ADVERTISEMENT

ಶಾಂತಿ, ಸೌಹಾರ್ದತೆ ಕಾಪಾಡಲು ಸೂಚನೆ

ರಮ್ಜಾನ್: ಗೊಂದಲಕ್ಕೆ ಆಸ್ಪದ ನೀಡಬಾರದು– ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 3:39 IST
Last Updated 12 ಜೂನ್ 2018, 3:39 IST

ಬೆಳಗಾವಿ: ಹಬ್ಬ ಹರಿದಿನಗಳು ಎಲ್ಲರನ್ನೂ ಸಾಂಸ್ಕೃತಿಕವಾಗಿ ಒಂದುಗೂಡಿಸುವ ಸಾಧನಗಳಾಗಿದ್ದು, ಪವಿತ್ರ ರಮ್ಜಾನ್‌ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿ ಜಾತ್ಯತೀತ ಭಾವವನ್ನು ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್‌. ಹೇಳಿದರು.

ಇಲ್ಲಿನ ಪೊಲೀಸ್ ಸಮುದಾಯ ಭವನದಲ್ಲಿ ಸೋಮವಾರ ನಡೆದ ರಮ್ಜಾನ್ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಮ್ಜಾನದಲ್ಲಿ ಹಿಂದೂಗಳು, ಗಣೇಶ  ಉತ್ಸವ, ದೀಪಾವಳಿ, ದಸರಾಗಳಲ್ಲಿ ಮುಸ್ಲಿಂ ಬಾಂಧವರು ಸಕ್ರಿಯರಾಗಿ ಭಾಗವಹಿಸಿ ಸೌಹಾರ್ದತೆಯಿಂದ ಹಬ್ಬ ಆಚರಿಸಿದರೆ ಉತ್ಸವಗಳ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.

ಕಳೆದ ಒಂದು ತಿಂಗಳಿಂದ ದೇವರ ದಯೆ ಮತ್ತು ಆತ್ಮ ಸಂತೃಪ್ತ ಭಾವದಿಂದ ಉಪವಾಸ ವ್ರತ ಕೈಗೊಂಡ ಮುಸ್ಲಿಂ ಬಾಂಧವರು ರಮ್ಜಾನ್ ಹಬ್ಬವನ್ನು ಅಷ್ಟೇ ಸಂತೃಪ್ತಿಯಿಂದ ಆಚರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಹಬ್ಬದಲ್ಲಿ ಪ್ರತಿಯೊಬ್ಬರೂ ಶಾಂತತೆ ಕಾಪಾಡಿದರೆ ಸೌಹಾರ್ದತೆ ಬೆಳೆಯುತ್ತದೆ. ಯಾವ ಗೊಂದಲಕ್ಕೂ ಆಸ್ಪದ ನೀಡಬಾರದು ಎಂದು ಅವರು ಹೇಳಿದರು.

ರಮ್ಜಾನ್ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ. ಪ್ರತಿಯೊಬ್ಬರೂ ಒಂದು ತಿಂಗಳ ಕಾಲ ಭಯ, ಭಕ್ತಿಯಿಂದ ರೋಜಾ ಮಾಡಿದ್ದಾರೆ. ಈ ಪವಿತ್ರ ಮಾಸ ಸಡಗರದಿಂದ ಮುಕ್ತಾಯವಾಗಬೇಕಾದರೆ ಕೊನೆಯ ದಿನವೂ ಇದೇ ಸಂಭ್ರಮ ಕಾಣಿಸಬೇಕು, ಹಿಂದೂ ಧರ್ಮೀಯರೂ ರಮ್ಜಾನ ಹಬ್ಬದ ಯಶಸ್ವಿಗೆ ಸಹಕರಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಆರ್.ರಾಮಚಂದ್ರನ್ ಮಾತನಾಡಿ ‘ರಮ್ಜಾನ ಹಬ್ಬ ಪವಿತ್ರವಾದದ್ದು. ಮುಸ್ಲಿಂ ಬಾಂಧವರು ಶಾಂತಿ, ಸಂಯಮದಿಂದ ರೋಜಾ ವ್ರತ ಕೈಗೊಂಡು, ನಮಾಜ್ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಲ್ಲಾಹ ದೇವರನ್ನು ಪ್ರಾರ್ಥಿಸುತ್ತಾರೆ. ಇದೇ ಕೊನೆಯ ದಿನ ಸಂಭ್ರಮದಿಂದ ಆಚರಿಸಬೇಕು. ಸರ್ವಧರ್ಮಿಯರು ಸಹಕಾರ ನೀಡಬೇಕೆಂದು ಕೋರಿದರು.

ನಗರ ಪೊಲೀಸ್ ಆಯುಕ್ತ  ಡಿ.ಸಿ. ರಾಜಪ್ಪ, ರಮ್ಜಾನ ಹಬ್ಬ ಸರ್ವಧರ್ಮೀಯರಿಗೆ ಸೇರಿದೆ, ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬೇಕು. ಯಾವುದೇ ಬಡಾವಣೆಯಲ್ಲಿ ಸಣ್ಣ ಪುಟ್ಟ ಗಲಾಟೆಯಾದರೂ, ಹಿರಿಯರೇ ಮಧ್ಯಸ್ಥಿಕೆ ವಹಿಸಿ ಅಲ್ಲೇ ಬಗೆಹರಿಸಬೇಕು, ಕ್ಷುಲ್ಲಕ ಜಗಳಗಳು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.

ಶಾಂತಿ ಕದಡುವವರ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ನಮ್ಮನ್ನು ನೋಡುವವರು ಯಾರೂ ಇಲ್ಲ ಎಂದು ತಿಳಿಯಬಾರದು. ಹಬ್ಬದ ಸಂಭ್ರಮಕ್ಕೆ ಭಂಗ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಯುಕ್ತರು ಎಚ್ಚರಿಸಿದರು.

ಯಾವುದೇ ಸ್ಥಳದಲ್ಲಿ ಎಂಥದೇ ಗೊಂದಲಗಳಿದ್ದರೆ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಬೇಕು ಅವರು ಎಂದು ಮಾಡಿದರು. ಡಿಸಿಪಿ ಸೀಮಾ ಲಾಟ್ಕರ್, ವಿಕಾಸ್ ಕಲಘಟಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.