ADVERTISEMENT

ಪಾಳು ಬಿದ್ದ ಸದಲಗಾ ಎಪಿಎಂಸಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 8:45 IST
Last Updated 11 ಫೆಬ್ರುವರಿ 2011, 8:45 IST

ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು 60 ಲಕ್ಷ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತವಾದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ನಿರ್ಮಾಣಗೊಂಡು ಐದು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚ ಗಂಗಾ ನದಿಗಳು ಪ್ರವಹಿಸುವ ತಾಲ್ಲೂಕಿನ ಸದಲಗಾ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದ ಕೃಷಿ ಉತ್ಪನ್ನ ಗಳಿಗೆ ನೆರೆಯ ಮಹಾರಾಷ್ಟ್ರವೇ ಪ್ರಮುಖ ಮಾರುಕಟ್ಟೆ. ಸ್ಥಳೀಯ ವಾಗಿಯೇ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಶಾಸಕ ಪ್ರಕಾಶ ಹುಕ್ಕೇರಿ 2004- 05ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವರಾಗಿದ್ದಾಗ ಈ ಮಾರುಕಟ್ಟೆ ನಿರ್ಮಿಸಿದ್ದಾರೆ. 3 ಎಕರೆ 06 ಗುಂಟೆ ವಿಸ್ತಾರದಲ್ಲಿ ನಿರ್ಮಿಸಿ ರುವ ಉಪ ಮಾರುಕಟ್ಟೆ ಮಾತ್ರ ಇನ್ನೂ ರೈತರ ಸೇವೆಗೆ ಸಮರ್ಪಣೆ ಗೊಂಡಿಲ್ಲ.

ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪನೆಗೆ ಸದಲಗಾ ಪಟ್ಟಣದ ಪ್ರಶಸ್ತವಾದ ಸ್ಥಳವಲ್ಲ, ನೆರೆಯ ಮಹಾರಾಷ್ಟ್ರದಲ್ಲಿ ಔದ್ಯೋಗಿಕರಣ ವಿಸ್ತಾರಗೊಂಡಿದ್ದು, ಅಲ್ಲಿ ಮಾರುಕಟ್ಟೆ ವ್ಯವಸ್ಥೆಗೂ ಪೂರಕ ವಾತಾವರಣವಿದೆ ಎಂಬುದೂ ಕೆಲವರ ಅಭಿಪ್ರಾಯ ವಾಗಿದೆ.

ಸದಲಗಾ ಹೋಬಳಿ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕಬ್ಬು, ತಂಬಾಕು ಮುಂತಾದ ವಾಣಿಜ್ಯ ಬೆಳೆಗಳನ್ನು ಹಾಗೂ ಗೋವಿನಜೋಳ, ಗೋಧಿ, ಕಡಲೆ, ವೀಳ್ಯದೆಲೆ, ಸೋಯಾ ಬೀನ್, ಬೆಲ್ಲ, ಮೆಣಸಿನಕಾಯಿ, ಸೂರ್ಯ ಕಾಂತಿ ಮುಂತಾದ ಉತ್ಪನ್ನಗಳನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿ, ಮುಂಬಯಿ, ಇಚಲಕರಂಜಿ, ಗಡ ಹಿಂಗ್ಲಜ್, ಕೊಲ್ಲಾಪೂರ, ಕುರುಂದ ವಾಡ  ಮುಂತಾದ ಪಟ್ಟಣಗಳ ಮಾರುಕಟ್ಟೆಗಳಿಗೆ ಸಾಗಿಸಲಾಗುತ್ತಿದೆ. ಇದರಿಂದ ರೈತರಿಗೆ ಸಾಗಣೆ ವೆಚ್ಚ, ದಲ್ಲಾಳಿಗಳ ಶೋಷಣೆ, ಮಾರುಕಟ್ಟೆ ಕರ ಮುಂತಾದ ತೊಂದರೆಗಳನ್ನು ಅನುಭವಿಸಲಾಗುತ್ತಿದೆ.

ಉಪ ಮಾರುಕಟ್ಟೆಯ ಪ್ರಾಂಗಣ ದಲ್ಲಿ 3.72 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ, 2.14 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹರಾಜು ಕಟ್ಟೆ, 5.94 ಲಕ್ಷ ರೂಪಾಯಿಗಳಲ್ಲಿ ಕಚೇರಿ ಕಟ್ಟಡ, 6.57 ಲಕ್ಷ ರೂಪಾಯಿಗಳಲ್ಲಿ ವಸತಿ ಗೃಹ, 8.07 ಲಕ್ಷ ರೂಪಾಯಿಗಳಲ್ಲಿ ಗ್ರಾಮೀಣ ಗೋದಾಮು, 14.42 ಲಕ್ಷ ರೂಪಾಯಿಗಳಲ್ಲಿ ಆವರಣ ಗೋಡೆ, 1.47 ಲಕ್ಷ ರೂಪಾಯಿಗಳಲ್ಲಿ ಕುಡಿಯುವ ನೀರಿನ ಸೌಕರ್ಯ, 5.28 ಲಕ್ಷ ರೂಪಾಯಿಗಳಲ್ಲಿ ವಿದ್ಯುತ್ ಸೌಕರ್ಯ ಹಾಗೂ 16.68 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 10 ಸಂಖ್ಯೆಯ ಚಿಕ್ಕ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಆದರೆ ಮಾರುಕಟ್ಟೆ ಪ್ರಾಂಗಣ ಈಗ ಪಾಳು ಬಿದ್ದಿದೆ. ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಪ್ರಾಂಗಣದ ತುಂಬ ಗಿಡಗಂಟಿಗಳು ಬೆಳೆದು ನಿಂತಿದ್ದು, ನಾಯಿ ನರಿಗಳ ವಾಸಸ್ಥಾನವಾಗಿದೆ.ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕಟ್ಟಡವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.