ADVERTISEMENT

ಸಂಸದ ಅಂಗಡಿ ವಿರುದ್ಧ ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2011, 5:25 IST
Last Updated 19 ನವೆಂಬರ್ 2011, 5:25 IST
ಸಂಸದ ಅಂಗಡಿ ವಿರುದ್ಧ ಕರವೇ ಪ್ರತಿಭಟನೆ
ಸಂಸದ ಅಂಗಡಿ ವಿರುದ್ಧ ಕರವೇ ಪ್ರತಿಭಟನೆ   

ಗೋಕಾಕ: `ಕನ್ನಡ ಹೋರಾಟಗಾರರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯವೆಂಬ ನಾಮಫಲಕ ಹಾಕಿ !~ ಎಂದು ಸವಾಲು ಎಸಗಿ ಕನ್ನಡಿಗರನ್ನು ಕೆರಳಿಸಿರುವ ಸಂಸದ ಸುರೇಶ ಅಂಗಡಿಯವರ ಎಂ.ಇ.ಎಸ್. ಪರವಾದ ನಿಲುವನ್ನು ಖಂಡಿಸಿ, ಕರವೇ ಕಾರ್ಯಕರ್ತರು ಪ್ರತಿಭಟಿಸಿದರು.

ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಶುಕ್ರವಾರ ನಗರದ ವಾಲ್ಮೀಕಿ ವೃತ್ತದಲ್ಲಿ ಅವರ ಅಣುಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ, ಸಂಸದ ಅಂಗಡಿ ಅವರ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿದರು.

ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖಾನಪ್ಪನವರ, ಸತತ ಎರಡು ಅವಧಿಗೆ ಕನ್ನಡಿಗರ ಗರಿಷ್ಠ ಮತಗಳನ್ನು ಪಡೆದು ಲೋಕಸಭೆಗೆ ಆಯ್ಕೆಗೊಂಡ ಸಂಸದ ಸುರೇಶ ಅಂಗಡಿ ಅವರು ಕನ್ನಡಿಗರ ಕುರಿತಾಗಿ ತುಚ್ಛವಾಗಿ ಮಾತನಾಡಿ, ಅವಮಾನಿಸುವುದು ಸರಿಯಲ್ಲ.

ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ನಾಮಫಲಕ ಹಾಕಲು ಸವಾಲು ಹಾಕಿರುವುದು ಸರಿಯಲ್ಲ. ಸಂಸದರಿಗೆ ತಾಕತ್ತಿದ್ದರೆ ಜಿಲ್ಲೆಯ ಯಳ್ಳೂರು, ಕಂಗ್ರಾಳಿ ಗ್ರಾಮಗಳಲ್ಲಿರುವ ಮಹಾರಾಷ್ಟ್ರ ರಾಜ್ಯವೆಂಬ ನಾಮಪಲಕ ತೆರುವುಗೊಳಿಸಲು ಕ್ರಮ ಕೈಗೊಳ್ಳಲಿ ಎಂದು ಪ್ರತಿ ಸವಾಲು ಹಾಕಿದರು.

ಸಂಸದ ಅಂಗಡಿ ಅವರಿಗೆ ಮಹಾರಾಷ್ಟ್ರದ ಬಗ್ಗೆ ಅಭಿಮಾನವಿದ್ದರೆ ಚುನಾವಣೆ ಸ್ಪರ್ಧಿಸಿ, ಆಯ್ಕೆಗೊಳ್ಳಲಿ. ಅದನ್ನು ಬಿಟ್ಟು ಕನ್ನಡಿಗರನ್ನು ಕೆರಳಿಸುತ್ತಿರುವುದು ನಾಚಿಕೆಗೇಡಿತನ. ಅಂಗಡಿ ಅವರು ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರವೇ ಮುಖಂಡರಾದ ಸಾದಿಕ್ ಹಲ್ಯಾಳ, ಎ.ಕೆ. ದೇಸಾಯಿ, ನಿಜಾಮ್ ನದಾಫ್, ಕೃಷ್ಣಾ ಬಂಡಿವಡ್ಡರ, ಪಪ್ಪು ಹಂದಿಗುಂದ, ರುದ್ರಪ್ಪ ಪಾಟೀಲ, ಶಂಕರ ಹೂಲಿಕಟ್ಟಿ, ಸಂಜು ಯಕ್ಸಂಬಿ, ಹನೀಫ್‌ಸಾಬ ಸನದಿ, ಕೃಷ್ಣಾ ಖಾನಪ್ಪನವರ, ಬಸು ಹುಲಕುಂದ, ಮಾಕನ್ನವರ, ಲಕ್ಕಪ್ಪ ಕೂಳ್ಳೂರ, ಅರುಣ ಪಂಡಿತ, ಭೀಮಪ್ಪ ಪುಟಾಣಿ, ರಮೇಶ ಹಿರೇಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.