ADVERTISEMENT

ಸವದತ್ತಿ: ಕೋಟೆ-ಕೊತ್ತಲ, ಧಾರ್ಮಿಕ ತಾಣ

2ನೇ ಕನ್ನಡ ಸಾಹಿತ್ಯ ಸಮ್ಮಳನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 8:33 IST
Last Updated 14 ಜೂನ್ 2013, 8:33 IST

ಸವದತ್ತಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕು ಐತಿಹಾಸಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಪ್ರಸಿದ್ಧಿ  ಪಡೆದುಕೊಂಡಿದ್ದು, ಸೌಗಂಧಿಪುರ, ಸೌಗಂಧವತಿ, ಸುಗಂಧವರ್ತಿ ಎಂದು ಕರೆದರು. ಇದು ರಟ್ಟರ ರಾಜಧಾನಿ ಯಾಗಿದ್ದರಿಂದ ಪರಸಗಡ ಎಂದರು.

ಅಲ್ಲದೆ ಶಿರಸಂಗಿಯ ಶ್ರಿ ಕಾಳಿಕಾದೇವಿ ನೆಲೆಸಿದ ಈ ತಾಣವನ್ನು ಮಧ್ಯಯು ಗದ ಋಷ್ಯಶೃಂಗಪುರ, ರಿಷಿಸಿಂಗಪುರ, ಬೆಳವಲ ಪಿರಿಸಂಗಿ ಎಂದು ಖ್ಯಾತಿ ಪಡೆದಿದ್ದಲ್ಲದೆ ಬದಾಮಿ ಚಾಲುಕ್ಯರ ಕಾಲದಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿತ್ತು ಎಂಬುವದಕ್ಕೆ ಇಲ್ಲಿನ ಶಾಸನಗಳಿಂದ ತಿಳಿದು ಬರುತ್ತದೆ.

ಧಾರ್ಮಿಕ ತಾಣ: ಶಕ್ತಿಪೀಠಗಳಲ್ಲೊಂದಾದ ಜಗನ್ಮಾತೆ ಶ್ರಿ ರೇಣುಕಾದೇವಿಯ ಯಲ್ಲಮ್ಮನಗುಡ್ಡ, ಶಿರಸಂಗಿಯ ಕಾಳಿಕಾದೇವಿ, ದಕ್ಷಿಣದ ಕಾಶಿ ಹೂಲಿ, ಮುನವಳ್ಳಿಯ ಶ್ರಿ ಪಂಚಲಿಂಗೇಶ್ವರ, ಕಾರಿಮನಿ ಶ್ರಿ ಮಲ್ಲಯ್ಯ, ಪುರದೇಶ್ವರ, ಅಂಕೇಶ್ವರ ಪುರಾತನ ಮಂದಿರಗಳಿವೆ.

ರಟ್ಟರು: ಕರ್ನಾಟಕದ ಅನೇಕ ರಾಜ ಮನೆತನಗಳಲ್ಲಿ ಸವದತ್ತಿ ರಟ್ಟರ ಸಾಮ್ರಾಜ್ಯ ಕೂಡಾ ಒಂದಾಗಿದೆ. ಆರಂಭದಲ್ಲಿ ಮಾಂಡಲೀಕರಾಗಿ ನಂತರ ಆಳುವ ಅರಸರಾಗಿ ಕ್ರಿ.ಶ. 10 ರಿಂದ 13ನೇ ಶತಮಾನದವರೆಗೆ ರಾಜ್ಯಭಾರ ನಡೆಸಿದ ಕೋಟೆ ಇಂದು ಎಲ್ಲರ ಕಣ್ಮುಂದೆಯೇ ವಿನಾಶವಾಗುತ್ತಿರುವುದು ವಿಶಾಷದ ಸಂಗತಿಯಾಗಿದೆ. ಸವದತ್ತಿಯ ಪಟ್ಟಣದ ಗುಡ್ಡದ ಮೇಲೆ ಇರುವ ಈ ಕೋಟೆಯಲ್ಲಿ ಕೊಳ್ಳವಿದೆ.

