ADVERTISEMENT

ರಾಯಣ್ಣನ ಆಸ್ತಿ ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:25 IST
Last Updated 17 ಸೆಪ್ಟೆಂಬರ್ 2013, 6:25 IST

ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಆಸ್ತಿ ದಾಖಲೆಗಳ ಸತ್ಯಾಸತ್ಯ ಪರಿಶೀಲನೆಗೆ ರಾಜ್ಯ ಸರ್ಕಾ ರದಿಂದ ನಿಯೋಜನೆಗೊಂಡ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಮರೇಶ ಯಾತಗಲ್‌ ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ.ಸಂತೋಷ ಹಾನಗಲ್‌ ಸೋಮವಾರ ಸಂಗೊಳ್ಳಿ ಹಾಗೂ ಬೇವಿನಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

ಆಸ್ತಿಪತ್ರಗಳು ಹೇಗೆ ಪತ್ತೆಯಾದವು ಎಂಬುದರ ಬಗ್ಗೆ ವಿಚಾರಿಸಿದಾಗ, ಗಂಗಪ್ಪ ಕಾಶಪ್ಪ ದೊಡವಾಡರ ಅವರ ಮನೆ ದುರಸ್ತಿ ಮಾಡುವ ಸಂದರ್ಭದಲ್ಲಿ ತಗಡಿನ ಕೊಳವೆಯಲ್ಲಿ ಆಸ್ತಿಪತ್ರಗಳು ದೊರೆತ ಬಗ್ಗೆ ವಿವರಣೆ ನೀಡಿದರು.

ಇದರ ಜೊತೆಗೆ ಪತ್ತೆಯಾದ ಇತರ ದಾಖಲೆಗಳನ್ನು ಇತಿಹಾಸಕಾರರು ಪರಿಶೀಲನೆ ನಡೆಸಿದರು. ಆಸ್ತಿಪತ್ರ ದೊರೆತ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದಾಗ, ರಾಯಣ್ಣನ ವಂಶಸ್ಥರಾದ ಬಾಳಪ್ಪ ರೋಗಣ್ಣವರ ಮಾತನಾಡಿ, ದಿನನಿತ್ಯ ದುಡಿಮೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದು, ರಾಯಣ್ಣನ ಆಸ್ತಿಗೆ ಸಂಬಂಧಿಸಿದಂತೆ ವಂಶಸ್ಥರಾದ ನಮಗೆ ಆಸ್ತಿ ಅಥವಾ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.

ಆಸ್ತಿಗಾಗಿ ಹಲವಾರು ಜನರು ವಂಶಸ್ಥರೆಂದು ಹೇಳಿಕೊಳ್ಳುತ್ತಿದ್ದು, ನಿಜವಾದ ವಂಶಸ್ಥರಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಬೇಡಿಕೊಂಡರು.

ಬಸವರಾಜ ಉರಬಿನ ರಾಯಣ್ಣನ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಇತಿಹಾಸ ಕುರಿತು ಬೆಳಕು ಚೆಲ್ಲಿದವರಿಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೇಳಿಕೊಂಡರು.

ವಂಶಸ್ಥರ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದ ನಂತರ ಡಾ.ಅಮರೇಶ ಮಾತನಾಡಿ, ಆಸ್ತಿಪತ್ರ ಕುರಿತು ಸತ್ಯ ಅಂಶಗಳು ಬೆಳಕಿಗೆ ಬರಬೇಕಾಗಿದೆ. ದೇಶಭಕ್ತ ರಾಯಣ್ಣನ ಆಸ್ತಿ ಪತ್ರ ವಿವಾದ ಎದ್ದಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.

ಈ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು. ನಿಜ ಸಂಗತಿಗಳ ಕುರಿತು ಮಾಹಿತಿ ನೀಡಿದ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ರಾಯಣ್ಣನ ಪ್ರತಿಮೆಗೆ ಮೂರು ತಲೆಮಾರಿನಿಂದ ಪೂಜೆ ಸಲ್ಲಿಸುತ್ತಿರುವ ಬಸವರಾಜ ರಾಯಪ್ಪ  ಡೊಳ್ಳಿನ, ಬಸವಣ್ಣೆಪ್ಪ ರುದ್ರಾಪೂರ, ರಾಜಶೇಖರ ವಕ್ಕುಂದಮಠ, ಬಸವರಾಜ ಕಮತ, ಉಪವಿಭಾಗಾಧಿಕಾರಿ ಕಛೇರಿಯ ಮಂಜುನಾಥ ಅಂಗಡಿ, ಕಂದಾಯ ನಿರೀಕ್ಷಕ ಆರ್‌.ಬಿ.ತಳವಾರ, ಗ್ರಾಮ ಲೆಖ್ಖಾಧೀಕಾರಿ ಎಂ.ಬಿ.ಅರಳೀಕಟ್ಟಿ ಉಪಸ್ಥಿತರಿದ್ದರು.

ತಾಲ್ಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿ ರಾಯಣ್ಣನ ಆಸ್ತಿಪತ್ರದ ತರಹದ ರಾಣಿ ಚಿತ್ರದ ಛಾಪಾ ಕಾಗದಗಳು ಇರುವ ಬಗ್ಗೆ ಖಚಿತ ಪಡಿಸಿಕೊಂಡ ಇತಿಹಾಸಕಾರರು ಬೇವಿನಕೊಪ್ಪ ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.