ADVERTISEMENT

ಶಿರಸಂಗಿಯಲ್ಲಿ ನೆಲೆನಿಂತ ಜಗಜ್ಜನನಿ ಕಾಳಿಕಾಂಬೆ

ಮಕ್ತುಂ ಯಲಿಗಾರ
Published 9 ಏಪ್ರಿಲ್ 2013, 8:44 IST
Last Updated 9 ಏಪ್ರಿಲ್ 2013, 8:44 IST

ಶಿರಸಂಗಿ: ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಶಿರಸಂಗಿ ಶ್ರೀ ಕಾಳಿಕಾದೇವಿಯ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಕಾಳಿಕಾದೇವಿಯು ವಿಶ್ವಕರ್ಮರ ಕುಲದೇವತೆಯಾದರೂ ಅರಸಿ ಬರುವ ಲಕ್ಷಾಂತರ ಭಕ್ತರ ಆರಾಧ್ಯ ದೇವತೆಯಾಗಿದ್ದಾಳೆ.

ಈಗಿನ ಶಿರಸಂಗಿ ಪ್ರಾಚೀನ ಕಾಲದ ಮಧ್ಯಯುಗದ ಪ್ರಾರಂಭದಿಂದ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವದ ಘಟನೆಗಳನ್ನು ಸೂಚಿಸುವ ಕೈಗನ್ನಡಿಯಾಗಿದೆ. ಮಧ್ಯಯುಗದ ಆದಿಯಲ್ಲಿ ಈ ಗ್ರಾಮವನ್ನು ಹಿರಿಸಿಂಗಿ ಎಂದು ಕರೆಯಲಾಗುತ್ತಿತ್ತು. ಐತಿಹಾಸಿಕವಾಗಿ ತುಕ್ಯಾಣ ಚಾಲುಕ್ಯರ ಆಡಳಿತದ ರಾಜಧಾನಿಯಾಗಿದ್ದ ಈ ಊರು ಋಷ್ಯಶೃಂಗಪುರ, ರಿಷಿಶೃಂಗಪುರ, ಬೆಳವಲ ಪಿರಿಸಿಂಗ ಎಂದು ಖ್ಯಾತಿ ಪಡೆದಿತ್ತು ಎಂಬುದು ಇಲ್ಲಿನ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.

ರಾಮಾಯಣ ಕಾಲದಲ್ಲಿಯೆ ಈ ನಾಡಿನಲ್ಲಿ ಶಾಕ್ತ ಸಂಪ್ರದಾಯ ಆಚರಣೆಯಲ್ಲಿತ್ತು ಎಂಬುದಕ್ಕೆ ಶಿರಸಂಗಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಕಾಳಿಕಾದೇವಿ ಸಾಕ್ಷಿಯಾಗಬಲ್ಲಳು. ಯಾಕೆಂದರೆ ಅಯೋಧ್ಯೆಯ ದೊರೆ ದಶರಥನು ಪುತ್ರಕಾಮೇಷ್ಠಿಯಜ್ಞ ಮಾಡಲು ಶಿರಸಂಗಿಯಲ್ಲಿದ್ದ ವಿಭಾಂಡಕ ಮುನಿಯ ಪುತ್ರ ಶೃಂಗಋಷಿಯನ್ನು ಕರೆಯಿಸಿಕೊಂಡು ಇವರ ಮೂಲಕ ಯಜ್ಞ ಮಾಡಿಸಿ ಇಷ್ಟಾರ್ಥ ಫಲವನ್ನು ಅಂದರೆ ರಾಮ, ಲಕ್ಷ್ಮಣ, ಭರತ, ಶತೃಘ್ನರನ್ನು ಪಡೆದನೆಂದು ರಾಮಾಯಣದಲ್ಲಿ ಬರುತ್ತದೆ.

