ADVERTISEMENT

ಫಲಾನುಭವಿಗಳ ಆಯ್ಕೆಗೆ ಜನಧ್ವನಿ ಕಾರ್ಯಕ್ರಮ: ವಿ.ಅನ್ಬುಕುಮಾರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 6:30 IST
Last Updated 21 ಮಾರ್ಚ್ 2012, 6:30 IST

ಬೆಳಗಾವಿ: ಬಹುಮಹಡಿ ಕಟ್ಟಡಗಳ ನೆಲಮಾಳಿಗೆ ಹಾಗೂ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಕುರಿತು ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ, ಪಾಲಿಕೆ ಆಡಳಿತಾಧಿಕಾರಿ ವಿ. ಅನ್ಬುಕುಮಾರ ಹೇಳಿದರು.

`ಫುಟ್‌ಪಾತ್ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಮೀಸಲಾಗಿದ್ದ ಜಾಗವನ್ನು ಅತಿಕ್ರಮಿಸಿರುವುದರ ಬಗೆಗೆ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳುತ್ತೇನೆ. ಆ ನಂತರ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ತೆರವು ಮಾಡಲಾಗುವುದು~ ಎಂದು ಮಂಗಳವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

`ತೆರಿಗೆ ವಸೂಲಿಯನ್ನೂ ಚುರುಕುಗೊಳಿಸಲಾಗಿದೆ. ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ 50 ಮಂದಿಯ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತಿದ್ದು, ಆ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು~ ಎಂದು ಅವರು ಹೇಳಿದರು.

`ಅಕ್ರಮ ಕಟ್ಟಡಗಳ ಬಗೆಗೂ ಸರ್ವೆ ನಡೆದಿದೆ. ಪಾಲಿಕೆ ಜಾಗದ ಲೀಸ್ ಮುಗಿದಿದ್ದರೂ ಅವರನ್ನು ಮುಂದುವರೆಸಿರುವ ಜಾಗಗಳ ಬಗೆಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಬಗೆಗೂ ಕ್ರಮಕೈಗೊಳ್ಳಲಾಗುವುದು~ ಎಂದು ತಿಳಿಸಿದರು.

`ಪಾಲಿಕೆಯ ಬಜೆಟ್ ತಯಾರಿಕೆ ಕೆಲಸ ಭರದಿಂದ ಸಾಗಿದೆ. ಕೆಲವು ತೆರಿಗೆಯ ಹೆಚ್ಚಳ ಕುರಿತು ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಾಲಿಕೆ ಅಧಿಕಾರಿಗಳು ಬಜೆಟ್ ತಯಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ~ ಎಂದು ಅವರು ಹೇಳಿದರು.

`ಶೇ 22.75 ಹಾಗೂ ಶೇ 7.25ರ ಅನುದಾನದಡಿ ಫಲಾನುಭವಿಗಳ ಆಯ್ಕೆಗೆ ಜನಧ್ವನಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ ಕಾರ್ಯಕ್ರಮದ ಮೂಲಕ 200 ಫಲಾನುಭವಿಗಳಿಗೆ 28.19 ಲಕ್ಷ ರೂಪಾಯಿ ನೀಡಲಾಗಿದೆ~ ಎಂದರು.

`ಫಲಾನುಭವಿಗಳಿಂದ ಅರ್ಜಿ ತೆಗೆದುಕೊಂಡು, ಹದಿನೈದು ದಿನಗಳಲ್ಲಿ ಅವುಗಳನ್ನು ಪರಿಶೀಲಿಸಿ ಅವರಿಗೆ ನೇರವಾಗಿ ಚೆಕ್ ಬಿಡುಗಡೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಬರುವವರು ಪ್ರಯೋಜನ ಪಡೆದುಕೊಳ್ಳಬೇಕು~ ಎಂದು ಅವರು ಮನವಿ ಮಾಡಿದರು.ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಎಂಜಿನಿಯರ್ ಲಕ್ಷ್ಮಿ ಸುಳಗೇಕರ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.