ADVERTISEMENT

`ಮಲಪ್ರಭೆ ನೀರು ದುರ್ಬಳಕೆ'

ಡಿಸಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:54 IST
Last Updated 19 ಡಿಸೆಂಬರ್ 2012, 8:54 IST

ಬೈಲಹೊಂಗಲ: ಈ ಭಾಗದ ಜನರ ಕುಡಿವ ನೀರಿನ ಕೊರತೆಯನ್ನು ಲೆಕ್ಕಿಸದೇ ಮಲಪ್ರಭಾ ನದಿ ನೀರನ್ನು ಬೇರೆ ತಾಲ್ಲೂಕುಗಳ ನೀರಾವರಿ ಕಾಲುವೆಗಳಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸದಿದ್ದರೆ, ರೈತರು ಹಾಗೂ ಸಾರ್ವಜನಿಕರೊಡನೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಹಕಾರಿ ಧುರೀಣ, ರೈತ ನಾಯಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಸಮೀಪದ ನಯಾನಗರ ಬಳಿ ಮಲಪ್ರಭಾ ನದಿ ತೀರಕ್ಕೆ ಭೇಟಿ ನೀಡಿ, ನೀರಿನ ಮಟ್ಟ ಕಡಿಮೆಯಾಗಿರುವುದನ್ನು ಪರಿಶೀಲನೆ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಹದಿನೈದು ದಿನಗಳಿಂದ ಸವದತ್ತಿ, ರಾಮದುರ್ಗ, ನರಗುಂದ, ನವಲಗುಂದ ನೀರಾವರಿ ಕಾಲುವೆಗಳಿಗೆ ಮಲಪ್ರಭಾ ನದಿ ನೀರನ್ನು ಹರಿಸಲಾಗುತ್ತಿದೆ.

ಬೈಲಹೊಂಗಲ-ಸವದತ್ತಿ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು, ಸರ್ಕಾರ ಈಗಾಗಲೇ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ರೈತರು, ಸಾರ್ವ ಜನಿಕರು ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಲೇ ಇದೆ.

ಕುಡಿಯುವ ನೀರಿನ ಕೊರತೆ ಉಂಟಾಗಬಾರದು ಎಂದು ನದಿ ದಂಡೆಯಲ್ಲಿರುವ ಜಾಕವೆಲ್‌ಗೆ ನೀರು ಹರಿಸಿಲ್ಲ ಈ ಭಾಗದ ಜನರ, ರೈತರ ಸಮಸ್ಯೆಯನ್ನು ಅವಲೋಕನ ಮಾಡದೇ ಜಿಲ್ಲಾಡಳಿತ ಬೇರೆ ತಾಲ್ಲೂಕುಗಳ ನೀರಾವರಿ ಕಾಲು ವೆಗಳಿಗೆ ನೀರು ಹರಿಯಲು ಬಿಟ್ಟಿರು ವುದು ಸಮಂಜಸವಲ್ಲ ಎಂದರು.

ಸಮೀಪದ ಅಮಟೂರ, ಬೇವಿನ ಕೊಪ್ಪ, ಅಸುಂಡಿ, ಕರೀಕಟ್ಟಿ, ದೊಡ ವಾಡ, ಉಡಿಕೇರಿ ಹಾಗೂ ನೂರಾರು ಗ್ರಾಮಗಳ ಜನರಿಗೆ, ಹುಬ್ಬಳ್ಳಿ ಧಾರ ವಾಡ ಅವಳಿ ನಗರಗಳಿಗೆ ಮಲಪ್ರಭಾ ನದಿ ಜೀವಾಳವಾಗಿದೆ.

ಈ ಭಾಗದ ಶಾಸಕ ಜಗದೀಶ ಮೆಟ ಗುಡ್ಡ ಹಾಗೂ ಇತರ ಪ್ರತಿನಿಧಿಗಳು ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಮುನ್ನ ಗಮನ ಹರಿಸಬೇಕು ಎಂದು ಎಚ್ಚರಿಸಿದ್ದಾರೆ. ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳದ ನಿರ್ದೇಶಕ ಚನ್ನಪ್ಪ ಬೂದಿಹಾಳ, ಪುರಸಭೆ ಸದಸ್ಯ ಮಹೇಶ ಹರಕುಣಿ, ಎಫ್.ಎಸ್.ಸಿದ್ಧನಗೌಡರ, ಜಗದೀಶ ಜಕ್ಕಪ್ಪನವರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.