ADVERTISEMENT

ನೇರ್ಲೆಕರ ಚಿಕ್ಕೋಡಿ ಪುರಸಭೆ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:28 IST
Last Updated 12 ಸೆಪ್ಟೆಂಬರ್ 2013, 6:28 IST

ಚಿಕ್ಕೋಡಿ: ಇಲ್ಲಿನ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಪರಿವರ್ತನ ಪ್ಯಾನಲ್‌ನ ಸದಸ್ಯರಾದ ನರೇಂದ್ರ ರಾಜಾರಾಮ ನೇರ್ಲೆಕರ ಹಾಗೂ ಉಪಾಧ್ಯಕ್ಷರಾಗಿ ಗುಲಾಬ್‌ಹುಸೇನ್‌ ಅಬ್ದುಲ್‌ರಹೀಂ  ಬಾಗವಾನ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ಪಟ್ಟಣದ ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಮೀಸಲು ನಿಗದಿಯಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ನರೇಂದ್ರ ನೇರ್ಲೆಕರ ಮತ್ತು ಉಪಾಧ್ಯಕ್ಷರಾಗಿ ಗುಲಾಬ್‌­ಹುಸೇನ ಬಾಗವಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ­ವಣಾ­ಧಿಕಾರಿಯಾಗಿದ್ದ ತಹಶೀಲ್ದಾರ್‌ ರಾಜಶೇಖರ ಡಂಬಳ ಘೋಷಿಸಿದರು.

ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಸಚಿವ ಪ್ರಕಾಶ ಹುಕ್ಕೇರಿ ಅವರ ಮಾರ್ಗದರ್ಶ­ನ­ದಲ್ಲಿ ನಡೆಯಿತು. ಅಧ್ಯಕ್ಷರಾಗಿ ಆಯ್ಕೆ­ಯಾದ ಬಳಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನರೇಂದ್ರ ನೇರ್ಲೆಕರ, ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಅವಿರೋಧವಾಗಿ ಆಯ್ಕೆಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಪುರಸಭೆ ಎಲ್ಲ 23 ಸದಸ್ಯರನ್ನು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಯೋಜನೆ­ಗಳನ್ನು ಸದ್ಬಳಕೆ ಮಾಡಿ ಪಟ್ಟಣದ ಸಮಗ್ರ ಅಭಿವೃದ್ಧಿಗೊಳಿಸಲು ತಮ್ಮ ಅಧಿಕಾರಾವಧಿಯಲ್ಲಿ ಶ್ರಮಿಸುವುದಾಗಿ ತಿಳಿಸಿದರು.

ಪಟ್ಟಣದಲ್ಲಿ ನಿರಂತರವಾಗಿ ಕುಡಿಯುವ ನೀರು ಸರಬರಾಜು ಮಾಡಲು ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.

ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆಗೊಳಿಸಲು ಶ್ರಮಿಸಿದ ಎಲ್ಲರಿಗೂ ಗುಲಾಬ್‌ಹುಸೇನ್‌ ಬಾಗವಾನ ಕೃತಜ್ಞತೆ ಸಲ್ಲಿಸಿದರು.

ಮುಖ್ಯಾಧಿಕಾರಿ ಮಹಾವೀರ ಬೋರನ್ನವರ ಸ್ವಾಗತಿಸಿದರು. ಪುರಸಭೆ ಸದಸ್ಯರಾದ ಪಿ.ಐ. ಕೋರೆ, ಶಾಮ ರೇವಡೆ, ರಂಜೀತ ಸಂಗ್ರೋಳೆ, ಸಂದೀಪ ಶೇರಖಾನೆ, ವಿನೋದ ಮಾಳಗೆ, ರವಿ ಪಾಟೀಲ, ನಾಗೇಶ ಕಿವಡ, ಸುಲಾ ಮಾನೆ, ಆರತಿ ಮುಂಡೆ, ಪರವೀನ್ ಕಮತೆ, ರಾಜಶ್ರೀ ಮಾಳಿ,  ರಸೀದಾ ಕಲೇಗಾರ, ನಳಿನಿ ಕಾಂಬಳೆ, ಪುರಸಭೆ ಮಾಜಿ ಸದಸ್ಯ ರಾಮಾ ಮಾನೆ, ರವಿ ಮಾಳಿ, ಮುದ್ದುಸರ್‌ ಜಮಾದಾರ, ಸತೀಶ ಕುಲಕರ್ಣಿ, ಸಾಬಿರ ಜಮಾದಾರ, ಶಿರೀಷ್ ಮೆಹತಾ  ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT