ADVERTISEMENT

ಭಜನೆ ಮಾಡಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 10:50 IST
Last Updated 20 ಜನವರಿ 2011, 10:50 IST

ಚನ್ನಮ್ಮನ ಕಿತ್ತೂರು: ‘ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಈ ಬಾರಿ ಕಬ್ಬು ಪೂರೈಕೆ ಮಾಡಿದ ಬೆಳೆಗಾರರಿಗೆ ಪ್ರತಿ ಮೆಟ್ರಿಕ್ ಟನ್‌ಗೆ ಎರಡು ಸಾವಿರ ರೂಪಾಯಿ ನೀಡಬೇಕು’ ಎಂದು ಆಗ್ರಹಿಸಿ ಕಾರ್ಖಾನೆ ಆಡಳಿತ ಮಂಡಳಿ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿತು.

ಭಜನೆ ಮಾಡುವ ಮೂಲಕ ರೈತರು ವಿನೂತನ ರೀತಿ ಪ್ರತಿಭಟನೆ ವ್ಯಕ್ತ ಮಾಡಿದ್ದು ಇಂದಿನ ವಿಶೇಷವಾಗಿತ್ತು. ಶಾಮಿಯಾನ ಕೂಡ ಹೆಚ್ಚು ಬೆಳೆಸಿದ್ದು ಕಂಡು ಬಂದಿತು.
‘ಬೆಂಗಳೂರಿನ ಸಕ್ಕರೆ ನಿರ್ದೇಶನಾಲಯ ಆಯುಕ್ತರು ಸೂಚನೆ ನೀಡಿದ ಪ್ರಕಾರ ಟನ್ ಕಬ್ಬಿಗೆ ಎರಡು ಸಾವಿರ ರೂಪಾಯಿ ನೀಡಬೇಕು. ಅದರಲ್ಲಿ ಪ್ರಥಮ ಕಂತಾಗಿ ರೂ.1800 ಪಾವತಿಸಬೇಕು’ ಎಂಬುದು ಅವರ ಬೇಡಿಕೆಗಳಲ್ಲಿ ಪ್ರಮುಖವಾಗಿವೆ.

ಸ್ಪಂದನೆಯಿಲ್ಲ: ‘ಕಳೆದ ಮೂರು ದಿನಗಳಿಂದ ಬಿಲ್ ನಿಗದಿಗಾಗಿ ಪ್ರಾರಂಭಿಸಿದ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದರೂ ಇದಕ್ಕೆ ಆಡಳಿತ ಮಂಡಳಿಯ ಯಾರೊಬ್ಬ ಚುನಾಯಿತ ನಿರ್ದೇಶಕರು ಸ್ಪಂದನೆ ನೀಡಿಲ್ಲ’ ಎಂದು ಬಸನಗೌಡ ಸಿದ್ರಾಮನಿ ದೂರಿದರು.

‘ಇಲ್ಲಿಯವರೆಗೆ ಎರಡು ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು ಕೇವಲ ಒಂದು ಲಕ್ಷ ಟನ್ನಿನ ಬಿಲ್ ಬಿಡುಗಡೆ ಮಾಡಿದ್ದಾರೆ. ಮನವಿ ಕೊಟ್ಟ ನಂತರ ಪ್ರಥಮ ಕಂತಾಗಿ ರೂ.1600ಬಿಡುಗಡೆ ಮಾಡಿದ್ದು ಸರಿಯಲ್ಲ. ಮೊದಲ ಕಂತಾಗಿ ರೂ. 1800 ಪಾವತಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕಾರ್ಖಾನೆಗೆ ಈಗಾಗಲೇ ರೂ. 98ಕೋಟಿ ಸಾಲವಿದೆ. ವಿದ್ಯುತ್ ಉತ್ಪಾದನೆ ಮತ್ತು ವಿಸ್ತರಣೆ ಯೋಜನೆಗಾಗಿ ರೂ. 204ಕೋಟಿ ಸಾಲದ ಮಂಜೂರಾತಿ ದೊರೆತಿದೆ. ಇಷ್ಟು ಮೊತ್ತದ ಸಾಲ ಮಾಡುವ ಹಿಂದಿನ ರಹಸ್ಯವಾದರೂ ಏನು?’ ಎಂದು ಸಿದ್ರಾಮನಿ ಪ್ರಶ್ನಿಸಿದರು.

ಮಾಜಿ ಕಾರ್ಖಾನೆ ಅಧ್ಯಕ್ಷ ದೊಡಗೌಡ್ರ ಪಾಟೀಲ, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರಗೌಡ ಪಾಟೀಲ, ಚಿನ್ನಪ್ಪ ಮುತ್ನಾಳ, ರಾಮಣ್ಣ ಹೈಬತ್ತಿ, ಶಿವಾನಂದ ಮಾರಿಹಾಳ, ಸಿದ್ದು ಮುತ್ನಾಳ, ಭೀಮಶಿ ಹೈಬತ್ತಿ, ಜಗದೀಶಗೌಡ ಪಾಟೀಲ, ನಿಜಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಬುಧವಾರದ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.