ADVERTISEMENT

ನಾಲ್ಕು ಮನೆ ಭಸ್ಮ, ವೃದ್ಧೆ ಸಜೀವ ದಹನ

ಪ್ರತ್ಯೇಕ ಮೂರು ಬೆಂಕಿ ಆಕಸ್ಮಿಕ: ಕರಗಿದ 57 ತೊಲೆ ಚಿನ್ನಾಭರಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:54 IST
Last Updated 18 ಡಿಸೆಂಬರ್ 2013, 4:54 IST

ಅಥಣಿ: ತಾಲ್ಲೂಕಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಕಳೆದೆರಡು ದಿನಗಳಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ವೃದ್ಧೆಯೊಬ್ಬರು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ಮೌಲ್ಯದ ನಗನಾಣ್ಯ ಭಸ್ಮವಾಗಿವೆ.

ಮೊಳವಾಡದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ದುರಂತದಲ್ಲಿ ದುಗ್ಗೆ ಎಂಬ ಕುಟುಂಬಕ್ಕೆ ಸೇರಿದ ನಾಲ್ಕು ಮನೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ₨ 70 ಸಾವಿರ ನಗದು ಮತ್ತು ಸುಮಾರು 1.5 ಲಕ್ಷ ಮೌಲ್ಯದ 57 ತೊಲೆ  ಬಂಗಾರ ಕರಗಿದೆ. ದುಗ್ಗೆ ಕುಟುಂಬದ ಭರತ, ಶ್ರೀಪಾಲ, ಅಪ್ಪಾಸಾಬ ಮತ್ತು ಶ್ರೀಕಾಂತ ಎಂಬುವರಿಗೆ ಸೇರಿದ ಮನೆಗಳಿಗೆ ಶಾರ್ಟ್ ಸರ್ಕಿಟ್‌ನಿಂದ ಹೊತ್ತಿಕೊಂಡ ಕಿಡಿಯಿಂದ ಬೆಂಕಿ ಹತ್ತಿಕೊಂಡಿದೆ.

ಮನೆಗಳಿಗೆ ಬೆಂಕಿ ಆವರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಕುಟುಂಬದ ಸದಸ್ಯರು ಹೊರಗೋಡಿ ಬಂದಿದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ, ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಕೆಲವರು ನೆರವಿಗಾಗಿ ಉಗಾರ ಸಕ್ಕರೆ ಕಾರ್ಖಾನೆಗೆ ಮಾಹಿತಿ ರವಾನಿಸಿದರೂ ಕೂಡ ಅಲ್ಲಿಂದ ಅಗ್ನಿ ಶಾಮಕ ವಾಹನ ಬರಲು ವಿಳಂಬವಾದ ಪರಿಣಾಮ ಬೆಂಕಿ ಪಕ್ಕದ ಮನೆಗಳಿಗೂ ಹೊತ್ತಿಕೊಂಡಿತು. ನಾಲ್ಕು ಮನೆಗಳು ಬೆಂಕಿಗೆ ಆಹುತಿಯಾದ ನಂತರ  ಅಥಣಿಯಿಂದ ಅಗ್ನಿ ಶಾಮಕ ವಾಹನ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಕರಣ ಕಾಗವಾಡ ಠಾಣೆಯಲ್ಲಿ ದಾಖಲಾಗಿದೆ.

ವೃದ್ಧೆ ಸಾವು: ತಾಲ್ಲೂಕಿನ ಶೇಡಬಾಳ ರೈಲು ನಿಲ್ದಾಣದ ಬಳಿ ಇರುವ ಗುಡಿಸಲುವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಮುತ್ತವ್ವಾ ಗುಡೆ (80) ಎಂಬ ಅನಾಥವೃದ್ಧೆ ಸೋಮವಾರ ಸಾವನ್ನಪ್ಪಿದ್ದಾರೆ. ಮೊದಲು ಗುಡಿಸಲಿಗೆ ಬೆಂಕಿ ಬಿದ್ದಾಗ ಎದ್ದು ಹೊರ ಓಡಿ ಬಂದಿದ್ದ ವೃದ್ಧೆ ನಂತರ ಗುಡಿಸಲಿನಲ್ಲಿ ಇಟ್ಟಿದ್ದ ಹಣದ ಡಬ್ಬಿ ನೆನಪಾಗಿ ಮತ್ತೇ ಅದನ್ನು ತರಲು ಒಳ ಓಡಿಹೋಗಿದ್ದಾರ. ಆಗ ಗುಡಿಸಲನ್ನು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡ ಪರಿಣಾಮ ಒಂಟಿ ವೃದ್ಧೆ  ಹೊರಬರಲಾಗದೆ ಚಡಪಡಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಅಕ್ಕಪಕ್ಕದವರು ತಕ್ಷಣ ವೃದ್ಧೆಯನ್ನು ಮಿರಜನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಕೆ ಮೃತಪಟ್ಟಿದ್ದಾರೆ. ಪ್ರಕರಣ ಕಾಗವಾಡ ಠಾಣೆಯಲ್ಲಿ ದಾಖಲಾಗಿದೆ. 

ಗುಡಿಸಲಿಗೆ ಬೆಂಕಿ: ತಾಲ್ಲೂಕಿನ ಕೋಹಳ್ಳಿ ಗ್ರಾಮದ ಹೊರವಲಯದ ಬಿರಾದಾರ ವಸತಿ ತೋಟದಲ್ಲಿರುವ ಗುಡಿಸಲಿಗೆ ಸೋಮವಾರ ಬೆಳಗಿನ ಜಾವ ಬೆಂಕಿ ತಗುಲಿದ ಪರಿಣಾಮ ಚಿನ್ನ ಮತ್ತು ದಿನಬಳಕೆ ವಸ್ತುಗಳು ಸೇರಿದಂತೆ ಸುಮಾರು ₨1.11 ಲಕ್ಷ ಮೌಲ್ಯದ ಆಸ್ತಿ ಸುಟ್ಟಿದೆ. ಸಿದ್ದಪ್ಪ ನಾಗಣಿ ಎಂಬುವರಿಗೆ ಸೇರಿದ ಈ ಗುಡಿಸಲಿನಲ್ಲಿ ಬೆಂಕಿ ಬಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಪ್ರಕರಣ ಐಗಳಿ ಠಾಣೆಯಲ್ಲಿ ದಾಖಲಾಗಿದೆ. 

ಆತ್ಮಹತ್ಯೆ: ಮದ್ಯದ ಅಮಲಿನಲ್ಲಿ ವಿವಾಹಿತ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಜುಗೂಳ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಮುಬಾರಕ್‌ ಸುತಾಬಾ ಮುಜಾವರ (40) ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಕೆಲ ದಿನಗಳಿಂದ ಯಾವಾಗಲೂ ನಶೆಯಲ್ಲಿರುತ್ತಿದ್ದ, ಮಾಡಿಕೊಂಡ ಸಾಲ ತೀರಿಸಲಾಗದೆ ಈತ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಕಾಗವಾಡ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.