ADVERTISEMENT

ಪರಿಶಿಷ್ಟ ಮಹಿಳೆಗೆ ಮೀಸಲಿಡಲು ಒತ್ತಾಯ

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 11:15 IST
Last Updated 22 ಜೂನ್ 2013, 11:15 IST

ಬೆಳಗಾವಿ: `ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಪಾಲಿಕೆಯ ಮೇಯರ್ ಸ್ಥಾನವನ್ನು ನೀಡುವಂತೆ ಮೀಸಲಾತಿ ಘೋಷಣೆ ಮಾಡಬೇಕು' ಎಂದು ಅಖಿಲ ಭಾರತ ದಲಿತ ಯುವ ಸಂಘದ ರಾಷ್ಟ್ರೀಯ ಅಧ್ಯಕ್ಷ ಮಲ್ಲೇಶ ಚೌಗುಲೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಪಾಲಿಕೆಯಲ್ಲಿ ದಲಿತ ಸಮಾಜಕ್ಕೆ ಸೇರಿದ ಇಬ್ಬರು ಮುಖಂಡರು ಮಾತ್ರ ಮೇಯರ್ ಆಗಿದ್ದಾರೆ. ಆದರೆ, ಇಬ್ಬರು ಮುಖಂಡರನ್ನು ರಾಜಕೀಯ ಹುನ್ನಾರ ನಡೆಸಿ, ಪಾಲಿಕೆ ಸೂಪರ್‌ಸೀಡ್ ಮಾಡಿ ಕೆಲವೇ ತಿಂಗಳುಗಳಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ವಿಜಯ ಮೋರೆ 9 ತಿಂಗಳು ಹಾಗೂ ಮಂದಾ ಬಾಳೇಕುಂದ್ರಿ 4 ತಿಂಗಳು ಮಾತ್ರ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರಿಂದಾಗಿ ದಲಿತರಿಗೆ ಅನ್ಯಾಯವಾಗಿದೆ. ಆದ್ದರಿಂದ ಈ ಬಾರಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಮೇಯರ್ ಸ್ಥಾನ ಒದಗಿಸುವ ಮೂಲಕ ದಲಿತರಿಗೆ ನ್ಯಾಯ ದೊರಕಿಸಬೇಕು ಒತ್ತಾಯಿಸಿದರು.

ಇಲ್ಲಿನ ಸದಾಶಿವ ನಗರದ ವಸತಿ ನಿಲಯದಲ್ಲಿ ಜಗಜೀವನರಾಮ್ ಅವರ ಪುತ್ಥಳಿಯನ್ನು ಕಳೆದ ಎರಡು ವರ್ಷಗಳಿಂದ ಬಟ್ಟೆ ಕಟ್ಟಿ ಇಡಲಾಗಿದ್ದು, ಇನ್ನೂ ಉದ್ಘಾಟನೆ ಮಾಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವು ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆಗಸ್ಟ್ 15 ರೊಳಗಾಗಿ ಜಗಜೀವನರಾಮ್ ಅವರ ಪುತ್ಥಳಿಯನ್ನು ಉದ್ಘಾಟನೆ ಮಾಡಬೇಕು. ಇಲ್ಲದಿದ್ದರೆ ಆಗಸ್ಟ್ 15 ರಂದು ಧ್ವಜಾರೋಹಣವನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

`ಈ ಬಾರಿಯ ಪಾಲಿಕೆಯ ಚುನಾವಣೆಯಲ್ಲಿ 45ನೇ ವಾರ್ಡಿನಿಂದ ಆಯ್ಕೆಯಾಗಿರುವ ಮೈನಾಬಾಯಿ ಚೌಗುಲೆ ಎಂಬ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಮೇಯರ್ ಸ್ಥಾನವನ್ನು ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು' ಎಂದು ಪ್ರೊ. ಡಿ.ಕೆ.ಮಂತ್ರೇಶಿ ಆಗ್ರಹಿಸಿದರು.

ಇಲ್ಲಿನ ಶಿವಬಸವ ನಗರದಲ್ಲಿರುವ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ಎಂ.ಟೆಕ್ ಪದವೀಧರರಾದ ಪರಶುರಾಮ ಹಲಗೇಕರ ಎಂಬುವರು ಕಳೆದ 9 ವರ್ಷಗಳಿಂದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಚಾರ್ಯರಾಗುವ ಎಲ್ಲ ಅರ್ಹತೆಗಳನ್ನು ಅವರು ಹೊಂದಿದ್ದಾರೆ. ಆದರೆ, ಅವರಿಗೆ ಪ್ರಾಚಾರ್ಯ ಹುದ್ದೆ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

`ಬ್ಯಾಂಕ್‌ಗಳು, ವಿಮೆ ಕಂಪೆನಿಗಳು, ಪಾಲಿಕೆ, ಪ್ರಾಧಿಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಆರ್‌ಟಿಇ ಕಾಯ್ದೆಯಡಿ ವಕೀಲರನ್ನು ನೇಮಿಸಿಕೊಳ್ಳುವ ಅಧಿಕಾರವಿರುತ್ತದೆ. ಆದರೆ, ಇವುಗಳು ದಲಿತ ಸಮಾಜಕ್ಕೆ ಸೇರಿದ ವಕೀಲರನ್ನು ನೇಮಕ ಮಾಡಿಕೊಳ್ಳಲು ನಿರ್ಲಕ್ಷ್ಯ ತಾಳುತ್ತಿವೆ' ಎಂದು ವಕೀಲ ಸತೀಶ ಕರಾಳೆ ಆಪಾದಿಸಿದರು.

ಬಾಲಚಂದ್ರ ಕಾಳೆ, ಗಜಾನನ ದೇವರಮನಿ, ಸುಧಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.