ADVERTISEMENT

ದುರ್ವಾಸನೆ ಬೀರುತ್ತಿರುವ ಹುಕ್ಕೇರಿ ಕೆರೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:25 IST
Last Updated 19 ಸೆಪ್ಟೆಂಬರ್ 2011, 8:25 IST

ಹುಕ್ಕೇರಿ: ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದರು ಎಂಬ ಮಾತಿದೆ. ಆದರೆ ಚಿತ್ರದಲ್ಲಿರುವ ಕೆರೆ ನೋಡಲಿಕ್ಕೆ ಅಂದ-ಚಂದವಾಗಿದ್ದರೂ ಅದು ಹಾಗಿಲ್ಲ. ಏಕೆಂದರೆ ಅದರ ಸ್ಥಿತಿ-ಗತಿ ಕೇಳುವವರೇ ಇಲ್ಲ.|

ಪಟ್ಟಣದ ಗಾಂಧಿ ಬಡಾವಣೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಪಕ್ಕ ಎಲಿ ಮುನ್ನೋಳಿ ರಸ್ತೆಗೆ ಅಂಟಿಕೊಂಡು ಒಂದು ಕೆರೆ ಇದೆ. ಕೆರೆಯು ಖಾಸಗಿ ಒಡೆತನಕ್ಕೆ ಸೇರಿದೆ. ಕೆರೆಯು ದಿನದಿಂದ ದಿನಕ್ಕೆ ಕೊಳಚೆ ಗುಂಡಿಯಾಗಿ ಪರಿವರ್ತನೆಗೊಂಡಿದೆ.

ಗಟಾರು ನೀರು ಈ ಕೆರೆಗೆ ಸೇರುತ್ತಿದೆ.  ಸುತ್ತಮುತ್ತಲಿನ  ತ್ಯಾಜ್ಯ ವಸ್ತುಗಳೆಲ್ಲವೂ ಇಲ್ಲಿಗೆ ಬಂದು ಸೇರುತ್ತವೆ. ಸತ್ತ ನಾಯಿ ಹಂದಿಗಳನ್ನು ಇಲ್ಲಿಯೆ ಎಸೆದು ಹೋಗುತ್ತಾರೆ. ಇಷ್ಟೆ ಆದರೆ ಸಾಕಾಗಿತ್ತು. ಆದರೆ ಪ್ರತಿ ವರ್ಷ ಗಣೇಶ ವಿಸರ್ಜನೆ ಸಮಯದಲ್ಲಿ ಗಣೇಶ ಮೂರ್ತಿ ಮತ್ತು ಪೂಜಾ ಸಾಮಗ್ರಿಗಳನ್ನು ಕೆರೆಯಲ್ಲಿ  ಎಸೆದು ಹೋಗುತ್ತಾರೆ.

ಈ ಕೆರೆಯ ಸುತ್ತ ಬಳ್ಳಾರಿ ಜಾಲಿ ಬೆಳೆದಿರುವುದರಿಂದ ಜನರು ಬೆಳಗಿನ ಜಾವ ಇಲ್ಲಿಯೆ ಬಹಿರ್ದೆಸೆಗೆ ಹೋಗುತ್ತಾರೆ. ಹೀಗಾಗಿ ಕೆರೆಯ ಪ್ರದೇಶ ಮತ್ತಷ್ಟು ಮಲಿನಗೊಂಡಿದೆ. ಇದು ಹಂದಿಗಳ ತಾಣವಾಗಿ ರೂಪುಗೊಂಡಿದೆ.

ತನ್ನ ಒಡಲಿನಲ್ಲಿ ಇಷ್ಟೆಲ್ಲಾ ಸೇರಿಸಿಕೊಂಡು ಕೆರೆ `ಸುವಾಸನೆ~ ಬೀರೆಂದರೆ ಹೇಗೆ ಸಾಧ್ಯ. ಕೆರೆಯ ಸುತ್ತಮುತ್ತ ತಿರುಗಾಡಿದರೆ ಸಹಿಸಲಾರದ ದುರ್ನಾತವಿದೆ. ಅಕ್ಕಪಕ್ಕದವರಿಗಂತೂ ಸಹಿಸಲಾರದ ಸ್ಥಿತಿ. ನೀರು ಮಲಿನಗೊಂಡಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿದೆ ಎಂದು ಕೆರೆಯ ಪಕ್ಕ ವಾಸಿಸುತ್ತಿರುವ ಸಿದ್ದಲಿಂಗಪ್ಪ ದೇವರನಾವದಗಿ ಮತ್ತು ಈಶ್ವರ ಕಿವಟಿ ಹೇಳುತ್ತಾರೆ.

ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಬಂದೊದಗಿದೆ. ಇದರ ಬಗ್ಗೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.