ADVERTISEMENT

ಮಹಾರಾಷ್ಟ್ರ ರಾಜ್ಯ ನಾಮಫಲಕ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2011, 8:35 IST
Last Updated 18 ನವೆಂಬರ್ 2011, 8:35 IST
ಮಹಾರಾಷ್ಟ್ರ ರಾಜ್ಯ ನಾಮಫಲಕ ತೆರವಿಗೆ ಮನವಿ
ಮಹಾರಾಷ್ಟ್ರ ರಾಜ್ಯ ನಾಮಫಲಕ ತೆರವಿಗೆ ಮನವಿ   

ಬೆಳಗಾವಿ: ನಾಡದ್ರೋಹಿ ಚಟುವ ಟಿಕೆಯಲ್ಲಿ ತೊಡಗಿದ್ದ ಮಹಾನಗರ ಪಾಲಿಕೆ ಮೇಯರ್ ಮಂದಾ ಬಾಳೇ ಕುಂದ್ರಿ ಹಾಗೂ ಉಪಮೇಯರ್ ರೇಣು ಕಿಲ್ಲೇಕರ ಅವರನ್ನು ಪದಚ್ಯುತಗೊಳಿ ಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಯುವ ವೇದಿಕೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಅನಂತಕುಮಾರ ಬ್ಯಾಕೋಡ, ಬೆಳಗಾವಿ ಜಿಲ್ಲೆ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಹಲವು ವರ್ಷಗಳಿಂದ ಗಡಿ ವಿವಾದದಲ್ಲಿ ಸಿಲುಕಿದ್ದರಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳದೇ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಮೇಯರ್ ಹಾಗೂ ಉಪ ಮೇಯರ್ ನಾಡದ್ರೋಹಿ ಕೃತ್ಯ ಎಸಗಿದ್ದಾರೆ. ಹೀಗಾಗಿ ಅವರ ಸದಸ್ಯತ್ವವನ್ನು ರದ್ದುಪಡಿಸಿ ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ತನ್ಮೂಲಕ ಕನ್ನಡ ವಿರೋಧಿ ಚಟುವಟಿಕೆ ಕೈಗೊಳ್ಳು ವವರಿಗೆ ಎಚ್ಚರಿಕೆ ನೀಡಬೇಕು” ಎಂದು ಒತ್ತಾಯಿಸಿದರು.

“ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಬರುವ ಕೆಲವು ಗ್ರಾಮಗಳಾದ ಯಳ್ಳೂರು, ಕಂಗ್ರಾಳಿ, ಅಂಬೇವಾಡಿ ಗ್ರಾಮಗಳಲ್ಲಿ ಸರ್ಕಾರದ ನಾಮ ಫಲಕಗಳ ಮೇಲೆ `ಮಹಾರಾಷ್ಟ್ರ ರಾಜ್ಯ~ ಎಂಬ ನಾಮಫಲಕವನ್ನು ಅಳವಡಿಸ ಲಾಗಿದೆ. ಅವುಗಳನ್ನು ಯಾರು ಅಳವ ಡಿಸಿದ್ದಾರೋ ಅಂಥವರನ್ನು ಬಂಧಿಸಿ ಕೂಡಲೇ ಗಡಿಪಾರು ಮಾಡಲು ಆದೇಶ ನೀಡಬೇಕು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ, ಬೆಳಗಾವಿ ಸೇರಿದಂತೆ ಎಲ್ಲ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುವುದು” ಎಂದು ಬ್ಯಾಕೋಡ ಎಚ್ಚರಿಕೆ ನೀಡಿದರು. ರಾಜು ಮಳಗೆ, ಕುಮಾರ ಗಣಾಚಾರಿ, ಉಮೇಶ ಪಾಟೀಲ, ಸುರೇಖಾ ಅಳವಿ, ರಾಜು ದೊಡ್ಡಮನಿ ಹಾಜರಿದ್ದರು.

ಉದ್ಯೋಗ ಮೇಳ ಇಂದಿನಿಂದ
ಬೆಳಗಾವಿ: ಕೌಶಲ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇದೇ 18 ಹಾಗೂ 19ರಂದು ಎರಡು ದಿನಗಳ ಬೃಹತ್ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಮೇಳ ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ 70ಕ್ಕೂ ಹೆಚ್ಚು ಖಾಸಗಿ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 3000 ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಬೆಳಗಾವಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಚಿದಾನಂದ ಬಾಕೆ ತಿಳಿಸಿದ್ದಾರೆ.

18ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಮಿಕ ಖಾತೆ ಸಚಿವ ಬಿ.ಎನ್. ಬಚ್ಚೇಗೌಡ ಮೇಳವನ್ನು ಉದ್ಘಾಟಿಸ ಲಿದ್ದಾರೆ. ಶಾಸಕ ಫಿರೋಜ್ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಉಮೇಶ ಕತ್ತಿ, ಸಹಕಾರ ಸಚಿವ ಲಕ್ಷ್ಮಣ ಸವದಿ, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಬಾಲಚಂದ್ರ ಜಾರಕಿಹೊಳಿ, ಮೈಸೂರು ಖನಿಜ ನಿಯಮಿತ ಅಧ್ಯಕ್ಷ ಜಗದೀಶ ಮೆಟಗುಡ್ಡ, ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರಗೌಡ ಪಾಟೀಲ, ಕಾಡಾ ಅಧ್ಯಕ್ಷ  ಸೋಮಣ್ಣ ಬೇವಿನಮರದ  ಪಾಲ್ಗೊಳ್ಳಲಿದ್ದಾರೆ.

19ರಂದು ಸಂಜೆ 4 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪತ್ರ ಹಾಗೂ ವಿತರಣಾ ಸಮಾರಂಭ ನಡೆಯಲಿದೆ.

ನೇಕಾರರ ಸಭೆ ಇಂದು
ಬೆಳಗಾವಿ: ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆಯು ನಗರದ ವಡಗಾವಿಯ ಜಿವೇಶ್ವರ ಭವನದಲ್ಲಿ ನೇಕಾರರ ಸಭೆಯನ್ನು ಇದೇ 18ರಂದು ಸಂಜೆ 4 ಗಂಟೆಗೆ ಕರೆಯಲಾಗಿದೆ.

ಆಧುನಿಕ ತಂತ್ರಜ್ಞಾನ, ವಿದ್ಯುತ್ ಮಗ್ಗಗಳಿಗೆ ಹಾಗೂ ಎಲೆಕ್ಟ್ರಿಕಲ್ ಚೈನ್ ಜಕಾರ್ಡ್‌ಗಳಿಗೆ ಶೇ. 75ರಷ್ಟು ಸಬ್ಸಿಡಿ ನೀಡಬೇಕು, ನಗರದಲ್ಲಿ ಜವಳಿ ಮಾರುಕಟ್ಟೆ ಸಂಕೀರ್ಣ ಸ್ಥಾಪಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು. ಜಿಲ್ಲೆಯ ನೇಕಾರರು ಸಭೆಯಲ್ಲಿ ಪಾಲ್ಗೊಂಡು ಸಲಹೆ- ಸೂಚನೆಗಳನ್ನು ನೀಡಬೇಕು ಎಂದು ವೇದಿಕೆಯ ಅಧ್ಯಕ್ಷ ಭುಜಂಗ ಭಂಡಾರಿ ಹಾಗೂ ಕಾರ್ಯದರ್ಶಿ ಪರಶುರಾಮ ಢಗೆ ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.