ADVERTISEMENT

ಧರ್ಮ ರಕ್ಷಾ ನಿಧಿ ಕಾರ್ಯಕ್ರಮದಲ್ಲಿ ಪ್ರವೀಣ ತೊಗಾಡಿಯಾ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 6:45 IST
Last Updated 21 ಮಾರ್ಚ್ 2012, 6:45 IST

ಬೆಳಗಾವಿ: `ಮುಸ್ಲಿಂ ವೋಟ್‌ಬ್ಯಾಂಕ್ ರಾಜಕಾರಣ ನಡೆಸುತ್ತಿರುವ ನಾಯಕರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರಿ~ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ ತೊಗಾಡಿಯಾ ಸಲಹೆ ನೀಡಿದರು.
ನಗರದ ಗುಜರಾತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಧರ್ಮ ರಕ್ಷಾ ನಿಧಿ ಕಾರ್ಯಕ್ರಮ~ದಲ್ಲಿ ಮುಖ್ಯ ಭಾಷಣ ಮಾಡಿದ ಅವರು, `ಮುಸ್ಲಿಂ ವೋಟ್‌ಬ್ಯಾಂಕ್ ರಾಜಕಾರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ವಿವಿಧ ಪಕ್ಷಗಳ ನಾಯಕರು ಹಿಂದೂ ವಿರೋಧಿ ಕಾನೂನು ರೂಪಿಸುತ್ತಿದ್ದಾರೆ.
 
ಭಾರತದಲ್ಲಿ ಹಿಂದೂಗಳು ಉಳಿಯದಿದ್ದರೆ ನಮ್ಮ ಸಂಸ್ಕೃತಿ, ಜಾತಿಯೂ ಉಳಿಯುವುದಿಲ್ಲ. ಹೀಗಾಗಿ ವೋಟ್‌ಬ್ಯಾಂಕ್ ರಾಜಕಾರಣ ನಡೆಸುವ ನಾಯಕರು ನಮ್ಮ ಜಾತಿಯವರು, ಧರ್ಮದವರಾಗಿದ್ದರೂ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು~ ಎಂದು ಹೇಳಿದರು.

`ಮುಸ್ಲಿಮರು ಜನಸಂಖ್ಯಾ ಧರ್ಮಯುದ್ಧ (ಪೊಪ್ಯುಲೇಶನ್ ಜಿಹಾದ್) ಆರಂಭಿಸಿದ್ದಾರೆ. ದೇಶದಲ್ಲಿ ಕ್ರಮೇಣ ತಮ್ಮ ಜನಸಂಖ್ಯೆ ಹೆಚ್ಚಸಿಕೊಳ್ಳುವ ಮೂಲಕ ಹೋರಾಟ ನಡೆಸದೇ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದಾರೆ. ಮಲೇಷಿಯಾದಲ್ಲೂ ಹೀಗೆ ಮಾಡಿ ಸಂವಿಧಾನವನ್ನು ಬದಲಾಯಿಸಿದ್ದಾರೆ~ ಎಂದು ತೊಗಾಡಿಯಾ ಆರೋಪಿಸಿದರು.

`ಹಿಂದೂಗಳೆಲ್ಲ ಸಂಘಟನೆ ಹೊಂದುವ ಮೂಲಕ ಧ್ವನಿ ಎತ್ತಬೇಕು. ಸಂವಿಧಾನವನ್ನು ಬದಲಾಯಿಸಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು. ಹಿಂದೂಯೇತರ ಜನವರಿಗೆ ಅಧಿಕಾರದಲ್ಲಿ ಇರಲು ಅವಕಾಶ ಕಲ್ಪಿಸಬಾರದು~ ಎಂದ ತೊಗಾಡಿಯಾ, `ಸದ್ಯ ಜಾತ್ಯತೀತತೆ ಏಕ ಮುಖವಾಗಿರುವುದರಿಂದಲೇ ಹಿಂದೂಗಳಿಗೆ ಈ ದುಸ್ಥಿತಿ ಒದಗಿಬಂದಿದೆ~ ಎಂದರು.

“ಪ್ರತಿ ಹಳ್ಳಿಗಳಲ್ಲೂ ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ಬಲಪಡಿಸಬೇಕು. ಯಾವುದೋ ಒಂದು ಹಳ್ಳಿಯಲ್ಲಿ ಹಿಂದೂ ಮೇಲೆ ದಾಳಿ ನಡೆದರೆ, ದೇಶದ 6 ಲಕ್ಷ ಹಳ್ಳಿಗಳಲ್ಲಿ ಉತ್ತರ ನೀಡುವಂತಾಗಬೇಕು. ಧರ್ಮ ರಕ್ಷಣೆ ಮಾಡುತ್ತಿರುವ ವಿಎಚ್‌ಪಿಗೆ ಹಿಂದೂಗಳು ಉದಾರವಾಗಿ ದೇಣಿಗೆ ನೀಡಬೇಕು” ಎಂದು ಮನವಿ ಮಾಡಿದರು.

“ಹಿಂದೂಗಳ ಸಮಸ್ಯೆಗಳಿಗೆ ಸ್ಪಂದಿಸಲು `ಹಿಂದೂ ಹೆಲ್ಪ್‌ಲೈನ್~ (ದೂ: 020- 66103300) ಆರಂಭಿಸಲಾಗಿದೆ. ದೇಶದಾದ್ಯಂತ 25 ಸಾವಿರ ವಿಎಚ್‌ಪಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಮತಾಂತರಗೊಂಡಿದ್ದ 5 ಲಕ್ಷ ಕ್ರಿಶ್ಚನ್ನರು ಹಾಗೂ 1.5 ಲಕ್ಷ ಮುಸ್ಲಿಮರು ವಿಎಚ್‌ಪಿ ಸಂಘಟನೆಯ ಕಾರ್ಯದಿಂದ ಪ್ರೇರಣೆಗೊಂಡು ಪುನಃ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ” ಎಂದು ಹೇಳಿದರು.

ಎಸ್.ಎಂ. ಕುಲಕರ್ಣಿ ಮಾತನಾಡಿ, `ಹಿಂದೂ ಸಮಾಜ ಉಳಿದಾಗ ವಿಶ್ವವೇ ಉಳಿಯುತ್ತದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ಧರ್ಮ ರಕ್ಷಣೆ ಮಾಡಲು ಕಾಣಿಕೆ  ನೀಡಬೇಕು~ ಎಂದು ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಸುರೇಶ ಹುಂದರೆ ವಹಿಸಿದ್ದರು. ವಿಎಚ್‌ಪಿ ನಗರ ಘಟಕದ ಅಧ್ಯಕ್ಷ ವಿಠ್ಠಲ ನಾರ್ವೆಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜನಿ ಪ್ರಾರ್ಥನೆ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.