ಅದನ್ನು ಸುಗಂಧವರ್ತಿ ಎನ್ನುತ್ತಿ ದ್ದರು. ಅದೇ ಹೆಸರಿಗಾಗಿ ಸವದತ್ತಿಯನ್ನು ಸೌಗಂಧತ್ತಿ ಎನ್ನುತ್ತಿದ್ದರು. ರಟ್ಟರ ರಾಜ್ಯದ ಬಹುತೇಕ ಪಟ್ಟಣಗಳಲ್ಲಿ ತಮ್ಮ ಅಡಳಿತ ವಿಭಾಗಗಳನ್ನು ಆರಂಭಿಸಿದ್ದರು. ಇವರ ಕಾಲದಲ್ಲಿ ಆರ್ಥಿಕ ವ್ಯವಸ್ಥೆ, ವ್ಯಾಪಾರ, ಧರ್ಮಸಹಿಷ್ಣು ತೆ, ಕಲೆ, ಸಾಹಿತ್ಯ ಅತ್ಯಂತ ಶ್ರಿಮಂತಿಕೆಯಿಂದ ಕೂಡಿತ್ತು ಎಂಬುವುದನ್ನು ಅನೇಕ ಶಾಸನಗಳು ಹೇಳುತ್ತವೆ.

ರಟ್ಟರ ಕಾಲದಲ್ಲಿ ಕವಿಗಳಾದ ನೇಮಿಚಂದ (ಲೀಲಾವತಿ ಪ್ರಬಂಧಂ), ಪಾಶ್ಚಪಂಡಿತ (ಪಾಶ್ವನಾಥ ಪುರಾಣಂ), 2ನೇ ಗುಣವರ್ಮನ (ಪುಷ್ಪದಂತ ಪುರಾಣಂ), ಕರ್ಣಪಾರ‌್ಯನ (ನೇಮಿನಾಥ ಪುರಾಣಂ), ರಾಜಾದಿತ್ಯನ (ಗಣಿತ ಶಾಸ್ತ್ರ) ಸಾಹಿತ್ಯಗಳು ಪ್ರಕಟವಾಗಿವೆ.

ಆಳಿದ ಅರಸರುಗಳು: ಮೇದರ, ಪೃಥ್ವಿರಾಮ, ಪಿತ್ತುಗ, ಶಾಂತಿವರ್ಮ ಇವರು ಮೊದಲ ಶಾಖೆಯ ಅರಸರಾಗಿ ದ್ದಾರೆ. ನಂತರ ಎರಡನೇ ಶಾಖೆಯಲ್ಲಿ ನನ್ನ, ಕತ್ತ, ದಾಯಿ, ಕಣ್ಣಕೈರ, ಎರಗ, ಅಂಕರಸ, ಸೇನ, ಕಣ್ಣ ಇಮ್ಮಡಿ, ಕಣ್ಣಕೈರ, ಇಮ್ಮಡಿ ಕಾರ್ತವೀರ್ಯ, ಇಮ್ಮಡಿ ಸೇನ, ಮುಮ್ಮಡಿ ಕಾರ್ತವೀರ್ಯ, ಲಕ್ಷ್ಮಿದೇವ, ನಾಲ್ಮಡಿ ಕಾರ್ತವೀರ್ಯ ಮಲ್ಲಿಕಾರ್ಜುನ, ಇಮ್ಮಡಿ ಲಕ್ಷ್ಮಿದೇವ ಹೀಗೆ ಸುಮಾರು 14 ರಾಜರು ರಾಜ್ಯಭಾರ ಮಾಡಿದ್ದಾರೆ. 

