ADVERTISEMENT

ಸಚಿವ ಕತ್ತಿ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:15 IST
Last Updated 20 ಅಕ್ಟೋಬರ್ 2012, 8:15 IST
ಸಚಿವ ಕತ್ತಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಸಚಿವ ಕತ್ತಿ ಹೇಳಿಕೆ ಖಂಡಿಸಿ ಪ್ರತಿಭಟನೆ   

ಬೆಳಗಾವಿ: ಪ್ರತ್ಯೇಕ ರಾಜ್ಯ ರಚನೆ ಕುರಿತು ಸಚಿವ ಉಮೇಶ ಕತ್ತಿ ನೀಡಿರುವ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸಚಿವರ ಪ್ರತಿಕೃತಿ ದಹನ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಮಹನೀಯರು ಶ್ರಮಿಸಿದ್ದಾರೆ, ತ್ಯಾಗ ಮಾಡಿದ್ದಾರೆ. ಇಂಥ ರಾಜ್ಯವನ್ನು ಒಡೆಯುವ ಬಗ್ಗೆ ತಮ್ಮ ಸ್ವಾರ್ಥ ಸಾಧನೆಗೆ ಹೇಳಿಕೆ ನೀಡುವ ಬಿಜೆಪಿ ನಾಯಕರಿಗೆ ಕರ್ನಾಟಕವು ತಮ್ಮ ಸ್ವಂತ ಆಸ್ತಿಯಲ್ಲ.

ಈ ಹಿಂದೆ ವಿಧಾನಸಭೆ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ಅವರಂತೆಯೇ ಈಗ ಸಚಿವ ಉಮೇಶ ಕತ್ತಿ ಕೂಡ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಬಗ್ಗೆ ಹೇಳಿಕೆ ನೀಡ್ದ್ದಿದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಹಾದೇವ ತಳವಾರ, ಶಿವಾನಂದ, ರಾಜು, ರಮೇಶ, ವಿಶಾಲ್, ರಮೇಶ ತಳವಾರ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಖಂಡನೆ
 ಸಚಿವ ಉಮೇಶ ಕತ್ತಿ ಅವರು ಕರ್ನಾಟಕ ರಾಜ್ಯವನ್ನು ಒಡೆಯುವ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಹೋರಾಡಿದವರಿಗೆ ಇವರ ಹೇಳಿಕೆಯಿಂದ ನೋವು ಉಂಟಾಗಿದೆ. ಇಂಥ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಮಾಜಿ ಮೇಯರ್ ಹಾಗೂ ಕನ್ನಡಪರ ಹೋರಾಟಗಾರ ಸಿದ್ಧನಗೌಡ ಪಾಟೀಲ ಹೇಳಿದ್ದಾರೆ.

ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಆದರೆ ಈ ಕಾರಣಕ್ಕಾಗಿಯೇ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.