ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸಲು ಕಾರ್ಯತಂತ್ರ ರೂಪಿಸುವ ಸಲುವಾಗಿ ಬೆಳಗಾವಿ ಉತ್ತರ ವಲಯದ ವತಿಯಿಂದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಗರದಲ್ಲಿ ಗುರುವಾರ ನಡೆಯಿತು.
ಉತ್ತರ ವಲಯದ ಐಜಿಪಿ ಭಾಸ್ಕರ್ ರಾವ್, ಕೊಲ್ಲಾಪುರ ಐಜಿಪಿ ರಿತೇಶಕುಮಾರ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ವಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ ಸೆಪಟ್, ಕೊಲ್ಹಾಪುರ ಎಸ್ಪಿ ಮನೋಜಕುಮಾರ ಶರ್ಮಾ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ವಿ. ಗುಳೇದ, ಸಾಂಗ್ಲಿ ಜಿಲ್ಲೆಯ ಹೆಚ್ಚುವರಿ ಎಸ್ಪಿ ಡಾ. ದಿಗಂಬರ ಪ್ರಧಾನ ಮತ್ತು ಅಬಕಾರಿ ಡಿಸಿ ಮೇರುನಂದನ ಕೆ.ಬಿ ಮತ್ತು ಗೋವಾ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ– ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಉತ್ತರ ವಲಯದ ಐಜಿಪಿ ಮತ್ತು ಕೊಲ್ಲಾಪುರ ಐಜಿಪಿ ಹಾಗೂ ಇತರೆ ಅಧಿಕಾರಿಗಳು ಚುನಾವಣೆಗೆ ಸಂಬಂಧಪಟ್ಟಂತೆ ನಡೆದ ಅಪರಾಧಗಳ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು. ರಾಜ್ಯ ಮತ್ತು ಜಿಲ್ಲಾ ಗಡಿ ಪ್ರದೇಶದಲ್ಲಿರುವ ಎಲ್ಲ ರಸ್ತೆಗಳ ಮೇಲೆ ಪರಸ್ಪರ ಸಹಕಾರದಿಂದ ಎರಡು ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಚೆಕ್ ಪೋಸ್ಟ್ ನಿರ್ಮಿಸಿ ಜಿಲ್ಲಾ ಮತ್ತು ರಾಜ್ಯದಿಂದ ಹೊರಗೆ ಹೋಗುವ ಮತ್ತು ಒಳಗೆ ಬರುವ ಅಕ್ರಮ ಸಾರಾಯಿ, ಅಕ್ರಮ ಹಣ, ಅಕ್ರಮ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಚೆಕ್ಪೋಸ್ಟ್ಗಳಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡಲು ತೀರ್ಮಾನಿಸಲಾಯಿತು.
ಪರಸ್ಪರ ಸಹಕಾರದಿಂದ ರೌಡಿಗಳ ವಿರುದ್ಧ ಹಾಗೂ ಚುನಾವಣೆಯಲ್ಲಿ ಬೆದರಿಕೆ ಒಡ್ಡುವ ವ್ಯಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ರೈಲ್ವೆ ಪೊಲೀಸ್, ಆರ್‌ಪಿಎಫ್ ಮತ್ತು ಅಬಕಾರಿ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಇತರೆ ಗಡಿ ಭಾಗದಲ್ಲಿ ಇಲ್ಲಿಯವರೆಗೂ ಒಟ್ಟು 36 ಚೆಕ್ ಪೋಸ್ಟ್‌ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಇನ್ನು ಹೆಚ್ಚಿನ ಚೆಕ್ ಪೋಸ್ಟ್‌ಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.