ADVERTISEMENT

ನಗರ ಅಭಿವೃದ್ಧಿಗೆ ಆಗ್ರಹಿಸಿ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 10:15 IST
Last Updated 24 ಫೆಬ್ರುವರಿ 2011, 10:15 IST

ಬೆಳಗಾವಿ: ನಗರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 5,358 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಬುಧವಾರ ಬೃಹತ್ ಮಾನವ ಸರಪಳಿ ರಚಿಸಲಾಯಿತು. ನಗರದ ಮಚ್ಚೆ ಪ್ರದೇಶದಿಂದ ಕೆಎಲ್‌ಇ ಬಳಿಯ ರಾಷ್ಟ್ರೀಯ ಹೆದ್ದಾರಿ ತನಕ ಸುಮಾರು 13ಕಿಮೀ ಉದ್ದಕ್ಕೆ ಮಾನವ ಸರಪಳಿ ರಚಿಸಲಾಯಿತು. ಈ ಸರಪಳಿಯಲ್ಲಿ ನಗರದ ನಾಗರಿಕರು, ವಿವಿಧ ಇಲಾಖೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುಮಾರು 13ಸಾವಿರಕ್ಕೂ ಅಧಿಕ ಜನರು ಈ ಸರಪಳಿ ಜಾಥಾದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಮಹಾತ್ಮಾ ಗಾಂಧಿ ಅವರು ಬೆಳಗಾವಿ ನಗರದಲ್ಲಿ 1924ರಲ್ಲಿ ಅಧಿವೇಶನ ನಡೆಸಿದ್ದರು. ಅದನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಈ ಅನುದಾನದ ಶೇ 10ರಷ್ಟನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ಪ್ರವೃತ್ತವಾಗಬೇಕು ಎಂದು ಮಾನವ ಸರಪಳಿಯ ನೇತೃತ್ವವಹಿಸಿದ್ದ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಪಿರೋಜ ಸೇಠ, ಸಂಜಯ ಪಾಟೀಲ, ಮೇಯರ್ ಎನ್.ಬಿ.ನಿರ್ವಾಣಿ, ನಾಗನೂರು ಮಠದ ಸಿದ್ದರಾಮ ಸ್ವಾಮೀಜಿ ಮತ್ತಿತರರು ಮನವಿ ಮಾಡಿಕೊಂಡರು.

ಮನವಿ: ಬರುವ ಅಧಿವೇಶನ ಕಾಲಕ್ಕೆ ನೂರಕ್ಕೂ ಅಧಿಕ ಶಾಸಕರ ಸಹಿ ಪಡೆದು ಮನವಿ ಪತ್ರವನ್ನು ಪ್ರಧಾನಿ ಅವರಿಗೆ ಕಳಿಸಿಕೊಡಲಾಗುತ್ತದೆ. ಇದರ ಜತೆಗೆ ಸ್ಥಳೀಯವಾಗಿ ಕೇಂದ್ರಕ್ಕೆ ಪತ್ರ ಬರೆಯುವ ಚಳವಳಿ ಮೊದಲಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. 2020 ಇಸ್ವಿ ವೇಳೆಗೆ ಬೆಳಗಾವಿ ನಗರವನ್ನು ಮಾದರಿಯಾಗಿ ರೂಪಿಸುವ ಉದ್ದೇಶವಿದೆ ಎಂದು ಶಾಸಯ ಅಭಯ ಪಾಟೀಲ ಈ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.