ADVERTISEMENT

ಸಚಿವರೂ ಬರಲಿಲ್ಲ : ಕಾಲೂ ಸರಿಯಾಗಲಿಲ್ಲ...

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 6:50 IST
Last Updated 7 ಏಪ್ರಿಲ್ 2011, 6:50 IST

ಚನ್ನಮ್ಮನ ಕಿತ್ತೂರು: ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಅವರು ಪ್ರಯಾಣಿ ಸುತ್ತಿದ್ದ ಸರಕಾರಿ ವಾಹನ ಸಮೀಪದ ಉಗರಖೋಡ ಗ್ರಾಮದ ಬಳಿ ಕಳೆದ ವರ್ಷ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕಾಲು ಹಾಗೂ ತಲೆಗೆ ತೀವ್ರ ಪೆಟ್ಟು ತಗುಲಿ ಈಗ ನಡೆಯಲಾರದ  ಸ್ಥಿತಿಯಲ್ಲಿದ್ದಾನೆ.ಹುಬ್ಬಳ್ಳಿಯಲ್ಲಿ ಅಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸಿದ್ದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮರಳಿ ಬೆಳಗಾವಿ ಕಡೆಗೆ ಪ್ರಯಾಣಿಸುತ್ತಿದ್ದ ಸಚಿವರಿದ್ದ ಕಾರ್ ಉಗರಖೋಡ ಗ್ರಾಮದ ಗೌಡಪ್ಪ ಬಾಳಪ್ಪ ಪಾಟೀಲ (53) ಹೊರಟಿದ್ದ ಬೈಕ್‌ಗೆ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿತ್ತು.

ಅಪಘಾತವಾದ ಕೂಡಲೇ ಆತನನ್ನು ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಿ ಪ್ರಥಮೋಪಚಾರ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಯೂ ಆತನಿಗೆ ಉಪಚಾರ ನೀಡಿ ಮರಳಿ ಊರಿಗೆ ಕಳುಹಿಸಿಯೇ ಆರು ತಿಂಗಳು ಕಳೆದಿವೆ. ‘ಚಿಕಿತ್ಸೆಗೆ ಎಲ್ಲ ರೀತಿಯ ನೆರವು ನೀಡುತ್ತೇವೆ’ ಎಂಬ ಮಂತ್ರಿಗಳ ಮಾತು ಮಾತ್ರ ಗಾಳಿಯಲ್ಲಿ ತೂರಿ ಹೋಗಿದೆ!

ಬಡಕುಟುಂಬ: ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದ ್ಲಲ್ಲಿರುವ ಕಾರ್ಖಾನೆಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಗೌಡಪ್ಪನಿಗೆ ಪತ್ನಿ ಹಾಗೂ ಒಬ್ಬ ಪುತ್ರನಿದ್ದಾನೆ. ಗಾರ್ಡ್ ಕೆಲಸ ಬಿಟ್ಟರೆ ಈತನಿಗೆ ಹೊಲ, ಮನೆ ಏನೂ ಇಲ್ಲ. ಬಂದ ಆದಾಯದಲ್ಲಿಯೇ ಮೂವರಿದ್ದ ಕುಟುಂಬದ ಬಂಡಿ ಎಳೆಯಬೇಕಿತ್ತು.

2010 ಅಕ್ಟೋಬರ್ 30ರಂದು ಈ ದುರ್ಘಟನೆ ಸಂಭವಿಸಿದೆ. ಅಪಘಾತವಾದ ಕೂಡಲೇ ‘ನನ್ನ ಕಾರಿಗೆ ಬಡವ ಬಲಿಯಾಗುತ್ತಿದ್ದನಲ್ಲ’ ಎಂದು ಮರುಗಿದ ಸಚಿವ ಕತ್ತಿ ಅವರು, ಆಸ್ಪತ್ರೆವರೆಗೆ ಆಗಮಿಸಿ ಬಡವನ ಸ್ಥಿತಿ ಕಣ್ಣಾರೆ ಕಂಡರು. ‘ಇವನನ್ನು ಒಕ್ಕೊಡುವುದಿಲ್ಲ. ಕೊನೆಯವರೆಗೆ ಕೂತು ತಿನ್ನುವಂತೆ ಮಾಡುತ್ತೇನೆ’ ಎಂದು ಆ ಕ್ಷಣದಲ್ಲಿ ಭರವಸೆ ನೀಡಿದ್ದರಂತೆ.
‘ಈ ಮಾತನ್ನು ಹೇಳಿ ಸಚಿವರು ಅತ್ತ ಹೋದ ಕೂಡಲೇ ಇಲ್ಲಿ ಆದದ್ದೇ ಬೇರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಈತನನ್ನು ಕೊಂಡೊಯ್ಯಲಾಯಿತು. ಅಲ್ಲಿ ಮಾತನಾಡಿಸುವವರು ಯಾರೂ ಇರಲಿಲ್ಲ. ಎಲ್ಲದಕ್ಕೂ ದುಡ್ಡು ಕೇಳಿದರು. ಸ್ಕ್ಯಾನಿಂಗ್, ಔಷಧ, ಡಿಸ್‌ಚಾರ್ಜ್ ಸೇರಿದಂತೆ ಸಾವಿರಾರು ರೂಪಾಯಿ ವೆಚ್ಚವಾಯಿತು. ಅದನ್ನೆಲ್ಲ ಸಾಲ ಮಾಡಿ ಕೊಟ್ಟೆ’ ಎನ್ನುತ್ತಾರೆ ಗೌಡಪ್ಪನ ಪತ್ನಿ ಮಾದೇವಿ ಅವರು.

‘ಪತಿಯ ಬಲಗಾಲಿಗೆ ರಾಡ್ ಹಾಕಿದ್ದಾರೆ. ಇನ್ನೂವರೆಗೆ ನಡೆದಾ ಡಲು ಸಾಧ್ಯವಾಗ್ತಾಯಿಲ್ಲ. ಡ್ರೆಸ್ಸಿಂಗ್, ಇಂಜೆಕ್ಷನ್, ಔಷಧ ವೆಚ್ಚ ನಿತ್ಯ ಭರಿಸಬೇಕಾಗಿದೆ. ಇಂತಹ ದು:ಸ್ಥಿತಿ ಯಲ್ಲಿ ದುಡ್ಡಿನ ಅಡಚಣಿ ಇದೆ. ಮಾತು ಕೊಟ್ಟ ಸಚಿವರು ಮಾತ್ರ ನಮ್ಮತ್ತ ತಿರುಗಿಯೂ ನೋಡಿಲ್ಲ. ನಾವೇನು ಮಾಡಬೇಕು?’ ಎಂದು ಅವರು ಕಣ್ಣೀರು ಸುರಿಸಿದರು.
ಸಚಿವ ಉಮೇಶ ಕತ್ತಿ ಇನ್ನಾದರೂ ತಮ್ಮ ಮೇಲೆ ಕೃಪಾದೃಷ್ಟಿ ಬೀರುವರೇ ಎಂದು ಇನ್ನೂ ಎದುರು ನೋಡುತ್ತಿದೆ ಬಡಕುಟುಂಬ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.