ADVERTISEMENT

ಪಿಪಿಆರ್ ಲಸಿಕೆ ಹಾಕಿಸಿ ಕುರಿ, ಮೇಕೆಗಳ ಸಂರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 9:20 IST
Last Updated 18 ಜೂನ್ 2011, 9:20 IST

ಮೂಡಲಗಿ: ಕುರಿ, ಮೇಕೆಗಳನ್ನು ಪಿಪಿಆರ್ ಭಯಾನಕ ರೋಗದಿಂದ ಸಂರಕ್ಷಿಸಿ ದೇಶದ ಆರ್ಥಿಕ ಸಂಪತ್ತನ್ನು ಬೆಳೆಸಬೇಕು ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಆರ್.ಎ. ಪುರೋಹಿತ ಹೇಳಿದರು.

ಇಲ್ಲಿಯ ಪಶು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಿಪಿಆರ್ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಕುರಿ ಮೇಕೆಗಳಿಗೆ ಪಿಪಿಆರ್ ರೋಗ ನಿಯಂತ್ರಣ ಲಸಿಕೆ ಹಾಕುವ ಶಿಬಿರದಲ್ಲಿ ಮಾತನಾಡಿದ ಅವರು, ಕುರಿಗಾರರು ಕುರಿ ಮತ್ತು ಮೇಕೆಗಳ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಎಂದರು.

ಮೂಡಲಗಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಇದೇ 29ರ ವರೆಗೆ ಪಿಪಿಆರ್ ಲಸಿಕೆಯನ್ನು ನೀಡಲಾಗುತ್ತಿದ್ದು, ಕುರಿ, ಮೇಕೆಗಳಿಗೆ ತಪ್ಪದೆ ಲಸಿಕೆಯನ್ನು ಹಾಕಿಸಿ ಪಿಪಿಆರ್ ರೋಗದಿಂದ ಮುಕ್ತಗೊಳಿಸಬೇಕು ಎಂದರು.

ಮೂಡಲಗಿ ಸೇರಿದಂತೆ ನಾಗನೂರು, ಹಳ್ಳೂರ ಗ್ರಾಮಗಳಲ್ಲಿ ಈಗಾಗಲೇ ಸ್ಥಳೀಯ ಮತ್ತು ವಲಸೆ  ಬಂದ 30 ಸಾವಿಕ್ಕೂ ಅಧಿಕ ಕುರಿ, ಮೇಕೆಗಳಿಗೆ ಪಿಪಿಆರ್ ಲಸಿಕೆಯನ್ನು ಕೊಡಲಾಗಿದ್ದು, ಕುರಿ ಮಾಲೀಕರಿಗೆ ಆರೋಗ್ಯ ಗುರುತಿನ ಕಾರ್ಡ್  ಕೂಡ ನೀಡಲಾಗಿದೆ ಎಂದರು.

ಡಾ. ವಿ.ಎಂ. ವಿಭೂತಿ, ಡಾ. ಪ್ರಮೋದ ಮೂಡಲಗಿ ಸಿಬ್ಬಂದಿ ಎಸ್.ಎಚ್. ಶಾಬನ್ನವರ, ಎ.ವಿ. ದೇಶಪಾಂಡೆ, ಎಂ.ವೈ. ಅಂಬಿಗೇರ, ಆರ್.ಆರ್. ಕಚೂರಿ ಶಿಬಿರದಲ್ಲಿ ಭಾಗವಹಿಸಿ ಲಸಿಕೆಯನ್ನು ನೀಡಿದರು.

ಜೂನ್ 19ರಂದು ಜೋಕಾನಟ್ಟಿ ಗ್ರಾಮ, 20ರಂದು ಮಸಗುಪ್ಪಿ, 21 ರಂದು ಗುಜನಟ್ಟಿ, ಪುಲಗಡ್ಡಿ, 22ರಂದು ವಡೇರಟ್ಟಿ, 23, 24 ರಂದು ಹುಣಶ್ಯಾಳ ಪಿ.ಜಿ, 26 ರಂದು ಹೊಸಟ್ಟಿ, ಭೈರನಟ್ಟಿ, ಲಕ್ಷ್ಮೇಶ್ವರ, 27 ರಂದು ಸುಣಧೋಳಿ, 28 ರಂದು ಹೊನಕುಪ್ಪಿ, ಸಿದ್ದಾಪುರಹಟ್ಟಿ, 29 ರಂದು ತಿಗಡಿ ಗ್ರಾಮದಲ್ಲಿ ಪಿಪಿಆರ್ ಲಸಿಕೆ ಹಾಕುವ ಶಿಬಿರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.