ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:05 IST
Last Updated 19 ಡಿಸೆಂಬರ್ 2012, 9:05 IST

ಬೆಳಗಾವಿ: ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಗ್ರೂಪ್ ಡಿ ನೌಕರರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಡಿ ಗ್ರುಪ್ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಇಲಾಖೆಸಿಬ್ಬಂದಿಗೆ ಪ್ರತಿ ತಿಂಗಳ ವೇತನವು ಸರಿಯಾಗಿ ಸಿಗುವ ವ್ಯವಸ್ಥೆ ಮಾಡಬೇಕು. ಹೊರ ಗುತ್ತಿಗೆ ಅಧಾರದ ನೇಮಕಾತಿಯನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಗೊಳಿಸಬೇಕು.  ಗ್ರೂಪ್ ಡಿ ನೌಕರರಿಗೆ ಪೊಲೀಸ್ ಇಲಾ ಖೆಯಲ್ಲಿರುವಂತೆ ಪಡಿತರ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.

ವೈದ್ಯಕೀಯ ಚಿಕಿತ್ಸೆಗೆ ಆರೋಗ್ಯಭಾಗ್ಯ ಯೋಜನೆ ಸೌಲಭ್ಯ ನೀಡಬೇಕು. ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿಯವರೆಗೆ ಉಚಿತ ವಿದ್ಯಾಭ್ಯಾಸ ಸಿಗುವಂತಾಗಬೇಕು.

ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮತ್ತು ಕಚೇರಿಗಳ ರಾತ್ರಿ ಕಾವಲುಗಾರರಿಗೆ ಸರ್ಕಾರಿ ರಜೆ ದಿನಗಳ 30 ದಿನದ ವಿಶೇಷ ವೇತನ ಮಂಜೂರು ಮಾಡಬೇಕು. ಎಸ್‌ಎಸ್‌ಎಲ್‌ಸಿ ಪಾಸಾದ ಗ್ರೂಪ್ ಡಿ ನೌಕರರಿಗೆ ಇಲಾಖೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು.

ಖಾಲಿ ಇರುವ ಒಟ್ಟು ಹುದ್ದೆಗಳ ಶೇ. 33 ರಷ್ಟು ಸ್ಥಾನಗಳಿಗೆ ಮುಂಬಡ್ತಿ ದೊರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಗ್ರೂಪ್ ಡಿ ನೌಕರರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗ್ರೂಪ್ ಡಿ  ನೌಕರರ ಕಲ್ಯಾಣ ಸಮಿತಿಗಳನ್ನು ರಚಿಸ ಬೇಕು.  ವಾಲಿಕಾರರನ್ನು ಗ್ರೂಪ್ ಡಿ ನೌಕರರೆಂದು ಪರಿಗಣಿಸಿ ಕಾಯಂ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿ.ಬಿ.ರೆಡ್ಡಿ, ಎನ್.ಬಿ.ರಾಜಾಪುರ, ಎಂ.ಬಿ.ವಿರಕ್ತಿಮಠ, ಕೆ.ಎಂ.ಭದ್ರಕಾಳಿ, ಪ್ರವೀಣ ಮೆತ್ರಿ, ಎ.ಬಿ. ಹಕೀಂ, ಆರ್. ಎಸ್.ಮುತಗಿ, ಬಿ.ಕೆ. ಕುಲಕರ್ಣಿ, ಬಿ.ಬಿ. ಗುರವಣ್ಣವರ, ಎ.ಎ.ಮುಲ್ಲಾ, ಖಾಜಿ, ಪಿ.ಎನ್. ಪಾಟೀಲ, ಮಧು ಪಾಟೀಲ, ದೊಡ್ಡಮನಿ, ಶಂಕರ ಬ್ಯಾಕೋಡ, ಭೋಸಲೆ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.