ADVERTISEMENT

ಬೀದಿಗೆ ಬಿದ್ದ ಐದು ಕುಟುಂಬಗಳು

ಪಣಗುತ್ತಿ ಗ್ರಾಮದಲ್ಲಿ ಐದು ಗುಡಿಸಲುಗಳಿಗೆ ಬೆಂಕಿ, ನಗದು ಭಸ್ಮ, ಜಾನುವಾರು ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 5:00 IST
Last Updated 27 ಮಾರ್ಚ್ 2018, 5:00 IST
ಬೆಳಗಾವಿ ತಾಲ್ಲೂಕಿನ ಪಣಗುತ್ತಿಯಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿರುವುದು
ಬೆಳಗಾವಿ ತಾಲ್ಲೂಕಿನ ಪಣಗುತ್ತಿಯಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿರುವುದು   

ಬೆಳಗಾವಿ: ತಾಲ್ಲೂಕಿನ ಪಣಗುತ್ತಿ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಐದು ಗುಡಿಸಲುಗಳು ಸಂಪೂರ್ಣ ಸುಟ್ಟುಹೋಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಐದು ಕುಟುಂಬಗಳ 23 ಜನರ ಬದುಕು ಬೀದಿಗೆ ಬಿದ್ದಿದೆ.

ಮಾರ್ಕಂಡೇಯ (ರಂಗಧೂಳಿ) ಯೋಜನೆಯಲ್ಲಿ ಜಮೀನು ಕಳೆದುಕೊಂಡ ಗ್ರಾಮದ ಅಪ್ಪಯ್ಯ ಸಣ್ಣಗಂಗಪ್ಪ ಹಳಬರ, ಭೀಮಪ್ಪ ಸಣ್ಣಗಂಗಪ್ಪ ಹಳಬರ, ಬಸಪ್ಪ ಸಣ್ಣಗಂಗಪ್ಪ ಹಳಬರ, ಸಿದ್ದಪ್ಪ ನಾಗಪ್ಪ ನಿಂಗಾವತಿ, ಈರಪ್ಪ ಸಿದ್ದಪ್ಪ ಮ್ಯಾಕಲಿ ಕುಟುಂಬದವರ ಮನೆಗಳು ಸುಟ್ಟಿವೆ. ಗುಜನಾಳ ಗ್ರಾಮ ಸಮೀಪದ ಅಂಕಲಗಿಯ ವ್ಯಾಪ್ತಿಯಲ್ಲಿ ಜಮೀನನ್ನು ಬೇಸಾಯಕ್ಕೆ ಪಡೆದು, ಅಲ್ಲಿಯೇ ಗುಡಿಸಲುಗಳನ್ನು ಕಟ್ಟಿಕೊಂಡು ಅವರು ವಾಸವಿದ್ದರು.

ಬೇಸಾಯಕ್ಕೆ ಪಡೆದಿದ್ದ ಗುತ್ತಿಗೆ ಅವಧಿ ಮುಗಿದಿದ್ದರಿಂದ ಮಾಲೀಕರು ಹಣ ನೀಡಿ, ಜಮೀನು ತಮ್ಮ ವಶಕ್ಕೆ ನೀಡುವ ವಾಗ್ದಾನ ನೀಡಿದ್ದರು. ಆ ಹಣದಿಂದ ಬೇರೆ ಜಮೀನನ್ನು ಬೇಸಾಯಕ್ಕೆ ಪಡೆಯಲು ಮಾತುಕತೆ ನಡೆಸಿ ₹ 15 ಲಕ್ಷವನ್ನು ಗುಡಿಸಲಿನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ADVERTISEMENT

‘ಎಲ್ಲರೂ ಮಲಗಿದ್ದೆವು. ಗುಡಿಸಲಿನ ಬಳಿ ನಿಂತಿದ್ದ ಬೈಕ್ ಟೈಯರ್ ಸ್ಫೋಟದಿಂದಾಗಿ ಎಚ್ಚರಗೊಂಡು ನೋಡಿದಾಗ ಸ್ವಲ್ಪ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ನಂತರ ಎಲ್ಲರೂ ಹೊರಗಡೆಗೆ ಓಡಿ ಬಂದೆವು. ಗುಡಿಸಲುಗಳಲ್ಲಿದ್ದ 2 ಹೋರಿ, 2 ಎಮ್ಮೆ, ಒಂದು ಕೋಣ, 40 ಕುರಿಗಳು, 50 ಕೋಳಿಗಳು, 40 ಚೀಲ ಜೋಳ, ಬಟ್ಟೆ, ಪಾತ್ರೆಗಳು ಹಾಗೂ ಟ್ರಂಕ್‌ನಲ್ಲಿದ್ದ ₹ 15 ಲಕ್ಷ ನಗದು, 30 ತೊಲಿ ಬಂಗಾರ ಸಂಪೂರ್ಣ ಸುಟ್ಟು ಹೋಗಿವೆ.

ಕೆಲವರಿಗೆ ಗಾಯಗಳಾಗಿವೆ’ ಎಂದು ಸಂತ್ರಸ್ತರು ಮಾಧ್ಯಮದವರಿಗೆ ತಿಳಿಸಿದರು.

ಈ ಕುಟುಂಬಗಳಿಗೆ ಗುಜನಾಳದ ಮುಖಂಡ ಭೀಮಗೌಡ ಪೋಲೀಸಗೌಡ ಅವರು ಸಮುದಾಯ ಭವನದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದರು. ಊಟದ ವ್ಯವಸ್ಥೆಯನ್ನೂ ಮಾಡಿದರು. ‘ಶಿರೂರ ಆಣೆಕಟ್ಟಿಯಿಂದಾಗಿ ಜಮೀನು ಕಳೆದುಕೊಂಡಿದ್ದವರು ಬದುಕು ಕಟ್ಟಿಕೊಳ್ಳಲು ಗುಜನಾಳ ಗ್ರಾಮಕ್ಕೆ ಬಂದು ದುಡಿಯುತ್ತಿದ್ದರು.

ಅವರ ಬದುಕು ಈಗ ಬೀದಿಗೆ ಬಿದ್ದಿದೆ. ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಯತ್ನಿಸಲಾಗುವದು’ ಎಂದು ತಿಳಿಸಿದರು.

ಸ್ಥಳಕ್ಕೆ ಗೋಕಾಕ ಡಿವೈಎಸ್ಪಿ ಡಿ.ಟಿ. ಪ್ರಭು ಭೇಟಿ ನೀಡಿ ಪರಿಶೀಲಿಸಿದರು. ಅರ್ಧ ಚೀಲ ಅಕ್ಕಿ ವಿತರಿಸಿ ಮಾನವೀಯತೆ ಮೆರೆದರು. ಗ್ರೇಡ್-2 ತಹಶೀಲ್ದಾರ್‌ ಎಸ್.ಕೆ. ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.