ADVERTISEMENT

ಬಿಸಿಲ ಬೇಗೆ; ಬತ್ತುತ್ತಿರುವ ಕಿತ್ತೂರು ಕೆರೆ

ಪ್ರದೀಪ ಮೇಲಿನಮನಿ
Published 8 ಏಪ್ರಿಲ್ 2013, 8:07 IST
Last Updated 8 ಏಪ್ರಿಲ್ 2013, 8:07 IST

ಚನ್ನಮ್ಮನ ಕಿತ್ತೂರು: ಮಳೆ ಕೊರತೆ, ಬಿಸಿಲ ಬೇಗೆಯಿಂದಾಗಿ ಇಲ್ಲಿಯ ವಿಶಾಲ ಕೆರೆಗಳ ಅಂಗಳ ನೀರಿಲ್ಲದೆ ಬರಿದಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೆರೆಗಳ ಊರು ಎಂದೇ ಪ್ರಸಿದ್ಧಿಯಾಗಿರುವ ಕಿತ್ತೂರಿನ ಪರಿಸ್ಥಿತಿ ಬಿಗಡಾಯಿಸಲಿದೆ.

ತುಂಬುಕೆರೆ, ಚಂದ್ಯಾರ ಕೆರೆ, ರಣಗಟ್ಟಿ ಕೆರೆ, ಅರಿಷಿಣ ಕೆರೆ, ಸಕ್ಕರೆ ಕೆರೆ, ಅಗಳ, ಬಸವಣ್ಣನ ಹೊಂಡ ಮತ್ತು ಆನೆಹೊಂಡ ಇಲ್ಲಿನ ಜನರ ನೀರಿನ ಮೂಲವಾಗಿದ್ದವು. ಇವುಗಳಲ್ಲಿ ತುಂಬುಕೆರೆ, ಚಂದ್ಯಾರ ಕೆರೆ, ಬಸವಣ್ಣನ ಹೊಂಡದ ಒಡಲಲ್ಲಿ ಸ್ವಲ್ಪ ಪ್ರಮಾಣದ ನೀರಿದೆ. ಆದರೆ, ಕೋಟೆಗೆ ಆಶ್ರಯಿಸಿಕೊಂಡಿರುವ ಅಂಗಳದಲ್ಲಿ ಪ್ರಾಣಿ ಪಕ್ಷಿಗಳಿಗೆ ಸಹ ಕುಡಿಯಲು ನೀರಿಲ್ಲವಾಗಿದೆ. ಸಕ್ಕರೆಗೆರೆ, ಅರಿಷಿಣಗೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಬಳಸಲು ಯೋಗ್ಯವಾಗಿಲ್ಲ ಎಂದು ಇಲ್ಲಿನ ಜನತೆ ದೂರುತ್ತಾರೆ.

ಅಕಾಲಿಕ ಮಳೆ, ಕೆರೆ ಕಾಲುವೆಗಳ ಅತಿಕ್ರಮಣ, ದೂರದೃಷ್ಟಿ ಯೋಜನೆಗಳಿಲ್ಲದೇ ಇರುವುದರಿಂದ ಇಲ್ಲಿನ ಕೆರೆಗಳು ಬೇಸಿಗೆಯಲ್ಲಿ ನೀರಿಲ್ಲದೆ ಭಣಗುಟ್ಟುವ ಪರಿಸ್ಥಿತಿ ಬಂದಿದೆ. ಮಳೆ ಕೊರತೆಯಿಂದಾಗಿ ಅಂತರ್ಜಲ ಪಾತಾಳಕ್ಕಿಳಿದಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ 13ರಿಂದ 15ದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲು ಗ್ರಾಮ ಪಂಚಾಯ್ತಿ ನಿರ್ಧರಿಸಿದೆ.

ಗಬ್ಬೆದ್ದ ಕೆರೆಗಳು: ಸೋಮವಾರ ಪೇಟೆಯಲ್ಲಿ ಸಕ್ಕರೆಗೆರೆ ನೀರನ್ನು ಕುಡಿಯುವುದಕ್ಕಾಗಿ ಬಳಸುವ ಕಾಲವೊಂದಿತ್ತು. ರಣಗಟ್ಟಿ ಕೆರೆಯ ನೀರನ್ನು ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು ಬಳಸುತ್ತಿದ್ದರು. ಆದರೆ ಶೌಚ ಮತ್ತು ಚರಂಡಿ ನೀರು ಇಲ್ಲಿಗೆ ಬಂದು ಸೇರುತ್ತಿದ್ದು ಬಳಕೆಗೆ ಯೋಗ್ಯವಲ್ಲ. ಅರಿಷಿಣ ಕೆರೆ, ತುಂಬುಕೆರೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಕೊರತೆ: ಸಕಾಲದಲ್ಲಿ ಹೂಳು ತೆಗೆಯುವುದು, ಮಾಲಿನ್ಯಕ್ಕೆ ಆಸ್ಪದಕೊಡದೇ ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದರೆ ಇಂದು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಂತರ್ಜಲದ ಮಟ್ಟವೂ ಕುಸಿಯುತ್ತಿರಲಿಲ್ಲ.

  ಆಪತ್ತು ಬಂದಾಗ ಎಚ್ಚೆತ್ತುಕೊಳ್ಳುವ ಬದಲು ಈ ಮೊದಲೇ ನೀರನ್ನು ಸದ್ಭಳಕೆ ಮಾಡಲು ಪ್ರತಿಯೊಬ್ಬರೂ ಪಣತ್ತೊಟ್ಟಿದ್ದರೆ ಪರಿಸ್ಥಿತಿ ಇಷ್ಟು ಕೆಡುತ್ತಿರಲಿಲ್ಲ ಎಂಬುದು ಪ್ರಜ್ಞಾವಂತರ ಸ್ಪಷ್ಟೋಕ್ತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.