ADVERTISEMENT

ವೆಂಕಟೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 9:55 IST
Last Updated 3 ಏಪ್ರಿಲ್ 2012, 9:55 IST

ರಾಮದುರ್ಗ: ಯುಗಾದಿ ಹಬ್ಬದ ಕೊನೆಯ ದಿನವಾದ ಸೋಮವಾರ ಸಾವಿರಾರು ಜನರ ಶ್ರದ್ಧಾಭಕ್ತಿಯ ಸಮ್ಮುಖದಲ್ಲಿ ಪಟ್ಟಣದ ವೆಂಕಟೇಶ್ವರ ಜಾತ್ರೆಯ (ವೆಂಕೋಬಾನ ತೇರು) ರಥೋತ್ಸವ ಜರುಗಿತು.

ಶಾಸಕ ಅಶೋಕ ಪಟ್ಟಣ ಮುಂಚಿತವಾಗಿ ತೇರಿನ ಐದಡಿ ಎತ್ತರ ಕಲ್ಲಿನ ಗಾಲಿಗಳಿಗೆ ತೆಂಗಿನಕಾಯಿ ಒಡೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಮಲಪ್ರಭಾ ನದಿ ತಟದಲ್ಲಿನ ಭವ್ಯ ವೆಂಕಟೇಶ್ವರ ದೇವಸ್ಥಾನದಿಂದ ಎಡಕ್ಕೆ ಏರುಮುಖವಾಗಿ ಇರುವ ತೇರು ಬಜಾರದಲ್ಲಿ ಬೆಳಿಗ್ಗೆ 10ರ ಸಮಯದಲ್ಲಿ ಉತ್ಸವ ಮೂರ್ತಿ ಹೊತ್ತ ಕಲ್ಲಿನ ತೇರನ್ನು ಭಕ್ತಿಭಾವ ತುಂಬಿದ್ದ ಜನಸ್ತೋಮ ಎಳೆದುಕೊಂಡು ಮೇಲೆ ತಂದಿತು.

ಉತ್ತರ ಭಾಗದ ಹನುಮಂತ ದೇವರ ಗುಡಿಯವರೆಗೆ ಬಂದು ರಥ ನಿಂತುಕೊಂಡಾಗ ಸುಮಂಗಲೆಯರು ಆರತಿ ಎತ್ತಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಭಕ್ತರು ರಥದ ಕಡೆಗೆ ಬಾಳೆ ಹಣ್ಣು, ಹೂವು, ಉತ್ತತ್ತಿ ಎಸೆದರು. ರಾಮದುರ್ಗ ಪಟ್ಟಣ ಮಾತ್ರವಲ್ಲದೆ ಹತ್ತಿರದ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು, ಮಕ್ಕಳು, ಮಹಿಳೆಯರು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡರು.

ಹನಮಂತ ದೇವರ ಗುಡಿಯ ಹತ್ತಿರ ಸುಮಾರು 30 ಡಿಗ್ರಿ ಇಳಿಜಾರಿನಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಪಟ್ಟಣದ ವಡ್ಡರ ಕೋಮಿನ ಜನರು ರಥದ ಕಲ್ಲಿನ ಗಾಲಿಗಳಿಗೆ ಸನ್ನೆಗೋಲು ಹಾಕಿ ರಥವನ್ನು ಸಂಪೂರ್ಣ ಹಿಮ್ಮುಖವಾಗಿ ವೆಂಕಟೇಶ್ವರ ಗುಡಿಯ ಕಡೆಗೆ ತಿರುಗಿಸಿ ನಿಲ್ಲಿಸಿದರು.

ಬಹುಶಃ ಇಷ್ಟು ರೋಮಾಂಚಕಾರಿ ರೀತಿಯಲ್ಲಿ ರಥವನ್ನು ತಿರುಗಿಸಿ ನಿಲ್ಲಿಸುವುದು ರಾಮದುರ್ಗ ಪಟ್ಟಣದಲ್ಲಿ ಮಾತ್ರ ನಡೆಯುತ್ತಿದ್ದು ಕಳೆದ ಸುಮಾರು 66 ವರ್ಷಗಳಿಂದ ಈ ಪದ್ದತಿ ನಡೆದುಕೊಂಡು ಬಂದಿದೆ.
ಡೊಳ್ಳು ಕುಣಿತ, ಕರಡಿ ಮಜಲು ಹಾಗೂ ಬಾಜಾಭಜಂತ್ರಿಗಳು ಉತ್ಸವಕ್ಕೆ ಮೆರಗು ನೀಡಿದವು.

ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಎನ್. ವಿ. ಪಾಟೀಲ, ಪುರಸಭೆ ಅಧ್ಯಕ್ಷ ಗೋವಿಂದ ಪತ್ತೇಪೂರ, ಮುಖ್ಯಾಧಿಕಾರಿ ಎನ್. ಎಂ. ಫೆಂಡ್ಸೆ, ಎಪಿಎಂಸಿ ಅಧ್ಯಕ್ಷ ಮಹಾದೇವಗೌಡ ಪಾಟೀಲ, ಗಿರೀಶ ನ್ಯಾಮಗೌಡರ  ರಥೋತ್ಸವದಲ್ಲಿ ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.