ವದಲ್ಲಿ ವಕೀಲರು ಸೋಮವಾರ ಪ್ರತಿಭಟನೆ ನಡೆಸಿ, ಉಪವಿಬಾಗಧಿಕಾರಿಗಳ ಪ್ರತಿನಿಧಿ ವಿ.ಕೆ.ಪೂಜಾರಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮನವಿ ಅರ್ಪಿಸಿದರು.

ತಹಸೀಲ್ದಾರರನ್ನು ಸೇವೆಯಿಂದ ಅಮಾನತು  ಮಾಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ. ಯಾವುದೇ ಕ್ರಮ ಕೈಕೊಳ್ಳದಿದ್ದರೆ ಬುಧವಾರದಿಂದ ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್,ಬಿ, ಹೋಳಕರ ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಹೋಳಕರ, ಉಪಾಧ್ಯಕ್ಷ ಜಿ.ಎಸ್.ಪವಾರ, ಕಾರ್ಯದರ್ಶಿಜಿ.ಎಸ್. ಕಿಚಡೆ, ಸುರೇಂದ್ರ ಜಿ. ಉಗಾರೆ, ಎನ್.ಎಂ. ಯಡವನ್ನವರ, ಬಿ.ಎಸ್.ಪೂಜಾರ, ಖೊಂಬಾರೆ, ಎ.ಎಂ.ಗೆಜ್ಜೆ, ಆರ್.ಎಸ್.ಬುಗಡಿಕಟ್ಟಿ, ಬಿ.ಬಿ.ಈಟಿ, ವಿ.ಎಸ್. ಪೂಜಾರ, ಎನ್.ಎಸ್.ಒಡೆಯರ, ಎಸ್.ಜಿ. ದೀಕ್ಷಿತ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.