ತ್ಯಾಗವೀರರ ಜನ್ನಭೂಮಿ: ಶಿರಸಂಗಿಯ ಲಿಂಗರಾಜರು ನಡೆದಾಡಿದ ಪುಣ್ಯಭೂಮಿ ಇದಾಗಿದ್ದು, ಇವರು ಈ ಭಾಗದ ಸಮಸ್ತ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಆಸ್ತಿಯನ್ನು ತ್ಯಾಗ ಮಾಡಿದ್ದರಿಂದ ಇಂದು ಕೆ.ಎಲ್.ಇ ಸಂಸ್ಥೆ ಇಡಿ ದೇಶದಲ್ಲಿ ತನ್ನದೆಯಾದ ಸ್ಥಾನಮಾನ ಉಳಿಸಿಕೊಂಡಿದ್ದರಿಂದ ಇವರನ್ನು ತ್ಯಾಗವೀರ ಲಿಂಗರಾಜರು ಎಂದು ಕರೆದರು.

ಪ್ರವಾಸಿತಾಣ: ಮಲಪ್ರಭಾ ನದಿ ಅಣೆಕಟ್ಟು ನವಿಲುತೀರ್ಥ, ಶಿರಸಂಗಿ ಲಿಂಗರಾಜರ ವಾಡೆ, ಕಾಳಿಕಾದೇವಿ ದೇವಸ್ಥಾನ, ಜಾಯಪ್ಪ ದೇಸಾಯಿ ಸವದತ್ತಿ ಕೋಟೆ, ಯಲ್ಲಮ್ಮನಗುಡ್ಡ, ಮುನವಳ್ಳಿ ಪಂಚಲಿಂಗೇಶ್ವರ, ಪರಸಗಡ ಕೋಟೆ ಮುಂತಾದವುಗಳು.

ಹೆಮ್ಮೆಯ ಪುತ್ರ ಹೂಲಿ ಶೇಖರ

ಕನ್ನಡ ಹಿರಿಯ ಸಾಹಿತಿ, ಕಥೆಗಾರ, ನಾಟಕಕಾರ, ಧಾರಾವಾಹಿಗಳ ಚಿತ್ರಕಥೆ, ಸಂಭಾಷಣೆಗಾರರಾಗಿ ಹೆಸರು ಮಾಡಿರುವ  ಹೂಲಿ ಶೇಖರ ಅವರು,  ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದವರು.

ಮೂಡಲಮನೆ, ಮಹಾನವಮಿ, ಬಂಗಾರಿ, ಕುಂತಿ ಜನಪ್ರಿಯ ಧಾರಾವಾಹಿಗಳಿಗೆ ಕಥಾ ರಚನೆ, ದೃಶ್ಯ ಸಂಯೋಜನೆ ಮಾಡಿದ್ದಾರೆ. ಕಿರು ತೆರೆಗಾಗಿ ಬರದದ್ದೇ 75000 ಪುಟಗಳ ಸಾಹಿತ್ಯ. ಈವರೆಗಿನ ಪ್ರಕಟಿತ 200 ಕಥೆಗಳು, 11 ಕಾದಂಬರಿ, 2 ಕಥಾ ಸಂಕಲ, 22 ನಾಟಕಗಳು, 15 ಆಕಾಶವಾಣಿ ನಾಟಕಗಳನ್ನು ಬರೆದಿದ್ದಾರೆ.

ಅನೇಕ ಹವ್ಯಾಸಿ ರಂಗ ತಂಡಗಳನ್ನು ಕಟ್ಟಿ ಆ ಮೂಲಕ ನೂರಾರು ನಾಟಕ ಪ್ರದರ್ಶನಗಳನ್ನು ನೀಡಿದ್ದು `ಹಾವು ಕಡಿತಾವ' ನಾಟಕ ಅಖಿಲ ಭಾರತ ಪ್ರಶಸ್ತಿ ಪಡೆದುಕೊಂಡ ರಂಗ ಜಂಗಮರಾಗಿದ್ದಾರೆ.

ಇವರು ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ವಿದ್ಯುತ್ ನಿಗಮದಲ್ಲಿ 31 ವರ್ಷಗಳ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದು, ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT