ADVERTISEMENT

ಮದ್ಯದಂಗಡಿ ಬಂದ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:31 IST
Last Updated 24 ಮೇ 2017, 9:31 IST

ಮೂಡಲಗಿ: ಇಲ್ಲಿಗೆ ಸಮೀಪದ ಹಳ್ಳೂರ ಗ್ರಾಮದಲ್ಲಿ ಮದ್ಯದಂಗಡಿ ಶಾಶ್ವತವಾಗಿ ಬಂದ್ ಮಾಡಿ ಗ್ರಾಮದಿಂದ ತೆರವು ಗೊಳಿಸಬೇಕು ಎಂದು ನೂರಾರು ಮಹಿಳೆಯರು ಗ್ರಾಮದಲ್ಲಿ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

‘ಮದ್ಯದಂಗಡಿ ಬಂದ್‌ ಮಾಡಿ ಕುಟುಂಬಗಳ ಜೀವ ಉಳಿಸಿ’ ಎಂದು ಮಹಿಳೆಯರು ಘೋಷಣೆಗಳನ್ನು ಹಾಕಿದರು. ಗ್ರಾಮದ ಎಲ್ಲ ರಸ್ತೆಗಳಲ್ಲಿ ಘೋಷಣೆಗಳನ್ನು ಹಾಕುತ್ತಾ ಗ್ರಾಮ ಪಂಚಾಯ್ತಿ ಬಳಿ ಪೂರ್ವ ನಿರ್ಧಾರದಂತೆ  ಗ್ರಾಮದಲ್ಲಿರುವ ಮದ್ಯದಂಗಡಿ ಬಂದ್‌ ಮಾಡುವವರೆಗೆ ಹೋರಾಟಗಾರರು ಆಮರಣ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು.

ಸ್ಥಳಕ್ಕೆ ಬಂದಿದ್ದ ಗೋಕಾಕ ತಹಶೀಲ್ದಾರ್‌ ಜಿ.ಎಸ್. ಮಳಗಿ, ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳು ಮದ್ಯದಂಗಡಿ ಬಂದ್‌ ಮಾಡುವುದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ, ಉಪವಾಸ ಸತ್ಯಾಗ್ರಹವನ್ನು ಕೈಬಿಡಲು ಹೋರಾಟಗಾರರಿಗೆ ಮನವಿ ಮಾಡಿ ಕೊಂಡರು.

ADVERTISEMENT

ಆದರೆ ಮದ್ಯದಂಗಡಿಯನ್ನು ಬಂದ್‌ ಮಾಡುವ ಬಗ್ಗೆ ಲಿಖಿತವಾಗಿ ನೀಡಿದರೆ ಮಾತ್ರ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯುವುದಾಗಿ ಹೋರಾಟ ಗಾರರು ಪಟ್ಟು ಹಿಡಿದು ಸತ್ಯಾಗ್ರಹವನ್ನು ಮುಂದುವರಿಸಿದರು.

ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಲಕ್ಷ್ಮಣ ಸಪ್ತಸಾಗರ ಮಾತನಾಡಿ ‘ಈ ಹಿಂದೆ ಗ್ರಾಮಸ್ಥರ ಉಗ್ರ ಹೋರಾಟದಿಂದ ಮದ್ಯದಂಗಡಿಯು ಆರು ತಿಂಗಳವರೆಗೆ ಬಂದ್‌ ಆಗಿತ್ತು. ಆದರೆ ಮದ್ಯದಂಗಡಿ ಮಾಲೀಕರು ಇಲಾಖೆಗೆ ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿಯನ್ನು ನೀಡಿ ವಾಮ ಮಾರ್ಗದಲ್ಲಿ ಗ್ರಾಮದಲ್ಲಿ ಮತ್ತೆ ಎರಡು ತಿಂಗಳ ಹಿಂದೆ ಅನುಮತಿ ತಂದು  ಮದ್ಯದಂಗಡಿ ಪ್ರಾರಂಭಿಸಿದ್ದಾರೆ.

ಇದರಿಂದ ಗ್ರಾಮದ ಅನೇಕ ಕುಟುಂಬ ಗಳು ಮತ್ತೆ ಗೋಳಾಡುವಂತಾಗಿದೆ’ ಎಂದು ದೂರಿದರು. ಗ್ರಾಮದಲ್ಲಿರುವ ಮದ್ಯದಂಗಡಿ ಬಂದ್‌ ಆಗುವವರೆಗೆ ಆಮರಣ ಉಪವಾಸ ಮುಂದುವರಿಸಲಾಗುವುದು ಎಂದು ಲಕ್ಷ್ಮಣ ಸಪ್ತಸಾಗರ ಪಟ್ಟುಹಿಡಿದರು, ಅದಕ್ಕೆ ನೂರಾರು ಮಹಿಳೆಯರು ಬೆಂಬಲ ಸೂಚಿಸಿದರು.

ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಕೆಲವು ಮಹಿಳೆಯರು ಮದ್ಯದಂಗಡಿಯಿಂದಾದ ತಮ್ಮ ಕುಟುಂಬದಲ್ಲಿ ಆಗಿರುವ ಕಷ್ಟಗಳ ಬಗ್ಗೆ ಕಣ್ಣೀರು ಹಾಕಿ ತಮ್ಮ ಅಳಲನ್ನು ತೋಡಿಕೊಂಡು ‘ನಮ್ಮ ಜೀವ ಹೋದರು ಚಿಂತೆ ಇಲ್ಲರ್ರೀ  ಮದ್ಯದಂಗಡಿ ಬಂದ್‌ ಆಗುವವರೆಗೆ ಹೋರಾಟ ಮಾಡುತ್ತೇವೆ’ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಶ್ರೀಶೈಲ್‌ ಅಂಗಡಿ, ಚೂನಪ್ಪ ಪೂಜೇರಿ, ರಾಘು ನಾಯ್ಕ, ಮಲ್ಲಪ್ಪ ಅಂಗಡಿ, ಬಸಯ್ಯ ಮಠಪತಿ, ಲಕ್ಷ್ಮಣ ಹುಲ್ಯಾಳ, ಲಕ್ಷ್ಮವ್ವ ಅಪ್ಪುಗೋಳ, ಮಹಾದೇವಿ ಗಿರಮಲ್ಲವ್ವ ಗೋಳ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.