ADVERTISEMENT

ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 20:25 IST
Last Updated 5 ಏಪ್ರಿಲ್ 2014, 20:25 IST
ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿ
ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿ   

ಬೆಳಗಾವಿ: ‘ರಾಜಕೀಯ ಪಾಳೇಗಾರಿಕೆ’ಗೆ ಹೆಸರಾಗಿ­ರುವ ಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅಥವಾ ಬಿಜೆಪಿ ಗೆಲುವನ್ನು ಜೆಡಿಎಸ್‌ ಮತ್ತು ಎನ್‌ಸಿಪಿ ಅಭ್ಯರ್ಥಿಗಳು ಪಡೆಯುವ ಮತಗಳು ನಿರ್ಧರಿಸಲಿವೆ.

2009ರ ಚುನಾವಣೆಯಂತೆಯೇ ಈ ಬಾರಿಯೂ ಇಲ್ಲಿ ಬಿಜೆಪಿಯ ರಮೇಶ ಕತ್ತಿ ಮತ್ತು ಕಾಂಗ್ರೆಸ್‌ನ ಸಚಿವ ಪ್ರಕಾಶ ಹುಕ್ಕೇರಿ ಪ್ರತಿಸ್ಪರ್ಧಿ­ಗಳು. ಇವರಿಬ್ಬರ ನಡುವೆಯೇ ನೇರ ಹಣಾಹಣಿ ಇರುವಂತೆ ಕಂಡು­ಬರುತ್ತಿದೆ. ಆದರೆ ಕಣದಲ್ಲಿರುವ ಜೆಡಿಎಸ್‌ನ ಶ್ರೀಮಂತ ಬಾಳಾಸಾಹೇಬ ಪಾಟೀಲ ಮತ್ತು ಎನ್‌ಸಿಪಿಯ ಪ್ರತಾಪ­ರಾವ್‌ ಪಾಟೀಲ (‘ರಾಯಬಾಗ ಹುಲಿ’ ದಿವಂಗತ ವಿ.ಎಲ್‌.­ಪಾಟೀಲರ ಪುತ್ರ)  ಪಡೆಯುವ ಮತ­ಗಳು ಅವರಿಬ್ಬರಲ್ಲಿ (ಕಾಂಗ್ರೆಸ್– ಬಿಜೆಪಿ) ಒಬ್ಬ­ರನ್ನು ದಡ ಸೇರಿಸುತ್ತವೆ.

ಕಣದಲ್ಲಿ ಒಟ್ಟು 12 ಅಭ್ಯರ್ಥಿಗಳಿದ್ದಾರೆ. ಬಿಎಸ್‌ಪಿ­­ಯಿಂದ ಮಚ್ಛೇಂದ್ರ ಕಾಡಾಪುರೆ, ಆಮ್‌ ಆದ್ಮಿ ಪಕ್ಷದಿಂದ ಅಷ್ಫಾಕ್‌ ಅಹ್ಮದ್‌ ಮಡಕಿ, ಸರ್ವ ಜನತಾ ಪಕ್ಷದಿಂದ ಅಪ್ಪಾಸಾಹೇಬ ಶ್ರೀಪತಿ ಕುರಣೆ ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಇರಲಿಲ್ಲ. ಆಗ ರಮೇಶ ಕತ್ತಿ 55,287 ಮತಗಳ ಅಂತರ­ದಿಂದ ಗೆದ್ದಿದ್ದರು. ಆದರೆ, ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಜೊತೆಗೆ ಜೆಡಿಎಸ್‌ ಹಾಗೂ ಎನ್‌ಸಿಪಿ ಸಹ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿವೆ. ಮತದಾರ­ರನ್ನು ಸೆಳೆಯಲು ಪೈಪೋಟಿಗೆ ಇಳಿದಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (ಶೇ. 37.63) ಹಾಗೂ ಕಾಂಗ್ರೆಸ್‌ (ಶೇ. 37.20) ಮತ ಗಳಿಕೆಯಲ್ಲಿ ಬಹುತೇಕ ಸಮಬಲದಲ್ಲಿದ್ದರೂ ಸ್ಥಾನ ಗಳಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಇಲ್ಲೀಗ ರಮೇಶ ಕತ್ತಿ ಸಹೋದರ ಉಮೇಶ ಕತ್ತಿ ಸೇರಿ­ದಂತೆ ಬಿಜೆಪಿಯ ಐವರು ಶಾಸಕರಿದ್ದಾರೆ. ಪ್ರಕಾಶ ಹುಕ್ಕೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಆಯ್ಕೆ­ಯಾಗಿದ್ದಾರೆ. ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಪಿ. ರಾಜೀವ ಗೆದ್ದಿದ್ದಾರೆ. ಆ ಪಕ್ಷದ ಸಂಸ್ಥಾಪಕ ಶ್ರೀರಾಮುಲು ಬಿಜೆಪಿ ಸೇರಿದ್ದರೂ, ರಾಜೀವ ಅವರ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.

