ADVERTISEMENT

ಪಶುಸಂಗೋಪನೆಗೆ ಅಡ್ಡಿಯಾದ ವೈದ್ಯರ ಕೊರತೆ!

ಎಂ.ಮಹೇಶ
Published 17 ಜೂನ್ 2017, 9:07 IST
Last Updated 17 ಜೂನ್ 2017, 9:07 IST
ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಪಾಲಿಕ್ಲಿನಿಕ್‌ ಹಾಗೂ ಪಶು ಆಸ್ಪತ್ರೆ
ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಪಾಲಿಕ್ಲಿನಿಕ್‌ ಹಾಗೂ ಪಶು ಆಸ್ಪತ್ರೆ   

ಬೆಳಗಾವಿ: ರಾಜ್ಯದಲ್ಲಿಯೇ ಅತಿಹೆಚ್ಚು ಜಾನುವಾರು ಹೊಂದಿರುವ ಜಿಲ್ಲೆಯಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಕಾಡುತ್ತಿದೆ. ಶೇ 40ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ, ಹಾಲಿ ಸಿಬ್ಬಂದಿಗೆ ಕಾರ್ಯಭಾರದ ಒತ್ತಡ ಹೆಚ್ಚಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಸಕಾಲಕ್ಕೆ ಹಾಗೂ ಸಮರ್ಪಕವಾಗಿ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆಗೆ ಒಟ್ಟು 1,074 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 662 ಮಾತ್ರವೇ ಭರ್ತಿಯಾಗಿದ್ದು, 412 ಹುದ್ದೆಗಳು ಖಾಲಿ ಇವೆ. ಪಶುವೈದ್ಯರು 3–4 ಆಸ್ಪತ್ರೆಗಳಲ್ಲಿ (ನಿಗದಿಪಡಿಸಿದ ದಿನಗಳಂದು) ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿ ಜಾನುವಾರುಗಳ ಮಾಲೀಕರು ಪರದಾಡುವಂತಾಗಿದೆ.

ಇಲ್ಲಿ ಬರೋಬ್ಬರಿ 71 ಪಶುವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ! ಮಂಜೂರಾದ 11 ಅಭಿವೃದ್ಧಿ ಅಧಿಕಾರಿಗಳ ಅಧಿಕಾರಿಗಳ ಹುದ್ದೆಗಳಲ್ಲಿ ಒಂದೂ ಭರ್ತಿಯಾಗಿಲ್ಲ! ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಗಮನಹರಿಸದಿರುವುದು, ಆಸ್ಪತ್ರೆಗಳಲ್ಲಿನ ನಿತ್ಯದ ಕಾರ್ಯವೈಖರಿಗೆ ತೊಡಕಾಗಿ ಪರಿಣಮಿಸಿದೆ ಮತ್ತು ಪಶುಸಂಗೋಪನೆ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.

ADVERTISEMENT

ಇಲ್ಲದಿರುವುದೇ ಹೆಚ್ಚು: ಇಲಾಖೆಯಿಂದ 2012ರಲ್ಲಿ ನಡೆಸಿದ ಜಾನುವಾರು ಗಣತಿ ಪ್ರಕಾರವೇ ಜಿಲ್ಲೆಯಲ್ಲಿ 14 ಲಕ್ಷ ದೊಡ್ಡ ಜಾನುವಾರು (ಎಮ್ಮೆ, ಹಸು, ಎತ್ತು, ಆಕಳು, ಕೋಣ ಮೊದಲಾದವು) ಹಾಗೂ 14 ಲಕ್ಷಕ್ಕೂ ಹೆಚ್ಚು ಕುರಿ ಹಾಗೂ ಮೇಕೆ ಸೇರಿ ಒಟ್ಟು 28 ಲಕ್ಷ ಜಾನುವಾರುಗಳಿವೆ. ಇವುಗಳ ಚಿಕಿತ್ಸೆಗಾಗಿ ರಾಜ್ಯದಲ್ಲಿಯೇ ಅತಿಹೆಚ್ಚು ಸಂಖ್ಯೆಯ (271) ಪಶುಆಸ್ಪತ್ರೆ, ಪಶುಚಿಕಿತ್ಸಾಲಯ ಹಾಗೂ ಪಾಲಿಕ್ಲಿನಿಕ್‌ಗಳನ್ನು ತೆರೆಯಲಾಗಿದೆ.

ಅತ್ಯಗತ್ಯವಾಗಿ ಬೇಕಾದ ಪಶುವೈದ್ಯಾಧಿಕಾರಿ, ಸಹಾಯಕ ನಿರ್ದೇಶಕರು, ಜಾನುವಾರು ಅಭಿವೃದ್ಧಿ ಅಧಿಕಾರಿ, ಜಾನುವಾರು ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು, ಕ್ಲರ್ಕ್‌, ‘ಡಿ’ ದರ್ಜೆ ನೌಕರರು ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ಖಾಲಿ ಹುದ್ದೆಗಳಿವೆ. ದಿನದಿಂದ ದಿನಕ್ಕೆ ಜಾನುವಾರು ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇದಕ್ಕೆ ತಕ್ಕಂತೆ ಹುದ್ದೆಗಳನ್ನು ಒದಗಿಸುವ ಕಾರ್ಯ ಮಾತ್ರ ನಡೆಯುತ್ತಿಲ್ಲ.

ವೈದ್ಯರು ಸಿಗಬಹುದು: ‘ರಾಜ್ಯದಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ 650 ಹುದ್ದೆಗಳಿಗೆ ಸಂದರ್ಶನ ನಡೆಸಲಾಗುತ್ತಿದೆ. ಮುಂದಿನ ತಿಂಗಳ ವೇಳೆಗೆ ಜಿಲ್ಲೆಗೂ ಒಂದಷ್ಟು ವೈದ್ಯರು ದೊರೆಯಬಹುದು’ ಎಂದು ಉಪನಿರ್ದೇಶಕ ಡಾ.ಎ.ಕೆ. ಚಂದ್ರಶೇಖರ ತಿಳಿಸಿದರು.

‘ಕೆಲಸದ ಒತ್ತಡವಿದೆ ಎಂದು ಸುಮ್ಮನಿರಲಾಗುವುದಿಲ್ಲ. ಜಾನುವಾರುಗಳಿಗೆ ತೊಂದರೆಯಾದಲ್ಲಿ ವೈದ್ಯಾಧಿಕಾರಿ ಸ್ಥಳಕ್ಕೆ ಹೋಗಿಯೇ ಚಿಕಿತ್ಸೆ ನೀಡಬೇಕಾಗುತ್ತದೆ. ಹಲವು ವೈದ್ಯರಿಗೆ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿದೆ. ವೈದ್ಯರು ಲಭ್ಯವಿರುವ ದಿನಗಳ ಮಾಹಿತಿಯನ್ನು ಆಸ್ಪತ್ರೆಗಳಲ್ಲಿ ಪ್ರಕಟಿಸಲಾಗಿದೆ. ಮೊಬೈಲ್‌ ಸಂಖ್ಯೆಯನ್ನೂ ನೀಡಲಾಗಿದೆ. ವೈದ್ಯರಿಗೆ ಮೊಬೈಲ್‌ ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹೊಸದಾಗಿ 15 ಆಸ್ಪತ್ರೆಗಳಿಗೆ ಪ್ರಸ್ತಾವ
ಜಿಲ್ಲೆಯಲ್ಲಿ ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಬೇಡಿಕೆ ಆಧರಿಸಿ ಮತ್ತೆ 15 ಪಶು ವೈದ್ಯ ಸಂಸ್ಥೆಗಳನ್ನು ಆರಂಭಿಸಲು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 5,000ಕ್ಕೂ ಹೆಚ್ಚು ಜಾನುವಾರು ಹೊಂದಿರುವ ಹಾಗೂ 5 ಕಿ.ಮೀ. ಅಂತರದಲ್ಲಿ ಪಶುಆಸ್ಪತ್ರೆ ಇಲ್ಲದಿರುವ ಸ್ಥಳದಲ್ಲಿ ಹೊಸ ಆಸ್ಪತ್ರೆ ಸ್ಥಾಪಿಸಲು ಅವಕಾಶವಿದೆ. ಈ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸಲಾಗಿದೆ. ಆಗ ಮತ್ತಷ್ಟು ವೈದ್ಯಕೀಯ ಸಿಬ್ಬಂದಿ ಬೇಕಾಗುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.

ಅಂಕಿ ಅಂಶ
271 ಜಿಲ್ಲೆಯಲ್ಲಿರುವ ಪಶುವೈದ್ಯಕೀಯ ಸಂಸ್ಥೆಗಳು

662 ಭರ್ತಿಯಾಗಿರುವ ಹುದ್ದೆಗಳು

28 ಲಕ್ಷ ಜಿಲ್ಲೆಯ ಜಾನುವಾರುಗಳ ಸಂಖ್ಯೆ

ಮುಂದಿನ ತಿಂಗಳು ಗಣತಿ
2012ರಲ್ಲಿ ಜಾನುವಾರು ಗಣತಿ ಆಗಿದೆ. ಪ್ರತಿ 5 ವರ್ಷಕ್ಕೊಮ್ಮೆ ಗಣತಿ ನಡೆಸಲಾಗುತ್ತದೆ. ಅದರಂತೆ, ಜುಲೈನಲ್ಲಿ ಗಣತಿ ಆರಂಭವಾಗಲಿದೆ.

* * 

ಜಿಲ್ಲೆಯಲ್ಲಿ ಜಾನುವಾರು ಸಂಖ್ಯೆಗೆ ತಕ್ಕಂತೆ ವೈದ್ಯ ಸಿಬ್ಬಂದಿ ಇಲ್ಲ. ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಡಾ.ಎ.ಕೆ. ಚಂದ್ರಶೇಖರ
ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.