ADVERTISEMENT

ಪಕ್ಷ ವಿರೋಧಿ ಚಟುವಟಿಕೆ ನಡೆದಿಲ್ಲ

18 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು: ಸಂಸದ ಅಂಗಡಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 7:45 IST
Last Updated 22 ಮೇ 2018, 7:45 IST

ಬೆಳಗಾವಿ: ಜಿಲ್ಲೆಯ 18 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇನ್ನುಳಿದ 8 ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಸೋಲಿಗೆ ಏನು ಕಾರಣ ಎನ್ನುವುದರ ಬಗ್ಗೆ ಪರಾಮರ್ಶಿಸಲಾಗುವುದು. ಆದರೆ, ಇಲ್ಲಿ ಯಾವುದೇ ರೀತಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ನಡೆದಿಲ್ಲ ಎಂದು ಸಂಸದ ಸುರೇಶ ಅಂಗಡಿ ವಿಶ್ವಾಸದಿಂದ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿದ್ದ ಅಥಣಿಯ ಲಕ್ಷ್ಮಣ ಸವದಿ, ಬೈಲಹೊಂಗಲದ ಡಾ.ವಿಶ್ವನಾಥ ಪಾಟೀಲ, ಕಾಗವಾಡದ ರಾಜು ಕಾಗೆ ಹಾಗೂ ಬೆಳಗಾವಿ ಗ್ರಾಮೀಣದ ಸಂಜಯ ಪಾಟೀಲ ಪರಾಭವಗೊಂಡಿದ್ದಾರೆ. ಇವರಲ್ಲದೇ, ಇನ್ನುಳಿದ ಕ್ಷೇತ್ರಗಳಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಸೋಲಿಗೆ ಏನು ಕಾರಣ ಎನ್ನುವುದರ ಬಗ್ಗೆ ಪರಾಮರ್ಶೆ ಮಾಡಲಾಗುವುದು ಎಂದರು.

‘ಸದ್ಯದಲ್ಲಿಯೇ ಪಕ್ಷದ ಮುಖಂಡರ ಸಭೆ ಕರೆದು ಆತ್ಮಾವಲೋಕನ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುವಲ್ಲಿ ನಮ್ಮಿಂದ ಯಾವುದೇ ನಿರ್ಲಕ್ಷವಾಗಿಲ್ಲ. ಯಮಕನಮರಡಿಯಲ್ಲಿ ನಾನು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಚಾರ ಮಾಡಿದ್ದೇವು. ಗೋಕಾಕದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಷೋ ನಡೆಸಿದ್ದರು ಕೂಡ ಪ್ರಯೋಜನವಾಗಲಿಲ್ಲ’ ಎಂದು ಹೇಳಿದರು.

ADVERTISEMENT

‘ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷದೊಳಗೆ ಯಾವುದೇ ರೀತಿಯ ಚಟುವಟಿಕೆಗಳು ನಡೆದಿಲ್ಲ. ಆ ರೀತಿ ಪಕ್ಷ ವಿರೋಧಿ ಚಟುವಟಿಕೆಗಳು ನಡೆದಿದ್ದರೆ ಸೋತ ಅಭ್ಯರ್ಥಿಗಳಾಗಲಿ ಅಥವಾ ಆಯ್ಕೆಯಾದ ಅಭ್ಯರ್ಥಿಗಳಾಗಲಿ ಗಮನಕ್ಕೆ ತರಬಹುದು’ ಎಂದರು.

ಕಳೆದ ಬಾರಿ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌, ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ಎಂಇಎಸ್‌ ಗೆದ್ದುಕೊಂಡಿತ್ತು. ಈ ಸಲ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಸ್ಮಾರ್ಟ್‌ ಸಿಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ವಿವಿಧ ಕಾಮಗಾರಿಗಳನ್ನು ಜಾರಿಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಸಾಯಿಖಾನೆಗೆ ಅವಕಾಶ ನೀಡುವುದಿಲ್ಲ;

ಬೆಳಗಾವಿ ಉತ್ತರ ಕ್ಷೇತ್ರದಿಂದ ಮೊದಲ ಬಾರಿ ಜಯಗಳಿಸಿದ ಅನಿಲ ಬೆನಕೆ ಮಾತನಾಡಿ, ‘ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳನ್ನು ಬಂದ್‌ ಮಾಡಿಸುತ್ತೇನೆ. ಕಾನೂನುಬದ್ಧವಾಗಿ ಕೂಡ ಕಸಾಯಿಖಾನೆ ತೆರೆಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಅಭಿವೃದ್ಧಿಗೆ ಚಾಲನೆ:

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ‘ಕಳೆದ ಐದು ವರ್ಷಗಳಿಂದ ನಿಂತುಹೋಗಿದ್ದ ಅಭಿವೃದ್ಧಿ ಕಾರ್ಯಗಳಿಗೆ ಪುನಃ ಚಾಲನೆ ನೀಡಲಾಗುವುದು. ಶಿವಚರಿತ್ರೆ, ಪಾರಂಪರಿಕ ತಾಣ, ಪ್ರವಾಸಿಗರ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಬೆಳಗಾವಿಗೆ ಉದ್ಯಮಿಗಳನ್ನು ಕರೆತಂದು, ಕಾರ್ಖಾನೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಬೆಳಗಾವಿ ಮಹಾನಗರ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.