ADVERTISEMENT

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ನಿರ್ಧಾರ ಕೈಬಿಡಲು ಕನ್ನಡ ಸಂಘಟನೆಗಳ ಮನವಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 6:50 IST
Last Updated 25 ಜೂನ್ 2011, 6:50 IST
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ನಿರ್ಧಾರ ಕೈಬಿಡಲು ಕನ್ನಡ ಸಂಘಟನೆಗಳ ಮನವಿ
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ನಿರ್ಧಾರ ಕೈಬಿಡಲು ಕನ್ನಡ ಸಂಘಟನೆಗಳ ಮನವಿ   

ಬೆಳಗಾವಿ: “ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುವ ಬಗ್ಗೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಮತ್ತು 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು” ಎಂದು ಮಾಜಿ ಮೇಯರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧನಗೌಡ ಪಾಟೀಲ ಒತ್ತಾಯಿಸಿದರು.

ಈ ಕುರಿತು ಪ್ರಭಾರ ಜಿಲ್ಲಾಧಿಕಾರಿ ಡಾ. ಅಜಯ ನಾಗಭೂಷಣ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

“ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಇಂಗ್ಲಿಷ್ ಮಾಧ್ಯಮ ಜಾರಿಗೆ ತರಲು ಸರ್ಕಾರ ಉದ್ದೇಶಿಸಿರುವುದು ಅಪಾಯಕಾರಿ ಬೆಳವಣಿಗೆ. ಕನ್ನಡದ ಹಿತದೃಷ್ಟಿಯಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಜಾರಿಗೆ ತರುವುದು ಸೂಕ್ತ ಕ್ರಮವಲ್ಲ. ಇಂಥ ಪ್ರಸ್ತಾವವನ್ನು ಬೆಳಗಾವಿಯ ಕನ್ನಡ ಸಂಘಟನೆಗಳ ಪರವಾಗಿ ನಾವು ತೀವ್ರವಾಗಿ ವಿರೋಧಿಸುತ್ತೇವೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು 10ನೇ ತರಗತಿವರೆಗೂ ಕನ್ನಡ ಮಾಧ್ಯಮವನ್ನೇ ಮುಂದುವರಿಸಿಕೊಂಡು ಹೋಗಬೇಕು” ಎಂದು ಅವರು ಆಗ್ರಹಿಸಿದರು.

“ರಾಜ್ಯ ಸರ್ಕಾರಕ್ಕೆ ಇರಬೇಕಾದ ಕನ್ನಡ ನಾಡು- ನುಡಿಯ ಬಗೆಗಿನ ಬದ್ಧತೆಯ ಬಗ್ಗೆ ನಾಡಿನ ಜನರಲ್ಲಿ ಆತಂಕ ಮೂಡುತ್ತಿದೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕು” ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

“ಬೆಳಗಾವಿ ಗಡಿ ಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರು ಕೇಳುವ ಸವಲತ್ತುಗಳನ್ನು ಇಲ್ಲಿನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅದನ್ನು ಅನುಷ್ಠಾನಗೊಳಿಸುವ ತರಾತುರಿಯಲ್ಲಿ ಇದ್ದಂತೆ ಕಾಣುತ್ತಿದೆ. ಭಾಷಾ ಅಲ್ಪಸಂಖ್ಯಾತ ಆಯೋಗ ನೀಡಿದ ನಿರ್ದೇಶನವನ್ನು ಅಧಿಕಾರಿಗಳು ಪಾಲಿಸಲು ಹೊರಟಿರುವುದು ಸರಿಯಲ್ಲ” ಎಂದು ಹೇಳಿದರು.

“ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಕನ್ನಡಿಗರಿಗೆ ಯಾವ ಸೌಲಭ್ಯಗಳನ್ನು ಅಲ್ಲಿನ ಸರ್ಕಾರ ನೀಡುತ್ತಿದೆ ಎಂಬುದನ್ನು ನಾವು ಮೊದಲು ನೋಡಬೇಕು. ಆಯೋಗವು ಎರಡೂ ರಾಜ್ಯಗಳ ಭಾಷಾ ಅಲ್ಪಸಂಖ್ಯಾತರಿಗೂ ಸಂವಿಧಾನಬದ್ಧ ಸವಲತ್ತುಗಳನ್ನು ನೀಡಬೇಕೆ ಹೊರತು, ಕೇವಲ ಕರ್ನಾಟಕದ ಗಡಿಯಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ ಮಾತ್ರ ಅನ್ವಯಿಸಬಾರದು. ಈ ಕುರಿತು ರಾಜ್ಯ ಸರ್ಕಾರ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ಸೂಕ್ತ ಸಂದೇಶವನ್ನು ಕಳುಹಿಸಬೇಕು” ಎಂದು ಸಿದ್ಧನಗೌಡ ಪಾಟೀಲ ಒತ್ತಾಯಿಸಿದರು.

ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶೋಕ ಚಂದರಗಿ, “ಬೆಳಗಾವಿಯ ಕೆಲವು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಸರ್ಕಾರಿ ಕಚೇರಿಗೆ ನುಗ್ಗಿ ಮರಾಠಿಯಲ್ಲಿ ನಾಮಫಲಕ ಹಾಕುವಂತೆ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇಂಥವರ ಮೇಲೆ ಕೂಡಲೇ ಪ್ರಕರಣದ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಎಂಇಎಸ್ ನಾಯಕರ ಒತ್ತಡಕ್ಕೆ ಮಣಿಯದಂತೆ ಗಡಿ ಭಾಗದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಕುರಿತು ಚರ್ಚಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಬೇಕು” ಎಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

“ವಾಹನಗಳ ಮೇಲೆ ಕನ್ನಡ ಅಂಕಿಗಳನ್ನು ಹಾಕಿಸುತ್ತಿರುವವರಿಗೆ ರಾಜ್ಯ ಪೊಲೀಸರು ದಂಡ ಹಾಕುತ್ತಿರುವುದು ಖಂಡನೀಯ. ಕನ್ನಡದ ಅಂಕಿಗಳ ಬೆಳವಣಿಗೆ ದೃಷ್ಟಿಯಿಂದ ಈ ಅಂಕಿಗಳ ಪ್ರದರ್ಶನ ಅಗತ್ಯವಾಗಿದೆ. ಹೀಗಾಗಿ ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಅವರು ಒತ್ತಾಯಿಸಿದರು.

ನಗರದಲ್ಲಿ ವಾರ್ಡ್ ಮಟ್ಟದ ಸಭೆಗಳನ್ನು ನಡೆಸಿ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಕೆಲವೆಡೆ ಇರುವ ಕುಡಿಯುವ ನೀರಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದೂ ಮನವಿ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ, ಮೋಹನ ಎಂ. ಮಗದುಮ್, ಪ್ರೊ. ಎಂ.ಎಸ್. ಇಂಚಲ, ಬಿ.ಎಸ್. ಗವಿಮಠ, ಪ್ರೊ. ಟಿ.ಟಿ. ಮುರಕಟ್ನಾಳ, ಸಿ.ಕೆ. ಜೋರಾಪುರ, ಮಾಜಿ ಮೇಯರ್ ಎನ್.ಬಿ. ನಿರ್ವಾಣಿ, ರಾಮಚಂದ್ರ ಢವಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.