ADVERTISEMENT

ಪ್ರವಾಹ ವೀಕ್ಷಣೆ: ಜನಪ್ರತಿನಿಧಿಗಳಿಗೆ ದಿಗ್ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:50 IST
Last Updated 10 ಸೆಪ್ಟೆಂಬರ್ 2011, 10:50 IST

ರಾಮದುರ್ಗ: ಪ್ರವಾಹ ಪೀಡಿತ ಪ್ರದೇಶವಾದ ತಾಲ್ಲೂಕಿನ ಸಂಗಳ ಗ್ರಾಮಕ್ಕೆ ಭೇಟಿ ನೀಡಿದ ಚುನಾಯಿತ ಪ್ರತಿನಿಧಿಗಳಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.

ಮಲಪ್ರಭಾ ನದಿಯ ಪ್ರವಾಹದ ಸುದ್ದಿ ತಿಳಿದು ಪರಿಸ್ಥಿತಿ ತಿಳಿಯಲು ಆಗಮಿಸಿದ್ದ ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ಜಿಲ್ಲಾ ಜಾಗೃತ ಸಮಿತಿ ಸದಸ್ಯ ಮಲ್ಲಣ್ಣ ಯಾದವಾಡ ಅವರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿ ಸಂಗಳ ಗ್ರಾಮ ಸ್ಥಳಾಂತರಕ್ಕೆ ಪಟ್ಟು ಹಿಡಿದರು.

ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ ಗೀತಾ ಕೌಲಗಿ, ತಾಪಂ ಇಓ ಎಂ.ಎಂ. ಗೂಳಪ್ಪನವರ ಗ್ರಾಮ ಸ್ಥಳಾಂತರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿ ಚುನಾಯಿತ ಪ್ರತಿನಿಧಿಗಳನ್ನು ದಿಗ್ಬಂಧನದಿಂದ ಮುಕ್ತಗೊಳಿಸಿದರು.
ಸವದತ್ತಿಯ ನವಿಲು ತೀರ್ಥ ಅಣೆಕಟ್ಟೆಯಿಂದ ಹೊರಬಿಡುವ ನೀರನ್ನು ಮೂರು ಸಾವಿರ ಕ್ಯೂಸೆಕ್‌ಗೆ ಇಳಿಸಿರುವುದರಿಂದ ನದಿ ಪ್ರವಾಹದಲ್ಲಿ ಇಳಿಮುಖವಾಗಿದೆ. ಸಂಜೆ ಹೊತ್ತಿಗೆ ಎಲ್ಲ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದವು.

ಮಲಪ್ರಭಾ ಪ್ರವಾಹದಿಂದ ಪಟ್ಟಣದ ತಗ್ಗು ಪ್ರದೇಶದಲ್ಲಿ ಸಂಗ್ರಹಗೊಂಡ ತ್ಯಾಜ್ಯ ವಸ್ತುಗಳು ನೀರಿನೊಂದಿಗೆ ಬೆರೆತು ಮಲಿನತೆ ಕಂಡು ಬರುತ್ತಿದೆ.

ಇನ್ನೆರಡು ದಿನಗಳಲ್ಲಿ ಎಲ್ಲವನ್ನೂ ಸ್ವಚ್ಛಗೊಳಿಸದಿದ್ದರೆ ರೋಗರುಜಿನಗಳು ಹರಡುವ ಭೀತಿ ಎದುರಾಗಿದ್ದು, ಪುರಸಭೆಯು ಸೂಕ್ತ ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.