ಶೃಂಗಋಷಿ ಯಜ್ಞ-ಯಾಗಾದಿಗಳನ್ನು ಮಾಡಲು ಅಡ್ಡಿಪಡಿಸಿ, ಉಪಟಳಕಾರಿಯಾಗಿದ್ದ ರಾಕ್ಷಸರ ಸಂಹಾರಕ್ಕಾಗಿ ದೇವಿಯನ್ನು ಸ್ಮರಿಸುತ್ತಾ ಉಗ್ರ ತಪಸ್ಸು ಮಾಡಿದಾಗ ಆದಿಶಕ್ತಿ ಜಗಜ್ಜನನಿಯು ತನ್ನ ಮೂಲರೂಪದಲ್ಲಿ ಮಹಾಕಾಲಿಕಾ ಆಗಿ ದರ್ಶನ ನೀಡಿ ಮುನಿಗಳಿಂದ ಪೂಜೆ ಸ್ವೀಕರಿಸಿ, ಅವರಿಗೆ ಉಪಟಳಕಾರಿಯಾಗಿದ್ದ ನಲುಂದ, ನರುಂದ, ಹಿರೇಕುಂಬಾಸುರ, ಚಿಕ್ಕಕುಂಬಾಸುರ, ಬೆಟ್ಟಾಸುರ, ಎಟ್ಟಾಸುರರೆಂಬ ರಾಕ್ಷಸರರನ್ನು ಸಂಹರಿಸಿ, ಇಲ್ಲಿನ ಖಡ್ಗತೀರ್ಥ ಹೊಂಡದಲ್ಲಿ ತನ್ನ ಆಯುಧಗಳನ್ನು ತೊಳೆದು ನಂತರ ಶಾಂತಮುಖ ಮುದ್ರೆಯುಳ್ಳವಳಾಗಿ ಆನಂದಾಸನದಲ್ಲಿ ಮಂಡಿತಳಾದಾಗ, ಶೃಂಗೃಋಷಿಗಳು ಆನಂದಭಾಷ್ಟ ಪೂರಿತರಾಗಿ ದೇವಿಗೆ ಅಷ್ಟೋತ್ತರ ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಿ ದೇವಿ ಭಕ್ತರಾದ ನಮ್ಮನ್ನು ಕಾಪಾಡಲು ಇಲ್ಲಿಯೇ ನೆಲೆಸೆಂದು ಕೇಳಿಕೊಂಡರು. ಅಧಿಷ್ಠಾನದಲ್ಲಿರುವ ಶಕ್ತಿದೇವಿಯು ತಾನು ಭಕ್ತಾಧೀನಳು ಎಂಬುದನ್ನು ಸಾರ್ಥಕಪಡಿಸಲು ಶಿರಸಂಗಿಯಲ್ಲಿ ನೆಲೆನಿಂತಳೆಂದು ಪ್ರತೀತಿಯಿದೆ.

ಶಕ್ತಿಪೀಠ: ಗರ್ಭಗುಡಿಯಲ್ಲಿ ಸ್ಥಾಪಿತವಾಗಿರುವ ಶ್ರೀ ಕಾಳಿಕಾಮಾತೆಯ ಮೂರ್ತಿಯು ಶಿಲ್ಪಿಯ ಕಲಾ ನೈಪುಣ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 9 ಅಡಿ ಎತ್ತರದ ವಿಗ್ರಹವು ಆನಂದಾಸನದಲ್ಲಿ ಮಂಡಿತವಾಗಿದ್ದು, ರತ್ನಖಚಿತ ಕುಸುರಿನ ಕಿರೀಟ ಧರಿಸಿ ಬಲಭಾಗದ ಚತುರ್ಭುಜದಲ್ಲಿ ಖಡ್ಗ, ತ್ರಿಶೂಲ, ಬಾಕು, ಚಕ್ರ ಹಿಡಿದಿದ್ದರೇ, ಎಡಭಾಗದ ಚತುರ್ಭುದಲ್ಲಿ ಢಮರು, ಸರ್ಪ, ಖಿಟಕ, ಪಾನಪಾತ್ರೆ ಹಿಡಿದಿದ್ದಾಳೆ. ರುಂಡ ಮಾಲಾಧಾರಿಯಾದ ದೇವಿಮೂರ್ತಿ ಸುವರ್ಣ ರೇಖಾಂಕಿತ ಕರಿಸಾಲಿ ಗ್ರಾಮದಿಂದ ಕೂಡಿದೆ. ಪೂರ್ವ ಪ್ರಾಂಗಣ ಮಹಾದ್ವಾರವನ್ನು ಪ್ರವೇಶಿಸಿದಾಗ ಕಾಳಿಕಾದೇವಿಯ ಭವ್ಯ ಮಂಟಪ ಎದುರುಗೊಳ್ಳುತ್ತದೆ. ಎಡಬದಿಯಲ್ಲಿ ದೀಪ ಸ್ತಂಬ, ಬಲಬದಿಗೆ ಗ್ರಾಮದೇವತೆ ಉಡಚಮ್ಮ, ಎದುರಿಗೆ ಕಮಠೇಶ್ವರ, ಬಲಕ್ಕೆ ಭೈರವೇಶ್ವರ, ಎಡಕ್ಕೆ ಶ್ರೀಕಾಳಿಕಾ ಹಾಗೂ ದತ್ತಾತ್ರೇಯ ದೇವಾಲಯ (ಪಾದುಕೆ)ಗಳು ಇವೆ. ದೇವತಾ ಸಾನಿಧ್ಯಕ್ಕೆ ಭೂಷಣವೆಂಬಂತೆ ಸುತ್ತಲಿನ ಹಸುರಿನ ಗಿರಿತಾಣ ನೋಡುಗರ ಕಣ್ಮನ ತಣಿಸುವಂತಿದೆ.

ಗೋಪುರಕ್ಕೆ ಕವಚ ಅಲಂಕಾರ: ದೇವಾಲಯದ ಪ್ರಾಚೀನ ಕಾಲದ ಗೋಪುರ ಶಿಥಿಲಗೊಳ್ಳುತ್ತಿರುವುದನ್ನು ಮನಗಂಡ ದೇವಾಲಯ ಟ್ರಸ್ಟ್‌ನ ಧರ್ಮದರ್ಶಿಗಳಾದ ಆಚಾರ್ಯರು ಬರುವ ಭಕ್ತರ ಸಹಕಾರದಿಂದ ಹಣ ಸಂಗ್ರಹಿಸಿ ಸುಮಾರು 20 ಲಕ್ಷ ವೆಚ್ಚದಿಂದ ಗೋಪುರಕ್ಕೆ ಪಂಚಲೋಹದ ಕವಚ ಅಲಂಕಾರವನ್ನು ಮಾಡಿಸಿದ್ದಾರೆ. ಇದು ಯುಗಾದಿ ಯಾತ್ರಾ ಮಹೋತ್ಸವಕ್ಕೆ ಮತ್ತಷ್ಟು ಮೆರಗು ನೀಡುಂವಂತಿದೆ.
ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯವರು ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಬರುವ ಭಕ್ತರಿಗಾಗಿ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದಾರೆ. 

ಯುಗಾದಿ ಯಾತ್ರಾ ಮಹೋತ್ಸವ
ಯುಗಾದಿ ಅಮಾವಾಸ್ಯೆಯ ದಿನವಾದ ಇದೇ 10ರಂದು ಪ್ರಾತಃಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ, ದೇವಿಗೆ ಅಭಿಷೇಕ, ವಿಶೇಷ ಅಲಂಕಾರ ನಂತರ ಹೊಸ ಗೋಧಿ ನಿಧಿ ಹಾಕುವುದು ಆರಂಭವಾಗಿ ಹೊಸ ಸಂವತ್ಸರ ಸ್ಪರ್ಶದವರೆಗೆ ನಡೆಯುವುದು. 11ರಂದು ಪಾಡ್ಯದಂದು ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ಬೆಳಿಗ್ಗೆ 5ಗಂಟೆಗೆ ಬಲಿದಾನ ಪೀಠದಲ್ಲಿ ಒಂಬತ್ತು ಅನ್ನದ ಉಂಡೆಗಳನ್ನು ಇಟ್ಟು, ದೇವಿಯು ದೈತ್ಯರ ರುಂಡ ಚೆಂಡಾಡಿದ ಪ್ರತೀಕವಾಗಿ ಬುತ್ತಿ ಹಾರಿಸುವ ಪರಿಪಾಠ ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT