ADVERTISEMENT

ತ್ರಿಕೋನ ಸ್ಪರ್ಧೆ; ರಂಗೇರಿದ ಕಣ

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ; ಪ್ರತಿಷ್ಠೆ ಪಣವಾಗಿರಿಸಿದ ಅಭ್ಯರ್ಥಿಗಳು

ಶ್ರೀಕಾಂತ ಕಲ್ಲಮ್ಮನವರ
Published 10 ಮೇ 2018, 10:22 IST
Last Updated 10 ಮೇ 2018, 10:22 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಹಾಲಿ ಶಾಸಕ, ಬಿಜೆಪಿಯ ಸಂಜಯ ಪಾಟೀಲ ಅವರು ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದರೆ, ಇವರಿಗೆ ತೀವ್ರ ಪೈಪೋಟಿ ನೀಡಲು ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಸಜ್ಜಾಗಿದ್ದಾರೆ. ಇವರಿಬ್ಬರ ನಡುವೆ ಎಂಇಎಸ್‌ನ ಮನೋಹರ ಕಿಣೇಕರ ಸೆಣಸಾಡುತ್ತಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದಿದೆ.

ಕಳೆದ ಚುನಾವಣೆಯಲ್ಲೂ ಇದೇ ಸ್ಥಿತಿ ಇತ್ತು. ಬಿಜೆಪಿ, ಕಾಂಗ್ರೆಸ್‌ ಹಾಗೂ ಎಂಇಎಸ್‌ ನಡುವೆ ಫೈಟ್‌ ನಡೆದಿತ್ತು. ಅಂತಹದ್ದೇ ಸ್ಥಿತಿ ಈ ಸಲವೂ ಕಂಡುಬಂದಿದೆ. ಆದರೆ, ಕಳೆದ ಸಲ ಬಿಜೆಪಿಗೆ ಇದ್ದಂತಹ ಅನುಕೂಲಕರ ವಾತಾವರಣ ಈ ಸಲ ಕಂಡುಬಂದಿಲ್ಲ. ಮುಖ್ಯವಾಗಿ ಸಂಜಯ ಪಾಟೀಲ ಅವರ ಬಗ್ಗೆ ಅಸಮಾಧಾನ ಕಂಡುಬಂದಿದೆ.

2008ರಲ್ಲಿ ಮೊದಲ ಬಾರಿ ಗೆದ್ದಿದ್ದ ಸಂಜಯ ಪಾಟೀಲ ಉತ್ತಮ ಕೆಲಸ ಮಾಡಿದ್ದರು. ಆದರೆ, 2013ರಲ್ಲಿ ಗೆದ್ದ ನಂತರ ಅಪರೂಪವಾಗಿಬಿಟ್ಟರು. ಅಭಿವೃದ್ಧಿ ಕೆಲಸಗಳು ಅಷ್ಟಾಗಿ ನಡೆಯಲಿಲ್ಲ. ಆಗಾಗ ಬಂದು ಹೋಗುತ್ತಿದ್ದ ಶಾಸಕರು, ಹಿಂದುತ್ವ ಕೆಣಕುವ ಮೂಲಕ ಆ ವಿಷಯವನ್ನು ಜೀವಂತ ಇಡಲು ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ಅಲ್ಲಿನ ಜನರು.

ADVERTISEMENT

ಕಳೆದ ಸಲ ಸೋತಿದ್ದರೂ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರವನ್ನು ಬಿಡಲಿಲ್ಲ. ಸತತ ಐದು ವರ್ಷಗಳ ಕಾಲ ಕ್ಷೇತ್ರದ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿರುವುದನ್ನು ಸಮರ್ಪಕವಾಗಿ ಬಳಸಿಕೊಂಡ ಅವರು, ಹಲವು ಕಾಮಗಾರಿಗಳನ್ನು ಮಾಡಿಸಿದರು. ಕೋಟ್ಯಾಂತರ ರೂಪಾಯಿ ಅನುದಾನ ತಂದರು.

ಸರ್ಕಾರದ ಮಟ್ಟದಲ್ಲಿ ಅಲ್ಲದೇ, ವೈಯಕ್ತಿಕವಾಗಿಯೂ ಲಕ್ಷ್ಮಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕುಕ್ಕರ್‌, ಸೀರೆ ವಿತರಿಸಿದ್ದಾರೆ. ಮಹಿಳೆಯರ ಜೊತೆ ಹೋಳಿ ಬಣ್ಣ ಆಡಿದ್ದಾರೆ. ಸೈನಿಕರಿಗೆ– ರೈತರಿಗೆ ಸನ್ಮಾನ ಮಾಡಿದ್ದಾರೆ. ಹಣದ ಹೊಳೆಯೇ ಹರಿಸಿದ್ದಾರೆ ಎಂದು ಜನರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಮತದಾರರ ಒಲವು ಪಡೆದುಕೊಳ್ಳಲು ಅವರು ಯಶಸ್ವಿಯಾಗಿದ್ದರೂ, ತಮ್ಮದೇ ಪಕ್ಷದ ಕೆಲವು ನಾಯಕರ ವಿರೋಧ ಕಟ್ಟಿಕೊಂಡಿರುವುದು ಮುಳುವಾಗುವ ಸಾಧ್ಯತೆ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದ ಕೆಲವು ಮುಖಂಡರು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಇನ್ನುಳಿದ ಕೆಲವರು ಬೇರೆ ಪಕ್ಷಗಳ ಅಭ್ಯರ್ಥಿಗಳ ಪರ ಪರೋಕ್ಷವಾಗಿ ಪ್ರಚಾರ ನಡೆಸಿರುವುದು ಮಗ್ಗಲು ಮುಳ್ಳಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಿಂದ ಹೊರಬಂದ ಶಿವನಗೌಡ ಪಾಟೀಲ ಅವರು ಜೆಡಿಎಸ್‌ನಿಂದ ಕಣಕ್ಕಿಳಿದಿರುವುದು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವ ಮೋಹನ ಮೋರೆ ಅವರು ಪಕ್ಷೇತರರಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್ಸಿನ ಮತಗಳನ್ನು ಒಡೆಯುವ ಸಾಧ್ಯತೆ ಇದೆ. ಇದು ಲಕ್ಷ್ಮಿ ಹೆಬ್ಬಾಳಕರ ಅವರಿಗೆ ತೊಡಕಾಗುವ ಸಂಭವವಿದೆ.
**
ಎಂಇಎಸ್‌ ಒಡಕು
ಈ ಭಾಗದಲ್ಲಿ ಮರಾಠಿ ಮತದಾರರ ಪ್ರಭಾವ ಹೆಚ್ಚಾಗಿದ್ದು, ಎಂಇಎಸ್‌ ಬೇರುಮಟ್ಟದಲ್ಲಿ ಬಲಿಷ್ಠವಾಗಿದೆ. ಆದರೆ, ಎಂಇಎಸ್‌ನಲ್ಲಿ ಒಡಕು ಮೂಡಿದ್ದು, ಒಂದು ಗುಂಪಿನಿಂದ ಮನೋಹರ ಕಿಣೇಕರ ಸ್ಪರ್ಧಿಸಿದ್ದರೆ, ಇನ್ನೊಂದು ಗುಂಪಿನಿಂದ ಮೋಹನ ಬೆಳಗುಂದಕರ ಸ್ಪರ್ಧಿಸಿದ್ದಾರೆ. ಬೆಳಗಾವಿ ದಕ್ಷಿಣದಿಂದ ಒಂದು ಬಾರಿ ಶಾಸಕರಾಗಿದ್ದ ಮನೋಹರ ಕಿಣೇಕರ ಬಗ್ಗೆ ಜನರಲ್ಲಿ ಅನುಕಂಪವಿದ್ದು, ಕಾಂಗ್ರೆಸ್‌, ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.