ADVERTISEMENT

ಸಂಗೊಳ್ಳಿ ರಾಯಣ್ಣ ಉತ್ಸವ

12ರಿಂದ ಎರಡು ದಿನ ವಿಜೃಂಭಣೆಯಿಂದ ಆಚರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 8:44 IST
Last Updated 3 ಜನವರಿ 2014, 8:44 IST

ಸಂಗೊಳ್ಳಿ(ಬೈಲಹೊಂಗಲ): ಸ್ವಾತಂತ್ರ್ಯ ಹೋರಾಟ ಗಾರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಜ.12 ರಿಂದ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಎನ್‌.ಜಯರಾಂ ಹೇಳಿದರು. ಸಂಗೊಳ್ಳಿ ಗ್ರಾಮದಲ್ಲಿ ಗುರವಾರ  ನಡೆದ  ‘ಸಂಗೊಳ್ಳಿ ರಾಯಣ್ಣನ ಉತ್ಸವ’ದ  ಕುರಿತ  ಪೂರ್ವ ಭಾವಿ ಸಭೆಯಲ್ಲಿ  ಅವರು ಮಾತನಾಡಿದರು. ರಾಯಣ್ಣನ ಸ್ವಾತಂತ್ರ್ಯ ಅಭಿಮಾನ ಹಾಗೂ ತ್ಯಾಗ ಬಲಿದಾನ ಸ್ಮರಣೆಗಾಗಿ, ಮುಂದಿನ ಪೀಳಿಗೆಗೆ ದೇಶಾ ಭಿಮಾನ ಕುರಿತು ತಿಳಿವಳಿಕೆ ನೀಡಲು ಸಾರ್ವಜನಿಕರು ಹಲವು ವರ್ಷಗಳಿಂದ ರಾಯಣ್ಣನ ಸ್ಮರಣೋತ್ಸವ ಆಚರಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ಉತ್ಸವಕ್ಕೆ ಈಗಾಗಲೇ ₨ 10 ಲಕ್ಷ ಬಿಡುಗೆಯಾ ಗಿದ್ದು, ಎರಡು ದಿನಗಳ ಉತ್ಸವಕ್ಕಾಗಿ ರೂ.30 ಲಕ್ಷ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಉತ್ಸವ ಯಶಸ್ವಿಗೊಳಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ, ಉಪಸಮಿತಿಗಳನ್ನು ರಚಿಸಲಾಗುವುದು. ಕಲಾವಿದರು, ಮಂತ್ರಿಗಳು, ಸಾಹಿತಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಗ್ರಾಮಕ್ಕೆ ಅವಶ್ಯಕವಿರುವ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ,  ಗ್ರಾಮದ ರಸ್ತೆಯಲ್ಲಿರುವ ಅನಧಿಕೃತ  ತಿಪ್ಪೆಗುಂಡಿಗಳನ್ನು ತೆರವು ಗೊಳಿಸುವಂತೆ, ಇದಕ್ಕೆ ಸಹಕರಿಸದೇ ಇದ್ದವರ ತಿಪ್ಪೆ ಗುಂಡಿ ಸವಾಲ ಮಾಡುವಂತೆ ಪಿಡಿಓ ಅವರಿಗೆ ಸೂಚಿಸಿದರು. ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಿರ್ದೇಶಿಸಿದರು.

ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿ ‘ಉತ್ಸವದ ಚಾಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವುದಾಗಿ ತಿಳಿಸಿದರು. ರಾಯಣ್ಣನ ಜ್ಯೋತಿಯನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಂಚರಿಸುವಂತೆ ಕಾರ್ಯ ಕ್ರಮ ರೂಪಿಸಬೇಕು ಎಂದರು. ಉತ್ಸವ ಯಶಸ್ವಿಗೆ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಕಲಾವಿದ ಸಿ.ಕೆ.ಮೆಕ್ಕೇದ ಮಾತನಾಡಿ ‘ಉತ್ಸವಕ್ಕೆ ರೂ.1ಕೋಟಿ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ನಿರ್ಮೂಲನೆ ಆಂದೋಲನದ ರೂವಾರಿ ಅಣ್ಣಾ ಹಜಾರೆ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು. ಉತ್ಸವಕ್ಕೆ ಮುಖ್ಯಮಂತ್ರಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಆಹ್ವಾನಿಸಬೇಕು ಎಂದು ಗ್ರಾಮಸ್ಥರು ಸಲಹೆ ನೀಡಿದರು.

ಸಭೆಗೆ ಹಾಜರಾಗದೇ ಇರುವ ಕೆಪಿಟಿಸಿಎಲ್‌ ಅಧಿಕಾರಿಗೆ ನೋಟಿಸ್‌ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಉಪವಿಭಾಗಧಿಕಾರಿ ವಿಜಯಕುಮಾರ್‌ ಹೊನಕೇರಿ, ತಹಶೀಲ್ದಾರ್‌ ವಿನಾಯಕ ಪಾಲನಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾ ಭಜಂತ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕೊಡ್ಲಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಿನೇಶ ವಳಸಂಗ, ಉಪಾಧ್ಯಕ್ಷೆ ಶಶಿಕಲಾ ಭದ್ರಶೆಟ್ಟಿ, ತಾಲ್ಲೂಕು ಪಂಚಾಯಿತಿ  ಸದಸ್ಯ ಮಲ್ಲಿಕಾರ್ಜುನ ಮಾಟೊಳ್ಳಿ, ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಕುಮಾರ್‌ ದೇಶನೂರ, ಮಲ್ಲಿಕಾರ್ಜುನ ಕೊಡೊಳ್ಳಿ, ಮಲ್ಲಪ್ಪ ಪಂತಿ, ರಾಜು ಸೊಗಲ, ಅರುಣ ಯಲಿಗಾರ, ರಾಜಶೇಖರ ವಕ್ಕುಂದಮಠ, ಬಾಬು ಖುದ್ದನವರ, ಮೆಹಬೂಬ ಬೇಪಾರಿ, ಸಿದ್ಧಲಿಂಗ ಸಿದ್ಧಯ್ಯನವರ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ರಾಯಣ್ಣನ ಅಭಿಮಾನಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT