ADVERTISEMENT

ವಿಧಾನಸೌಧ ಬಿಟ್ಟು ತೊಲಗಿ: ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:55 IST
Last Updated 3 ಅಕ್ಟೋಬರ್ 2012, 5:55 IST

ಚನ್ನಮ್ಮನ ಕಿತ್ತೂರು: `ಕೇಂದ್ರ ಸರ್ಕಾರ ನೀಡಿರುವ ಸಾವಿರಾರು ಕೋಟಿ ರೂಪಾಯಿ ಅನುದಾನ ತಿಂದು ಹಾಕಿರುವ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದ ಆರು ಕೋಟಿ ಜನರಿಗೆ ಅಪಮಾನ ಮಾಡಿದ್ದು, ಈ ಸರ್ಕಾರ ವಿಧಾನಸೌಧ ಬಿಟ್ಟು ತೊಲಗಬೇಕಾಗಿದೆ~ ಎಂದು ಮಾಜಿ ಸಚಿವ ಎ. ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಹೊಸ ಕಾದರವಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ `ಕಾಂಗ್ರೆಸ್‌ನೊಂದಿಗೆ ಬನ್ನಿ; ಬದಲಾವಣೆ ತನ್ನಿ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಬಿಜೆಪಿ ಸರ್ಕಾರ ಎಂದರೆ ಅಲಿಬಾಬಾ 40ಕಳ್ಳರು ಎಂಬಂತಾಗಿದೆ. ಭ್ರಷ್ಟ, ಸುಲಿಗೆಕೋರರ ಹಾಗೂ ರಾಜ್ಯ ಮಾರುವವರು ಎಂಬ ಬಿರುದಿದೆ. ಇಂಥವರ ಮಧ್ಯೆ ನಾವೂ ರಾಜಕಾರಣಿಗಳು, ಮಾಜಿ ಸಚಿವ-ಶಾಸಕರು ಎಂದು ಹೇಳಿಕೊಳ್ಳಲಿಕ್ಕೆ ನಾಚಿಕೆ ಆಗುತ್ತಿದೆ~ ಎಂದು ಹೇಳಿದರು.

`ಪ್ರಜಾಪ್ರಭುತ್ವದ ದೇವಾಲಯ ವಿಧಾನಸೌಧ. ಅಲ್ಲಿ ಏನೇನು ನಡೀತಿದೆ. ಬ್ಲೂಫಿಲಂ ಕೂಡ ನೋಡ್ತಾರೆ. ಇಂತಹ ಹೀನ ಸರ್ಕಾರ ಕಿತ್ತೊಗೆದು, ರಾಜ್ಯದ ಜನತೆ ಹೊಸ ದಾರಿ ತೋರಬೇಕಿದೆ~ ಎಂದರು.

ಮತ್ತೊಬ್ಬ ಮಾಜಿ ಸಚಿವ ಎಚ್. ಎಂ. ರೇವಣ್ಣ ಮಾತನಾಡಿ, `ಹಸಿರು ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸಿದ ಜನ ಅವರನ್ನು ಗುಂಡಿಕ್ಕಿ ಕೊಂದರು. ಅವರ ಕೈಗಳಿಗೆ ಬೇಡಿ ಹಾಕಿಸಿದರು. ಕಲ್ಲಿನ ಕಟ್ಟಡವಾದ ವಿಧಾನಸೌಧದಲ್ಲಿ ಕುಳಿತು ಆಡಳಿತ ಮಾಡಿ ಎಂದರೆ, ಮತ್ತೊಂದು ಕಲ್ಲಿನ ಕಟ್ಟಡವಾದ ಪರಪ್ಪನ ಅಗ್ರಹಾರಕ್ಕೆ ಕೆಲವರು ಹೋದರು~ ಎಂದು ವ್ಯಂಗ್ಯವಾಡಿದರು.

`ಬಿಜೆಪಿ ಪಕ್ಷಕ್ಕೆ ಹೈ ಕಮಾಂಡ್ ಎಂಬುದಿಲ್ಲ. ಐ (ನಾನು) ಕಮಾಂಡ್ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೋಡಿದರೆ ಇದು ನಿಜ ಎನಿಸುತ್ತದೆ~ ಕುಟುಕಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ `ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಕಿತ್ತೂರು ಕ್ಷೇತ್ರದಿಂದಲೇ ರಣವೀಳ್ಯ ನೀಡುತ್ತಿದ್ದೇವೆ~ ಎಂದರು. ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ. ಎಚ್. ಮುನಿಯಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಡಿ. ಬಿ. ಇನಾಂದಾರ ಅಧ್ಯಕ್ಷತೆ ವಹಿಸಿದ್ದರು.

 ಪಕ್ಷದ ಪದಾಧಿಕಾರಿ ಪ್ರದೀಪ ಕುಸನೂರ, ರಾಣಿ ಶುಗರ್ಸ್‌ ಉಪಾಧ್ಯಕ್ಷ ರಾಜೇಂದ್ರ ಅಂಕಲಗಿ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಜಿ. ಪಂ. ಸದಸ್ಯ ಬಾಬಾಸಾಬ ಪಾಟೀಲ, ಸಕ್ರೆನ್ನವರ, ಜಿ. ಪಂ. ಮಾಜಿ ಉಪಾಧ್ಯಕ್ಷ ವೀರನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ. ಆರ್. ಪಾಟೀಲ, ಬಸವರಾಜ ಕೌಜಲಗಿ, ರಾಜಶೇಖರ ಮೂಗಿ, ದಾನಮ್ಮ ಹರಕುಣಿ ಇತರರು ವೇದಿಕೆ ಮೇಲಿದ್ದರು.
ಜಗದೀಶ ವಸ್ತ್ರದ ಸ್ವಾಗತಿಸಿದರು. ವಿನಯ ನಾವಲಗಟ್ಟಿ ನಿರೂಪಿಸಿದರು. ಸಂಜೀವ್ ಲೋಕಾಪುರ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.