ADVERTISEMENT

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮುಖ್ಯಶಿಕ್ಷಕಿ ಅಮಾನತು ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:37 IST
Last Updated 19 ಡಿಸೆಂಬರ್ 2013, 6:37 IST

ಚಿಕ್ಕೋಡಿ: ತಾಲ್ಲೂಕಿನ ನಾಗರಾಳ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಮಾನತು ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಶಾಲೆಯ ಸಹ ಶಿಕ್ಷಕರೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಮಾನತುಗೊಂಡಿರುವ ಮುಖ್ಯ ಶಿಕ್ಷಕಿ ಅಂಕಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಅಮಾನತುಗೊಂಡರೂ ಆದೇಶ ಸ್ವೀಕರಿಸದೇ ಶಾಲಾ ಸೇವೆಯಲ್ಲಿ ಮುಂದುವರಿದಿದ್ದಲ್ಲದೇ, ಸಹ ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆ ವಿವರ: ‘ತಾಲ್ಲೂಕಿನ ನಾಗರಾಳ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಿ.ಬಿ. ಸಾಂಗವೆ ಅವರನ್ನು ಕರ್ತವ್ಯಲೋಪ ಆರೋಪದ ಮೇರೆಗೆ ಕಳೆದ ಜುಲೈನಲ್ಲಿ ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತು ಆದೇಶ ಪತ್ರವನ್ನು ಜಾರಿ ಮಾಡಲು ಇಲಾಖೆ ಅಧಿಕಾರಿಗಳು ಹಲವು ಬಾರಿ ಶಾಲೆಗೆ ಹೋದರೂ ಆದೇಶ ಸ್ವೀಕರಿಸದೇ ಶಾಲಾ ಸೇವೆಯಲ್ಲಿಯೇ ಕಾನೂನು ಬಾಹಿರವಾಗಿ ಮುಂದುವರಿದಿದ್ದಾರೆ.

ಈ ಹಿನ್ನೆಲೆಯಲ್ಲಿ ತಾವು ಡಿ.13 ರಂದು ಶಾಲೆಗೆ ತೆರಳಿ, ಅಮಾನತುಗೊಂಡ ಬಳಿಕ ಶಾಲೆಯ ಸೇವೆ­ಯಲ್ಲಿಯೇ ಮುಂದುವರಿಯುವುದು ತಪ್ಪು. ಅನಧಿಕೃತವಾಗಿ ಶಾಲೆಗೆ ಹಾಜರಾಗದೇ ವಿಚಾರಣೆ ವೇಳೆಗೆ ಮಾತ್ರ ಹಾಜರಿರಬೇಕು ಹಾಗೂ ಶಾಲೆಯ ಆಡಳಿತ ಪ್ರಭಾರವನ್ನು ಹಿರಿಯ ಸಹಶಿಕ್ಷಕ ಪಿ.ಟಿ. ಮಾನೆ ಅವರಿಗೆ ವಹಿಸಿಕೊಡಬೇಕು’ ಎಂದು ಮುಖ್ಯ ಶಿಕ್ಷಕಿ  ಸಾಂಗವೆ ಅವರಿಗೆ ಸೂಚಿಸಿದ್ದಾಗಿ’ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕನಮರಡಿ ತಿಳಿಸಿದ್ದಾರೆ.

ಬಿಇಒ ಅವರ ಸೂಚನೆಯಂತೆ ಡಿ.14ರಂದು ಸಹಶಿಕ್ಷಕ ಪಿ.ಟಿ. ಮಾನೆ ಅವರು ಶಾಲೆಯ ಪ್ರಭಾರ ವಹಿಸಿಕೊಡುವಂತೆ ಮುಖ್ಯ ಶಿಕ್ಷಕಿ ಪಿ.ಬಿ. ಸಾಂಗವೆ ಅವರನ್ನು ಕೋರಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. 

ಅದೇ ದಿನ ಮುಖ್ಯ ಶಿಕ್ಷಕಿ ಸಾಂಗವೆ ಅವರು, ‘ ಸಹ ಶಿಕ್ಷಕ ಪಿ.ಟಿ. ಮಾನೆ ತಮ್ಮನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಡುಗೆ ಸಿಬ್ಬಂದಿ ರತ್ನಾಬಾಯಿ ಕುರಾಡೆ ಅವರನ್ನೂ ನಿಂದಿಸಿದ್ದಾರೆ’ ಎಂದು ಅಂಕಲಿ ಠಾಣೆಯಲ್ಲಿ ದೂರು ನೀಡಿದ್ದಾರೆ.
’ಅಮಾನತುಗೊಂಡರೂ ಅಮಾನತು ಆದೇಶ ಸ್ವೀಕರಿಸದೇ, ಶಾಲೆಯ ಪ್ರಭಾರವನ್ನೂ ವಹಿಸಿಕೊಡದೇ ಶಾಲೆಯ ಸೇವೆ­ಯಲ್ಲಿ ಮುಂದುವರಿಯುವ ಮೂಲಕ ಸಹ ಶಿಕ್ಷಕರು ಮತ್ತು ಮೇಲಾಧಿಕಾರಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕನಮರಡಿ ಅಂಕಲಿ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಬಿಸಿಯೂಟಕ್ಕೆ ವ್ಯವಸ್ಥೆ
ಏತನ್ಮಧ್ಯೆ ಮಂಗಳವಾರದಿಂದ ಶಾಲೆಯ ಬಿಸಿಯೂಟ ಆಹಾರಧಾನ್ಯ ಸಂಗ್ರಹ ಕೊಠಡಿಯ ಬೀಗದ ಕೈಯನ್ನು ಮುಖ್ಯ ಶಿಕ್ಷಕಿ ತಮ್ಮಲ್ಲಿಯೇ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪರ್ಯಾಯವಾಗಿ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಪಿಂಜಾರ್‌ ಮತ್ತು ಸಿಆರ್‌ಪಿ ಜಿ.ಎಂ. ಕಾಂಬಳೆ ಶಾಲೆಗೆ ತೆರಳಿ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಕೊಠಡಿಯ ಬೀಗ ಒಡೆದು ಬಿಸಿಯೂಟ ವ್ಯವಸ್ಥೆ ಗುರುವಾರದಿಂದ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಕ್ರಮ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.