‘ಸಂಸದರಾದ ಬಳಿಕ ರಮೇಶ ಕತ್ತಿ ಐದು ವರ್ಷಗಳಲ್ಲಿ ಹಳ್ಳಿಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲ. ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ಹೋದರೆ, ಬಾಯಿಗೆ ಬಂದಂತೆ ಮಾತನಾಡು­ತ್ತಾರೆ. ಅವರು ಬಳಸುವ ಭಾಷೆಯೇ ಅವರಿಗೆ ಮುಳುವಾಗಲಿದೆ. ಅವರ ಮೇಲೆ ಜನರಿಗೆ ಇರುವ ಸಿಟ್ಟನ್ನು ನರೇಂದ್ರ ಮೋದಿ ಅಲೆಯೇ ತಣ್ಣಗಾಗಿ­ಸ­ಬೇಕು’ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. 

‘ಸಹಕಾರ ಸಂಸ್ಥೆಗಳು ಹಾಗೂ ಎರಡು ಸಕ್ಕರೆ ಕಾರ್ಖಾನೆಗಳ ಮೂಲಕ ರಮೇಶ ಕತ್ತಿ ರೈತರ ಮೇಲೆ ಹಿಡಿತ ಸಾಧಿಸಿದ್ದಾರೆ. ಹುಕ್ಕೇರಿ ತಾಲ್ಲೂಕಿನ ಜನ ಕತ್ತಿ ಅವರ ಕೈ ಬಿಡುವುದಿಲ್ಲ. ಹೇಗೆ ಗೆಲ್ಲಬೇಕು ಎಂಬ ತಂತ್ರ ಅವರಿಗೆ ಚೆನ್ನಾಗಿ ತಿಳಿದಿದೆ’ ಎಂಬುದು ಬಿಜೆಪಿ ಕಾರ್ಯಕರ್ತರ ವಾದ.

‘ಪ್ರಕಾಶ ಹುಕ್ಕೇರಿ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟು­ಕೊಳ್ಳುತ್ತಾರೆ. ಅಭಿವೃದ್ಧಿ ಕೆಲಸ­ಗಳನ್ನು ಅಧಿಕಾರಿಗಳ ಬೆನ್ನಿಗೆ ಬಿದ್ದು ಮಾಡಿಸು­ತ್ತಾರೆ. ಅವರನ್ನು ಗೆಲ್ಲಿಸದೇ ಇದ್ದರೆ ಅನ್ಯಾಯ ಮಾಡಿ­­ದಂತಾಗುತ್ತದೆ’ ಎಂಬ ಕಳಕಳಿಯ ಮಾತು­ಗಳು ಚಿಕ್ಕೋಡಿ   ತಾಲ್ಲೂಕಿನಲ್ಲಿ ಹರಿದಾಡುತ್ತಿವೆ.

ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿರುವುದರಿಂದ ಶ್ರೀಮಂತ ಪಾಟೀಲ­ರಿಗೆ ಕಾಗವಾಡದಲ್ಲಿ ರೈತರ ಬೆಂಬಲ ಇದೆ. ಆದರೆ, ಇತರ ಕಡೆ ಅವರು ಅಷ್ಟು ಹೆಸರುವಾಸಿಯಲ್ಲ. ಕುರುಬ ಸಮಾಜದ ಪ್ರಭಾವಿ ನಾಯಕರಾಗಿದ್ದ ದಿವಂಗತ ವಿ.ಎಲ್‌. ಪಾಟೀಲರ ಪುತ್ರರಾದ ಪ್ರತಾಪ­ರಾವ್‌ ಅವರ ಹಿಡಿತ ರಾಯಬಾಗ ತಾಲ್ಲೂಕಿನಲ್ಲಿ ಪ್ರಬಲವಾಗಿದೆ. ಇನ್ನುಳಿದಂತೆ ಬಿಎಸ್‌ಪಿ, ಆಮ್‌ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಅಷ್ಟಾಗಿ ಪ್ರಚಾರ ನಡೆಸುತ್ತಿಲ್ಲ.

‘ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು, ಕಬ್ಬು ಪೂರೈಸಿದ ರೈತರಿಗೆ ಟನ್‌ಗೆ ಕೇವಲ ₨ 2,000 ಹಣ ಪಾವತಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ್ದ ₨ 2,500 ಬೆಲೆಯನ್ನು ಕೊಡಿಸುವಲ್ಲಿ ವಿಫಲರಾಗಿ­ರುವ ಸಕ್ಕರೆ ಸಚಿವ ಹುಕ್ಕೇರಿ ಕಾಂಗ್ರೆಸ್‌ ಅಭ್ಯರ್ಥಿ. ಹೀಗಾಗಿ ಕ್ಷೇತ್ರದಲ್ಲಿ ಪ್ರಮುಖ ಅಭ್ಯರ್ಥಿ­ಗಳ್ಯಾರೂ ಕಬ್ಬಿನ ಬೆಲೆ ರಾಜಕಾರಣ ಮಾಡುತ್ತಿಲ್ಲ. ಈ ವಿಷಯ ಅಷ್ಟಾಗಿ ಚರ್ಚೆಯೇ ಆಗುತ್ತಿಲ್ಲ’ ಎನ್ನುವ ಅಸಮಾಧಾನ ಪ್ರಜ್ಞಾವಂತರದು.

ಜಾತಿ ಲೆಕ್ಕಾಚಾರ: ರಮೇಶ ಕತ್ತಿ ಲಿಂಗಾಯತ ಬಣಜಿಗರು. ಪ್ರಕಾಶ ಹುಕ್ಕೇರಿ ಲಿಂಗಾಯತ ಪಂಚಮ­ಸಾಲಿ ಸಮಾಜದವರು. ಕ್ಷೇತ್ರದಲ್ಲಿ ಒಟ್ಟು 14,35,510 ಮತದಾರರ ಪೈಕಿ ಸುಮಾರು 3.82 ಲಕ್ಷ ಲಿಂಗಾಯತ ಮತದಾರರಿದ್ದಾರೆ. ಇದರಲ್ಲಿ ಪಂಚಮಸಾಲಿಗಳೇ ಹೆಚ್ಚು.  ಜಾತಿ ಲೆಕ್ಕಾ­ಚಾರದಲ್ಲಿ ಮತದಾನ ನಡೆದರೆ, ಹುಕ್ಕೇರಿ ಅವರಿಗೆ ಇದು ‘ಪ್ಲಸ್‌ ಪಾಯಿಂಟ್‌’.

ಸುಮಾರು 1.72 ಲಕ್ಷ ಕುರುಬ ಮತದಾರನ್ನು ಸೆಳೆಯಲು ಪ್ರತಾಪರಾವ್‌ ಯತ್ನಿಸುತ್ತಿದ್ದಾರೆ. ಜೊತೆಗೆ ರಾಯಬಾಗ ತಾಲ್ಲೂಕಿ­ನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮತಗಳನ್ನೂ ಅವರು ಕಬಳಿಸುವ ಸಾಧ್ಯತೆಗಳಿವೆ. ಲಕ್ಷ್ಮಣರಾವ್‌ ಚಿಂಗಳೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದೇ ಇರುವುದರಿಂದ ಕ್ಷೇತ್ರದ ಕುರುಬ ಸಮಾಜದ ಮುಖಂಡರು ಪ್ರತಾಪ­ರಾವ್‌ ಕಡೆ ಒಲವು ತೋರಿಸುತ್ತಿದ್ದಾರೆ.

ಸುಮಾರು 1.46 ಲಕ್ಷ ಮತದಾರರು ಇರುವ ಮರಾಠ ಸಮಾಜದ ಮೇಲೆ ಶ್ರೀಮಂತ ಪಾಟೀಲರು ಕಣ್ಣಿಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ­ಯಲ್ಲಿ ನಿಪ್ಪಾಣಿ ಶಾಸಕ ಕಾಕಾಸಾಹೇಬ ಪಾಟೀಲರ ಸೋಲಿಗೆ ಹುಕ್ಕೇರಿ ಅವರ ಅಸಹಕಾರವೇ ಕಾರಣ ಎಂಬ ಸಿಟ್ಟು ಮರಾಠ ಸಮುದಾಯದಲ್ಲಿದೆ. ಹೀಗಾಗಿ ಈ ಬಾರಿ ಶ್ರೀಮಂತ ಪಾಟೀಲರತ್ತ ಒಲವು ತೋರುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ತೊಂದರೆ ಜಾಸ್ತಿ.
ಕ್ಷೇತ್ರದಲ್ಲಿರುವ ಸುಮಾರು 1.56 ಲಕ್ಷ ಮುಸ್ಲಿಂ, 1.52 ಲಕ್ಷ ಪರಿಶಿಷ್ಟ ಜಾತಿ, 1.27 ಲಕ್ಷ ಜೈನ ಮತದಾರರು ನಿರ್ಣಾಯಕ­ರಾಗಿದ್ದಾರೆ.
1991 ರ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್‌ ವಿರೋಧಿ ಕ್ಷೇತ್ರ ಎಂಬ ಪಟ್ಟವನ್ನು ಈ ಬಾರಿ ಸಚಿವ ಹುಕ್ಕೇರಿ ಅಳಿಸಿ ಹಾಕುವ ಮೂಲಕ, ‘ಪ್ರಕಾಶಿಸು’ತ್ತಾರೆಯೇ ಎಂಬ ಕುತೂಹಲ ಮೂಡಿದೆ.


ಹುಕ್ಕೇರಿಗೆ ‘ಬಿಸಿ ತುಪ್ಪ’!
ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಸಚಿವ ಸ್ಥಾನ ತೊರೆದು ದೆಹಲಿಗೆ ಹೋಗಬೇಕು ಅಕಸ್ಮಾತ್‌ ಆಯ್ಕೆಯಾಗದಿದ್ದರೆ, ಸಚಿವರಾಗಿಯೂ ಸೋತರು ಎಂಬ ಅಪಕೀರ್ತಿ. ಹೀಗಾಗಿ ಪ್ರಕಾಶ ಹುಕ್ಕೇರಿ ಅವರಿಗೆ ಚುನಾವಣೆ ನುಂಗಲಾರದ ಉಗುಳಲಾಗದ ‘ಬಿಸಿ ತುಪ್ಪ’ವಾಗಿ ಪರಿಣಮಿಸಿದೆ. 

ಜಿಲ್ಲೆಯ ಮೇಲೆ ರಾಜಕೀಯವಾಗಿ ಬಿಗಿ ಹಿಡಿತ ಸಾಧಿಸಲು ಹಿಂದುಳಿದ ಸಮಾಜದ ಜಾರಕಿಹೊಳಿ ಕುಟುಂಬ ಹಾಗೂ ಲಿಂಗಾಯತ ಸಮುದಾಯದ ಉಮೇಶ ಕತ್ತಿ, ಪ್ರಭಾಕರ ಕೋರೆ, ಪ್ರಕಾಶ ಹುಕ್ಕೇರಿ ಗುಂಪಿನ ನಡುವೆ ಶೀತಲ ಸಮರ ನಡೆಯುತ್ತಿದೆ. ಕಳೆದ ಬಾರಿ ಕೊನೆ ಕ್ಷಣದಲ್ಲಿ ಪ್ರಚಾರದಿಂದ ಹಿಂದೆ ಸರಿಯುವಂತೆ ಲಿಂಗಾಯತ ಮುಖಂಡರು ಹುಕ್ಕೇರಿ ಮೇಲೆ ಒತ್ತಡ ಹಾಕಿದ್ದರು. ಇದರಿಂದಾಗಿ ರಮೇಶ ಕತ್ತಿ ಆಯ್ಕೆಯಾದರು ಎಂಬ ಮಾತುಗಳು ಈ ಕ್ಷೇತ್ರದಲ್ಲಿ ಇಂದಿಗೂ ದಟ್ಟವಾಗಿ ಕೇಳುಬರುತ್ತಿವೆ.

ಈ ಬಾರಿ ಹುಕ್ಕೇರಿ ಅವರನ್ನು ಸಂಸದರನ್ನಾಗಿ ಮಾಡಿ ದೆಹಲಿಯತ್ತ ಕಳುಹಿಸಿದರೆ, ಜಿಲ್ಲೆಯ ಆಡಳಿತದ ಮೇಲೆ ತಾವು ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬ ಲೆಕ್ಕಾಚಾರ ಸಚಿವ ಜಾರಕಿಹೊಳಿ ಅವರದ್ದು. ಹೀಗಾಗಿ ಹುಕ್ಕೇರಿ ಅವರ ಹೆಸರನ್ನೇ ವರಿಷ್ಠರು ಅಂತಿಮಗೊಳಿಸುವಂತೆ ಜಾರಕಿಹೊಳಿ ತಮ್ಮ ‘ಕೈ’ಚಳಕ ತೋರಿಸಿದ್ದಾರೆ ಎಂಬ ಗುಸುಗುಸು ಇದೆ.

ಆದರೆ ಸಚಿವ ಸ್ಥಾನ ಬಿಡಲು ಮನಸ್ಸಿಲ್ಲದ ಹುಕ್ಕೇರಿ ವರಿಷ್ಠರ ಒತ್ತಡದಿಂದಾಗಿ ಒಲ್ಲದ ಮನಸ್ಸಿನಿಂದಲೇ ಸ್ಪರ್ಧೆಗೆ ಇಳಿದಿದ್ದಾರೆ. ಹೇಗಾದರೂ ಮಾಡಿ ಅವರನ್ನು ಗೆಲ್ಲಿಸಲೇಬೇಕು ಎಂದು ಕ್ಷೇತ್ರದಾದ್ಯಂತ ಜಾರಕಿಹೊಳಿ ಸಂಚರಿಸುತ್ತಿದ್ದಾರೆ!ರಾಜ್ಯದ ಸಚಿವರೊಬ್ಬರು ಲೋಕಸಭೆಗೆ ಸ್ಪರ್ಧಿಸುತ್ತಿರುವ ಏಕೈಕ ಕ್ಷೇತ್ರ ಚಿಕ್ಕೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT