ADVERTISEMENT

ಬೆಳಗಾವಿಯ ಬಾನಲ್ಲಿ ಪತಂಗಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 6:40 IST
Last Updated 16 ಜನವರಿ 2012, 6:40 IST
ಬೆಳಗಾವಿಯ ಬಾನಲ್ಲಿ ಪತಂಗಗಳ ಮೆರವಣಿಗೆ
ಬೆಳಗಾವಿಯ ಬಾನಲ್ಲಿ ಪತಂಗಗಳ ಮೆರವಣಿಗೆ   

ಬೆಳಗಾವಿ: ಬಾನಲ್ಲಿ ತೇಲಿ ಬರುತ್ತಿದ್ದ ತಂಗಾಳಿಯಲ್ಲಿ ಪತಂಗಗಳ ಮೆರವಣಿಗೆ; ವೈವಿಧ್ಯಮಯ ಗಾಳಿಪಟಗಳ ನಡುವೆ ಜುಗಲ್ ಬಂದಿ. ಜೊತೆಗೆ ಮೈಕಲ್ ಜಾಕ್ಸನ್ ನೃತ್ಯ...!

ಅಬ್ಬಬ್ಬಾ! ಒಂದೋ, ಎರಡೋ. ಯಾವುದನ್ನು ನೋಡಬೇಕು, ಯಾವುದನ್ನು ಬಿಡಬೇಕು ಎಂಬುದೇ ತಿಳಿಯದಷ್ಟು ಗಾಳಿಪಟುಗಳು ಆಗಸದಲ್ಲಿ ಚಿತ್ತಾರವನ್ನು ಮೂಡಿಸಿದ್ದವು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ ಪರಿವಾರವು ಬೆಳಗಾವಿಯ ನಾನಾವಾಡಿ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 2ನೇ ಅಂರರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶ- ವಿದೇಶಗಳ ಪಟುಗಳು ತಾವು ತಂದಿದ್ದ ಬಗೆ ಬಗೆಯ ಬೃಹತ್ ಗಾಳಿಪಟಗಳನ್ನು ಹಾರಿಸಿ ಜನಮನ ಸೆಳೆದರು. ಬಣ್ಣ ಬಣ್ಣದ ಪತಂಗಗಳನ್ನು ತೋರಿಸಿ ಕನಸಿನ ಲೋಕಕ್ಕೇ ಕೊಂಡೊಯ್ದರು.

ಪತಂಗಗಳ ಮೆರವಣಿಗೆ: ಕೊರಿಯಾ ಕೈಟ್ ಅಸೋಸಿಯೇಶನ್ ತಂಡದವರು ಸುಮಾರು ಬಣ್ಣಬಣ್ಣದ 150ಕ್ಕೂ ಹೆಚ್ಚು ಗಾಳಿಪಟಗಳಿರುವ ಸರಮಾಲೆಯನ್ನು ಹಾರಿಸಿ ಗಮನ ಸೆಳೆದರು. ಅದೇ ರೀತಿ ಮೈಸೂರಿನ ಲೇಡಿಸ್ ಕೈಟ್ ಕ್ಲಬ್‌ನವರು ನೂರಕ್ಕೂ ಹೆಚ್ಚು ಗಾಳಿಪಟಗಳಿರುವ ಸರಮಾಲೆಯನ್ನು ಹಾರಿಸಿ ಬಾನಲ್ಲಿ ಪತಂಗಗಳ ಮೆರವಣಿಗೆಯನ್ನೇ ನಡೆಸಿದರು.

“ಅಹಮದಾಬಾದ್‌ನಲ್ಲಿ ನಾವು ಹಾರಿಸಿದ ಈ ಗಾಳಿಪಟಕ್ಕೆ ಬಹುಮಾನ ಸಿಕ್ಕಿತ್ತು. ಅಲ್ಲಿ 500 ಗಾಳಿಪಟಗಳಿರುವ ಸರಮಾಲೆಯನ್ನು ಹಾರಿಸಿದ್ದೇವು. ಇಲ್ಲಿ ಗಾಳಿ ಸ್ವಲ್ಪ ಕಡಿಮೆ ಇರುವುದರಿಂದ ಹೆಚ್ಚೆಂದರೆ 200 ಗಾಳಿಪಟಗಳನ್ನು ಹಾರಿಸಲು ಸಾಧ್ಯ” ಎನ್ನುತ್ತಾರೆ ಲೇಡಿಸ್ ಕೈಟ್ ಕ್ಲಬ್ ತಂಡದ ನಾಯಕಿ ಪೂರ್ಣಿಮಾ.

ಯುದ್ಧ ವಿಮಾನ: ಬೆಂಗಳೂರಿನ `ಟೀಮ್ ಇಂಡಿಯಾ~ ತಂಡವು ಹಾರಿಸಿದ `ಸನ್ ಕೈಟ್~ ಗಾಳಿಪಟವು ಯುದ್ಧ ವಿಮಾನದಂತೆ ಶಬ್ದ ಮಾಡುತ್ತಿದ್ದವು. ಇಲ್ಲಿ ಎರಡು ಜೋಡಿ ಗಾಳಿಪಟ ಸೇರಿಸಿ ಹಾರಿಸಿರುವ ತಂಡದ ಮುಖ್ಯಸ್ಥ ನಿರಂಜನ್ ರಾವ್, “ಈ ಗಾಳಿಪಟ ಹಾರಿಸಲು ವಿಶಾಲ ಪ್ರದೇಶ ಅಗತ್ಯವಿದೆ. ಬೀಚ್‌ನಲ್ಲಾದರೆ, 15 ಗಾಳಿಪಟವನ್ನು ಸೇರಿಸಿ ಹಾರಿಸುತ್ತೇವೆ. ಆಗ ಹೊರಹೊಮ್ಮುವ ಶಬ್ದ ಯುದ್ಧ ವಿಮಾನಗಳು `ಏರ್ ಶೋ~ ನಡೆಸಿದಂತೆ ಭಾಸವಾಗುತ್ತದೆ” ಎಂದು ಹೇಳಿದರು.

ಹಾರಿದ ಕ್ಯಾಮೆರಾ: ಫ್ರಾನ್ಸ್‌ನ ನಿಕೋಲಸ್‌ಗೆ `ಏರಿಯಲ್ ವ್ಯೆ~ ಫೋಟೊಗ್ರಫಿ ಮಾಡುವುದೆಂದರೆ ಇಷ್ಟ. ಇದಕ್ಕೆ ಅವರು ಆಯ್ದುಕೊಂಡ ಮಾರ್ಗ ಗಾಳಿಪಟ ಹಾರಿಸುವುದು. ತಮ್ಮ `ಕ್ಯಾನಾನ್ ಕ್ಯಾಮೆರಾ~ವನ್ನು ಬೃಹತ್ ಗಾಳಿಪಟದ ದಾರಕ್ಕೆ ಕಟ್ಟಿ ಮೇಲಕ್ಕೆ ಹಾರಿಸಿ ಬಿಡುತ್ತಾರೆ. ರಿಮೋಟ್ ಕಂಟ್ರೋಲ್ ಮೂಲಕ ಸುತ್ತ-ಮುತ್ತಲಿನ ಪ್ರದೇಶದ ಚಿತ್ರವನ್ನು ತೆಗೆಯುತ್ತಾರೆ. “ಸುಮಾರು 30ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಗಾಳಿಪಟೋತ್ಸವದಲ್ಲಿ ಪಾಲ್ಗೊಂಡಿದ್ದೇನೆ. ಹಲವು ದೇಶಗಳಲ್ಲಿ `ಏರಿಯಲ್ ವ್ಯೆ~ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದೇನೆ” ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ಇಂಡೋನೇಷ್ಯಾದ ಸಾಂಪ್ರದಾಯಿಕ ಉಡುವೆಯಲ್ಲಿ ಆಗಮಿಸಿದ್ದ ಹೆಲ್ಮಿ ಗಿನಟ್ಟಿ, ಬೃಹತ್ ಗಾತ್ರದ `ಗಾಡ್ ಕೈಟ್~ ಹಾರಿಸಿ ಗಮನ ಸೆಳೆದರು. ಬೃಹತ್ ಗಾಳಿಪಟದ ಮೇಲೆ `ಐ ಲವ್ ಹುಬ್ಬಳ್ಳಿ~ ಎಂದು ಬರೆದಿರುವ ಬಗ್ಗೆ ಹೆಲ್ಮಿ ಅವರನ್ನು ವಿಚಾರಿಸಿದಾಗ, “ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಇರುವುದರಿಂದ ಹುಬ್ಬಳ್ಳಿಯಲ್ಲೇ ಗಾಳಿಪಟ ಉತ್ಸವ ನಡೆಯುತ್ತಿದೆ ಎಂದುಕೊಂಡು ಹೀಗೆ ಬರೆದಿದ್ದೆವು. ಅಯ್ಯೋ! `ಐ ಲವ್ ಬೆಳಗಾವಿ~ ಎಂದು ಬರೆಯಬೇಕಿತ್ತಲ್ಲವೇ?” ಎಂದು ನಕ್ಕರು.

ಫ್ರಾನ್ಸ್‌ನ ಫ್ಯಾಟ್ಕಿನ್ ರಾಬಿನ್ ತಂಡವು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಇವರು ತಂದಿದ್ದ ಬೃಹತ್ ಗಾತ್ರದ ಖ್ಯಾತ ಪಾಪ್ ಗಾಯಕ ಮೈಕಲ್ ಜಾಕ್ಸನ್ ಮಾದರಿಯ ಗಾಳಿಪಟ ಮೆಚ್ಚುಗೆ ಪಡೆಯಿತು. ಸ್ಪ್ರಿಂಗ್‌ಗಳನ್ನು ಅಳವಡಿಸಿದ್ದ ಜಾಕ್ಸನ್ ಮಾದರಿಯ ಗಾಳಿಪಟವು ಬಾನಲ್ಲಿ `ಬ್ರೇಕ್ ಡ್ಯಾನ್ಸ್~ ಮಾಡುವುದನ್ನು ಕಂಡು ಚಕಿತಗೊಂಡರು.

ಜರ್ಮನಿಯ ರೋಲ್ಫ್ ಸ್ಟರ್ಮ್ ವಿಮಾನ ಮಾದರಿಯ ದೊಡ್ಡ ಗಾಳಿಪಟ; ದಕ್ಷಿಣ ಆಫ್ರಿಕಾದ ಜಕ್ವಿ ಅವರು ಸುಂದರ ಪಾತರಗಿತ್ತಿ ರೂಪದ ಗಾಳಿಪಟ ಹಾರಿಸಿದರು. ಪೆಂಗ್ವಿನ್, ಮೀನು, ಚೋಟಾ ಭೀಮಾ, ಜೋಕರ್, ಸೀ ಹಾರ್ಸ್, ಗಜರಾಜ, ಯಕ್ಷಗಾನ ಮುಖವಾಡ, ಕಥಕ್ಕಳಿ, ಬ್ಯಾಟ್‌ಮನ್, ಪಕ್ಷಿ, ಜೋಕರ್... ಹೀಗೆ ಹಲವು ಆಕರ್ಷಕ ಗಾಳಿಪಟಗಳನ್ನು ದೇಶ-ವಿದೇಶಗಳಿಂದ ಆಗಮಿಸಿದ್ದ ಪಟುಗಳು ಬಾನಲ್ಲಿ ತೇಲಿ ಬಿಟ್ಟರು. ಇಂಗ್ಲೆಂಡ್, ಅಮೆರಿಕಾ, ಟರ್ಕಿ, ಸಿಂಗಾಪುರ, ಐರ‌್ಲೆಂಡ್, ನೆದರಲ್ಯಾಂಡ್ ಸೇರಿದಂತೆ 22 ವಿದೇಶಿ ತಂಡಗಳ 50ಕ್ಕೂ ಹೆಚ್ಚು ಪಟುಗಳು ಹಾಗೂ ದೇಶದ ವಿವಿಧ ರಾಜ್ಯಗಳ ಸುಮಾರು 25 ತಂಡಗಳ 80 ಪಟುಗಳು ಸಂಕ್ರಾಂತಿ ಹಬ್ಬದಂದು ರಸದೌತಣ ಉಣಬಡಿಸಿದರು. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನಾನಾವಾಡಿ ಮೈದಾನಕ್ಕೆ ಜನಸಾಗರವೇ ಹರಿದು ಬರುತ್ತಿತ್ತು.

ಉದ್ಘಾಟನೆ: 2ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಕೆಆರ್‌ಡಿಸಿಎಲ್ ಅಧ್ಯಕ್ಷ ಕಳಕಪ್ಪ ಬಂಡಿ ಅವರು ಗಾಳಿಪಟ ಮಾದರಿಯ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ರಾಷ್ಟ್ರಧ್ವಜದ ಗಾಳಿಪಟಗಳ ಸರಮಾಲೆಯನ್ನು ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವ ಸಂಘಟಿಸಿದ್ದ ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬುಡಾ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.