ADVERTISEMENT

ಮಾನವ ಸಂಪನ್ಮೂಲದಿಂದ ಉದ್ಯಮದ ಯಶಸ್ಸು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 7:25 IST
Last Updated 18 ಫೆಬ್ರುವರಿ 2012, 7:25 IST

ಬೆಳಗಾವಿ: `ಮಾನವ ಸಂಪನ್ಮೂಲ ನಿರ್ವಹಣೆಗೆ ಕೈಗಾರಿಕೆಗಳು ಹೆಚ್ಚಿನ ಒತ್ತು ನೀಡುತ್ತಿವೆ. ಮಾನವ ಸಂಪನ್ಮೂಲ ನಿರ್ವಹಣೆ ಹೇಗೆ ಎಂಬುದನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ~ ಎಂದು ಫಿಯೆಟ್ ಇಂಡಿಯಾ ಆಟೋಮೊಬೈಲ್ ಸಂಸ್ಥೆಯ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕಪೂರ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಬಿಇ ಟ್ರಸ್ಟ್‌ನ ಗ್ಲೋಬಲ್ ಬಿಸಿನೆಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿರುವ ಮಾನವ ಸಂಪನ್ಮೂಲ ಸಮ್ಮೇಳನದಲ್ಲಿ ಶುಕ್ರವಾರ ಅವರು ಮಾತನಾಡಿದರು.
`ಕೈಗಾರಿಕೆಗಳ ಯಶಸ್ಸು ಮಾನವ ಸಂಪನ್ಮೂಲವನ್ನು ಅವಲಂಬಿಸಿದೆ ಎಂಬುದನ್ನು ಕೈಗಾರಿಕೆಗಳು ಅರಿತುಕೊಂಡಿವೆ. ಉತ್ತಮ ಮಾನವ ಸಂಪನ್ಮೂಲವಿದ್ದರೆ ಕೈಗಾರಿಕೆಗಳಿಗೆ ಯಶಸ್ಸು ತನ್ನಿಂದ ತಾನೇ ಲಭಿಸುತ್ತದೆ~ ಎಂದು  ಹೇಳಿದರು.

`ಮೊದಲು ಗ್ರಾಹಕರು, ನಂತರ ಕಾರ್ಮಿಕರು ಎನ್ನುವ ಪರಿಸ್ಥಿತಿ ಬದಲಾಗಿದ್ದು, ಕಾರ್ಮಿಕರು ಮೊದಲು, ಗ್ರಾಹಕರು ನಂತರ ಎನ್ನುವಂತಾಗಿದೆ. ಹತ್ತು ವರ್ಷದ ಹಿಂದೆ ಮಾನವ ಸಂಪನ್ಮೂಲ ವಿಭಾಗಗಳೇ ಇರಲಿಲ್ಲ. ಕಾಲಾಂತರದಲ್ಲಿ ಮಾನವ ಸಂಪನ್ಮೂಲ ವಿಭಾಗಗಳು ಪ್ರಾರಂಭಗೊಂಡಿವೆ~ ಎಂದರು.

`ಕಾರ್ಮಿಕರಿಗೆ  ಹಾಗೂ ಅವರ ಕುಟುಂಬಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಕಾರ್ಮಿಕರೂ ಸ್ವಯಂ ಸ್ಫೂರ್ತಿಯಿಂದ ಕೆಲಸ ಮಾಡುತ್ತಾರೆ. ಪರಿಣಾಮ ಸಂಸ್ಥೆಯ ಬೆಳವಣಿಗೆಯೂ ಆಗುತ್ತದೆ~ ಎಂದು ಅವರು ಹೇಳಿದರು.


`ಇದೀಗ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ವ್ಯವಸ್ಥಾಪನ ಹುದ್ದೆಗಳ ಬದಲಾಗಿ ತರಬೇತಿದಾರರ ಹುದ್ದೆಗಳು ಹುಟ್ಟಿಕೊಳ್ಳುತ್ತಿವೆ. ಇದೊಂದು ಒಳ್ಳೆಯ ಬೆಳೆವಣಿಗೆಯಾಗಿದೆ. ಇದರಿಂದ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ತಾವು ದೊಡ್ಡವರು, ಉಳಿದವರು ಸಣ್ಣವರು ಎಂಬ ತಾರತಮ್ಯ ಕಡಿಮೆಯಾಗುತ್ತದೆ~ ಎಂದರು.

ಸಮ್ಮೇಳನ ಉದ್ಘಾಟಿಸಿ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಸವರಾಜ ಜವಳಿ ಮಾತನಾಡಿ, ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಅವುಗಳನ್ನು ಪರಿಹರಿಸಿ, ಕಾರ್ಮಿಕರಿಗೆ ಉತ್ತೇಜನ ನೀಡುವಂತಹ  ಯೋಜನೆಗಳು ಜಾರಿಗೆ ತರಬೇಕಾಗಿದೆ ಎಂದು ಅವರು ಹೇಳಿದರು.

ಡಾ.ಬಾಪಟ್ ಅಸೋಸಿಯೇಟ್ಸ್ ಸಂಸ್ಥೆಯ ಡಾ. ಎಸ್.ಜಿ.ಬಾಪಟ್ ಅವರು `ಸ್ಮರಣ ಸಂಚಿಕೆ~ ಬಿಡುಗಡೆ ಮಾಡಿದರು. ಭರತೇಶ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ  ಗೋಪಾಲ ಜಿನಗೌಡ ಅಧ್ಯಕ್ಷತೆ ವಹಿಸಿದ್ದರು. 
ಟ್ರಸ್ಟ್ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯವಸ್ಥಾಪನ ವಿಭಾಗದ ಅಧ್ಯಕ್ಷ ಡಾ. ಸಿ.ಎಂ.ತ್ಯಾಗರಾಜ, ಕಾರ್ಯಕ್ರಮ ಸಂಯೋಜಕ ಅಧ್ಯಕ್ಷ ಡಾ. ಎ.ಬಿ.ಕಾಲಕುಂದ್ರಿಕರ್ ಪಾಲ್ಗೊಂಡಿದ್ದರು.

ಗ್ಲೋಬಲ್ ಬಿಸಿನೆಸ್ ಸ್ಕೂಲ್  ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ದೊಡ್ಡಣ್ಣವರ ಸ್ವಾಗತಿಸಿದರು.  ಪಲ್ಲವಿ ಗೋಠೆ ಪ್ರಾರ್ಥಿಸಿದರು. ಸ್ವಾತಿ ಜೋಗ ನಿರೂಪಿಸಿದರು. ಜಿಬಿಎಸ್ ನಿರ್ದೆಶಕ ಡಾ. ಆರ್.ಆರ್. ಕುಲಕರ್ಣಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT