ADVERTISEMENT

ರಾಜ್ಯಪಾಲರ ನಡೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮೇ 2018, 5:40 IST
Last Updated 19 ಮೇ 2018, 5:40 IST
ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಬೆಳಗಾವಿ: ’ರಾಜ್ಯ ರಾಜಕಾರಣದಲ್ಲಿ ನಿರ್ಮಾಣವಾಗಿರುವ ಅತಂತ್ರ ಸ್ಥಿತಿಯಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿದ ರಾಜ್ಯಪಾಲರ ನಡೆ ಸರಿಯಿಲ್ಲ’ ಎಂದು ಆರೋಪಿಸಿ ಅರವಿಂದ ದಳವಾಯಿ ನೇತೃತ್ವದ ಕಾಂಗ್ರೆಸ್‌ ನಿಯೋಗ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಸೇರಿದ್ದ ಕಾರ್ಯಕರ್ತರು ರಾಜ್ಯಪಾಲರ ವಿರುದ್ದ ಘೋಷಣೆ ಕೂಗಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ವಿರೋಧಿ ಕ್ರಮಗಳಿಗೆ ಮಣೆ ಹಾಕಲಾಗಿದೆ, ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ, ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

’ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಗೆ ಹೆಚ್ಚು ಸ್ಥಾನ ಬಂದಿದ್ದರೂ ಅವರಿಗೆ ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಇಲ್ಲ. ಆದರೂ ಸರ್ಕಾರ ರಚನೆಗೆ ಅವಕಾಶ ನೀಡಿದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

ಮುಖಂಡರಾದ ರಮೇಶ ಉಟಗಿ, ಭೀಮಶೆಟ್ಟ ಹಂದಿಗುಂದ, ಸುಭಾಷ ಸೋನವಾಲಕರ, ಗುಂಡಪ್ಪ ಕಮತಿ, ಭರಮಪ್ಪ ಉಪ್ಪಾರ, ಸಿದ್ದಣ್ಣ ಮುಂಡಿಗನಾಳ, ನೀಲಮ್ಮ ಬೆಣ್ಣಿ, ಬಿ.ಬಿ. ಜಮಖಂಡಿ ಇದ್ದರು.

ಅಸಾಂವಿಧಾನಿಕ ಕ್ರಮ: ಖಂಡನೆ

ತೆಲಸಂಗ: 'ಕರ್ನಾಟಕ ರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಫಲಿತಾಂಶದ ಹಿನ್ನೆಲೆಯಲ್ಲಿ ಬಹುಮತವಿಲ್ಲದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ನಡೆ ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ’ ಎಂದು ಕಾಂಗ್ರಸ್ ಮುಖಂಡ ಎಸ್.ಎ. ಪಾಟೀಲ ಹೇಳಿದರು.

ಶುಕ್ರವಾರ ಗ್ರಾಮದಲ್ಲಿ 'ಪ್ರಜಾಪ್ರಭುತ್ವ ಸಂರಕ್ಷಿಸಿ' ಎಂದು ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರ್‌ ಎಂ.ಎ. ಕಿತ್ತೂರ ಅವರಿಗೆ ಸಲ್ಲಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಮಲಕುಗೌಡ ಪಾಟೀಲ, ಜಿ.ಕೆ. ಪವಾರ, ಮಹಾದೇವ ಪೂಜಾರಿ, ಸಂಗು ಕಂದಾರೆ, ಅಣ್ಣೂ ಡೆಂಗಿ, ವಿಜಯ ಕುಮಠಳ್ಳಿ, ಮಾಯಪ್ಪ ನಿಡೋಣಿ, ಸುಭಾಸ್ ಮೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.