ADVERTISEMENT

ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 10:10 IST
Last Updated 21 ಜನವರಿ 2011, 10:10 IST

ಅಥಣಿ: ಪಟ್ಟಣ ವ್ಯಾಪ್ತಿಯಲ್ಲಿ ತೀರ ಹದಗೆಟ್ಟು ಹೋಗಿರುವ ಹಲ್ಯಾಳ ರಸ್ತೆಯನ್ನು ಕೂಡಲೇ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ನೂರಾರು ಕಾರ್ಯಕರ್ತರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡ ಅನಿಲ ಸುಣಧೋಳಿ, ಹದಗೆಟ್ಟು ಹೋಗಿರುವ ರಸ್ತೆಯಿಂದ ವಿಪರೀತ ದೂಳು ಏಳುತ್ತಿದ್ದು, ಇದರಿಂದ ಈ ರಸ್ತೆ ಅಕ್ಕಪಕ್ಕದಲ್ಲಿ ಬರುವ ಅನೇಕ ಅಂಗಡಿಗಳ ಮಾಲೀಕರು ಅಸ್ತಮಾ ರೋಗದಿಂದ ಬಳಲುವಂತಾಗಿದೆ ಎಂದರು.

ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜತ್ತ-ಜಾಂಬೋಟಿ ರಸ್ತೆ ಯನ್ನು ಅಭಿವೃದ್ಧಿ ಪಡಿಸಲು 52 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಒಂದು ವರ್ಷವಾದರೂ ಇಲಾಖೆ ಕೇವಲ ತೇಪೆ ಹಚ್ಚುವ ಕೆಲಸವನ್ನು ಮಾತ್ರ ಮಾಡುವುದರಲ್ಲಿ ಮಗ್ನ ವಾಗಿದೆ ಎಂದು ಟೀಕಿಸಿದರು.

ನಂತರ ಪ್ರತಿಭಟನಾಕಾರರು ಉಪ ತಹಸೀಲ್ದಾರ ಎಸ್.ಎಸ್. ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು. ಒಂದು ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸಂತೋಷ ಬೊಮ್ಮಣ್ಣವರ, ವಿನಯ ಪಾಟೀಲ, ಸುನೀಲ ಖೋತ, ಸದಾಶಿವ ಶೆಟ್ಟಿ, ಶಿವಪ್ರಸನ್ನ ಹಿರೇಮಠ, ಸಿದ್ಧಾರ್ಥ ಸಿಂಗೆ, ವಿಜಯ ಮಾಳಿ, ಮಿತೇಶ ಪಟ್ಟಣ, ನಿಯಾಜ ಬಿರಾದಾರ, ಇಮ್ರಾನ ದ್ರಾಕ್ಷಿ, ವಿಜಯ ಹುದ್ದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.