ADVERTISEMENT

ಮುಂದಿನ ಅಧಿವೇಶನದಲ್ಲಿ ‘ನಿರ್ಣಯ’

ಬೆಳಗಾವಿ ವಿಧಾನಮಂಡಲ ಅಧಿವೇಶನ–2013: ಕನ್ನಡದಲ್ಲಿ ಹೈಕೋರ್ಟ್ ಕಲಾಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:57 IST
Last Updated 7 ಡಿಸೆಂಬರ್ 2013, 8:57 IST

ಸುವರ್ಣ ಸೌಧ (ಬೆಳಗಾವಿ): ಹೈಕೋರ್ಟ್ ಕಲಾಪಗಳನ್ನು ಕನ್ನಡದಲ್ಲಿ ನಡೆಸಲು ಅನುಮತಿ ನೀಡುವ ಕುರಿತು ಕೇಂದ್ರ ಸರ್ಕಾರವನ್ನು ಕೋರುವ ಕುರಿತ ಖಾಸಗಿ ನಿರ್ಣಯದ ಕುರಿತು ಮುಂದಿನ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಲು ವಿಧಾನ ಪರಿಷತ್ ನಿರ್ಧರಿಸಿತು.

ಬಿಜೆಪಿಯ ಸಿದ್ರಾಮಣ್ಣ ಶುಕ್ರವಾರ ಮಂಡಿಸಿದ ನಿರ್ಣಯಕ್ಕೆ ಸಂಬಂಧಿಸಿ ಸದನದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದರೂ ಈ ಕುರಿತು ವಿಸ್ತೃತ ಚರ್ಚೆಗೆ ಸರ್ಕಾರಕ್ಕೆ ಕಾಲಾವಕಾಶ ಬೇಕು ಎಂದು ಸರ್ಕಾರದ ಪರವಾಗಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಟಿ.ಬಿ.ಜಯಚಂದ್ರ ಪದೇ ಪದೇ ಕೋರಿದ ಕಾರಣ ಸಭಾಪತಿ ಡಿ.ಎಚ್. ಶಂಕರಮೂರ್ತಿ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆಹಿಡಿದರು.

ಹೈಕೋರ್ಟ್ ಕಲಾಪಗಳು ಸ್ಥಳೀಯ ಭಾಷೆಯಲ್ಲಿ ನಡೆಯಬೇಕಾದ ಅಗತ್ಯ ಮತ್ತು ಈ ಕುರಿತು ಇತರ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ಪ್ರಸ್ತಾಪಿಸಿದ ಸಿದ್ರಾಮಣ್ಣ ಈಗಾಗಲೇ ರಾಜಸ್ತಾನ, ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರ ಪ್ರದೇಶ ಹೈಕೋರ್ಟ್ ಗಳಲ್ಲಿ ಹಿಂದಿಯಲ್ಲಿ ಕಲಾಪ ನಡೆಸಲು ಅವಕಾಶ ನೀಡಲಾಗಿದೆ, ಆದರೆ ಹಿಂದಿಯೇತರ ಭಾಷೆಗಳ ರಾಜ್ಯಗಳ ಹೈಕೋರ್ಟ್ ಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಕಲಾಪ ನಡೆಸಲು ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಹೇಳಿದರು.

ಬಂಗಾಳಿಯಲ್ಲಿ ಕಲಾಪ ನಡೆಸಲು ಪಶ್ಚಿಮ ಬಂಗಾಳ, ತಮಿಳಿನಲ್ಲಿ ನಡೆಸಲು ತಮಿಳುನಾಡು ರಾಜ್ಯಗಳು ಅನುಮತಿ ಕೋರಿದ್ದವು. ಆದರೆ ಇದಕ್ಕೆ  ಒಪ್ಪಿಗೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೇಂದ್ರ ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಅಗತ್ಯ ವಿದೆ. ಈ ಕುರಿತು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸಿದ್ರಾಮಣ್ಣ ಆಗ್ರಹಿಸಿದರು.

ರಾಜ್ಯದಲ್ಲಿ ಇಂದು ಕನ್ನಡದ ಸ್ಥಿತಿ ಅಷ್ಟು ಚೆನ್ನಾಗಿಲ್ಲ. ಹೆಚ್ಚು ಹೆಚ್ಚು ಕನ್ನಡದ ಬಳಕೆ ಆಗುತ್ತಿಲ್ಲ. ಈ ಸ್ಥಿತಿ ಹೀಗೆಯೇ ಮುಂದುವರಿದರೆ ಕನ್ನಡ ನಾಶವಾಗುವ ಕಾಲ ದೂರವಿಲ್ಲ. ಬಳಸದೇ ಇರುವ ವಸ್ತುಗಳು ಕೊನೆಗೆ ನಿರುಪಯುಕ್ತವಾಗುತ್ತವೆ ಎಂಬ ವಾದವನ್ನು ಭಾಷೆಗೂ ಅನ್ವಯಿಸಿ ನೋಡಿದಾಗ ಆತಂಕ ಮೂಡುತ್ತದೆ. ಹೈಕೋರ್ಟ್ ಕಲಾಪಗಳು ಕನ್ನಡದಲ್ಲಿ ನಡೆದರೆ ಅದು ಅನೇಕ ಕಡೆಗಳಲ್ಲಿ ಕನ್ನಡ ಬಳಕೆಗೆ ದಾರಿದೀಪವಾಗಬಹುದು. ಹೈಕೋರ್ಟ್ ಕಲಾಪಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸಲು ಸಾಂವಿಧಾನಿಕವಾಗಿ ಅವಕಾಶವೂ ಇರುವುದರಿಂದ ಅದನ್ನು ಇಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಸಿದ್ರಾಮಣ್ಣ ಕೋರಿದರು.

ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿಕೊಂಡು ನಾಲ್ಕು ರಾಜ್ಯಗಳು ಈಗಾಲೇ ಹಿಂದಿ ಯಲ್ಲಿ ಕಲಾಪ ನಡೆಸಲು ಅನುಮತಿ ಪಡೆದು ಕೊಂಡಿವೆ. ಆದರೆ ಹಿಂದಿಯೇತರ ರಾಜ್ಯಗಳಿಗೆ ಈ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ ಹೈಕೋರ್ಟ್ ಕಲಾಪದಲ್ಲಿ ಕನ್ನಡ ಅನುಷ್ಠಾನ ಆಗಲೇಬೇಕು, ಇದು ಕನ್ನಡದ ಮೇಲೆ ಆಗುತ್ತಿರುವ ಸವಾರಿಯನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ ನಲ್ಲಿ ಕನ್ನಡ ಅನುಷ್ಠಾನಕ್ಕೆ ಅವಕಾಶ ಸಿಕ್ಕಿದರೆ ಭಾಷೆಯ ವಿಷಯದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ. ಆದ್ದರಿಂದ ರಾಜ್ಯಪಾಲರ ಮೂಲಕ ರಾಜ್ಯದ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ಅವರು ಹೇಳಿದರು.

ಬಿಜೆಪಿಯ ರಾಮಚಂದ್ರಗೌಡ ಅವರು ಮಾತನಾಡಿ, ಈ ನಿರ್ಣಯವು ರಾಜ್ಯದ ಭಾಷೆಯ ವಿಷಯದಲ್ಲಿ 'ಸುವರ್ಣ ನಿರ್ಣಯ'ವಾಗಿದ್ದು ಇದಕ್ಕೆ  ಸದನ ಅಂಗೀಕಾರ ನೀಡಬೇಕು ಎಂದು ಆಗ್ರಹಿಸಿದರು.

ಆದರೆ ಈ ಕುರಿತು ನಿರ್ಧಾರ ಕೈಗೊಳ್ಳಲು ಮುಂದಿನ ಅಧಿವೇಶನದ ವರೆಗೆ ಕಾಲಾವಕಾಶ ನೀಡಬೇಕು ಎಂದು ಟಿ.ಬಿ.ಜಯಚಂದ್ರ ಕೋರಿದರು.

ಇದು ಸಮರ್ಥನೀಯ ವಾದ. ಭಾಷೆಯ ವಿಷಯದಲ್ಲಿ ಸರ್ಕಾರ ಸದಾ ತೆರೆದ ಮನಸ್ಸನ್ನು ಹೊಂದಿರುತ್ತದೆ. ಭಾಷೆಯ ವಿಷಯದಲ್ಲಿ ಉಪಯುಕ್ತ ನಿರ್ಣಯಗಳನ್ನು ಕೈಗೊಳ್ಳಲು ಸರ್ಕಾರ ಎಂದಿಗೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಎದ್ದು ನಿಂತ ವಿರೋಧ ಪಕ್ಷದ ಸದಸ್ಯರು ನಿರ್ಣಯದ ಕುರಿತು ಇಂದೇ ತೀರ್ಮಾನ ಪ್ರಕಟಿಸಬೇಕು ಎಂದು ಪಟ್ಟು ಹಿಡಿದರು. ಇದು ಸರ್ಕಾರದ ನಿರ್ಣಯವಲ್ಲ, ಸದನದ ನಿರ್ಣಯ. ಭಾಷೆಯ ಮೇಲೆ ಅಭಿಮಾನ ಇದ್ದರೆ ಆಡಳಿತ ಪಕ್ಷದವರು ಇಲ್ಲೇ ಈ ಕುರಿತು ನಿರ್ಧಾರ ಪ್ರಕಟಿಸ ಬೇಕು ಎಂದು ಡಿ.ವಿ.ಸದಾನಂದಗೌಡ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಜಯಚಂದ್ರ ನಿರ್ಣಯದ ಕುರಿತು ಸಾಕಷ್ಟು ಚರ್ಚೆ ಆಗಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿಸುವುದಷ್ಟೇ ಬಾಕಿ ಉಳಿದಿರುವ ವಿಷಯ. ಹೀಗಾಗಿ ಸೂಕ್ತ ನಿರ್ಧಾರಕ್ಕೆ ಕಾಲಾವಕಾಶ ನೀಡಬೇಕು ಎಂದು ಮತ್ತೊಮ್ಮೆ ಕೋರಿದರು. ಸಭಾಪತಿಗಳು ವಿಷಯಕ್ಕೆ ಅಂತ್ಯ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.