ADVERTISEMENT

ನೀರು ಬಿಡಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 7:08 IST
Last Updated 4 ಏಪ್ರಿಲ್ 2013, 7:08 IST

ಚಿಕ್ಕೋಡಿ: ಚಿಕ್ಕೋಡಿ ಉಪ ಕಾಲುವೆಯ ಮೂಲಕ ಕೆರೂರ ಹಾಗೂ ಹಿರೇಕೋಡಿ ಗ್ರಾಮದವರೆಗೆ ನೀರು ಹರಿಸುವಂತೆ ಒತ್ತಾಯಿಸಿ ತಾ.ಪಂ ಸದಸ್ಯ ವಿಕ್ರಮ ಬನಗೆ ನೇತೃತ್ವದಲ್ಲಿ ಕೃಷಿಕರು ಚಿಕ್ಕೋಡಿ ತಹಶೀಲ್ದಾರ ಕಚೇರಿ ಮುಂದೆ ಬುಧವಾರ  ಧರಣಿ ಸತ್ಯಾಗ್ರಹ ನಡೆಸಿದರು.

ಮಾ. 26ರಿಂದ ಚಿಕ್ಕೋಡಿ ಉಪ ಕಾಲುವೆಗೆ ನೀರು ಹರಿಸಲಾಗಿದೆ. ಆದರೆ, ಇದುವರೆಗೆ ಹಿರೇಕೋಡಿಯವರೆಗೆ ನೀರು ತಲುಪಿಲ್ಲ. ರಾಯ ಬಾಗ ತಾಲ್ಲೂಕಿನ ಮೆಖಳಿಕಿ ಗೇಟ್‌ವರೆಗೆ ಮಾತ್ರ ನೀರು ಬಂದಿದ್ದು, ಅನಧಿಕೃತವಾಗಿ ಕಾಲುವೆಗೆ ಪಂಪಸೆಟ್‌ಗಳನ್ನು ಅಳವಡಿಸಿ ನೀರು ಎತ್ತಲಾಗುತ್ತಿದೆ.

ಇದರಿಂದ ಮುಂದಿನ ಗ್ರಾಮಗಳಿಗೆ ನೀರು ಮುಂದೆ ಬರುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಡಾ.ರುದ್ರೇಶ ಘಾಳಿಹಾಗೂ ತಹಶೀಲ್ದಾರ ರಾಜ ಶೇಖರ ಡಂಬಳ ಅವರನ್ನು,     ಕೇರೂರ ಹಾಗೂ ಹಿರೇಕೋಡಿ ಗ್ರಾಮದಲ್ಲಿ  ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಅಭಾವ ಹೆಚ್ಚುತ್ತಿದ್ದು, ಕೂಡಲೇ ಕಾಲುವೆ ಮೂಲಕ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಶಂಕರ ದ್ರಾಕ್ಷೆ, ಅಪ್ಪಾಸಾಹೇಬ ಗಾವಡೆ, ಶೀತಲ ಬಾಳಿಕಾಯಿ, ಮಲ್ಲಪ್ಪ ಚೌಗಲಾ, ವರ್ಧಮಾನ ಸದಲಗೆ, ಶೇಖರ ಚೌಗಲೆ, ಬಾಲಚಂದ್ರ ಮೋಹಿತೆ, ಯಲ್ಲಪ್ಪ ದ್ರಾಕ್ಷೆ,    ಜಗದೀಶ ಚೌಗಲೆ ಸೇರಿದಂತೆ ಕೆರೂರ ಹಾಗೂ ಹಿರೇಕೋಡಿ  ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.