ಸುರಪುರ: ತಮ್ಮ ಮೇಲೆ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ನ್ನು ರದ್ದು ಪಡಿಸುವಂತೆ ಕೋರಲು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಮಂಗಳವಾರ ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರಾಗಿದ್ದರು.
ನಾಲ್ಕು ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆ ವೇಳೆ ರಾಜೂಗೌಡ ಅವರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರಾಗದ ಕಾರಣ ವಾರೆಂಟ್ ಹೊರಡಿಸಲಾಗಿತ್ತು.
ಕೋರ್ಟ್‌ಗೆ ಹಾಜರಾದ ಅವರು ರಿಕಾಲ್ ಆದೇಶ ಮಾಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ವಕೀಲ ಬಸವರಾಜ ಅನಸೂರ್ ಅವರು ಸಚಿವರ ಪರ ಮನವಿ ಸಲ್ಲಿಸಿದರು.ನ್ಯಾಯಾಧೀಶೆ ಮಂಜುಳಾ ಉಂಡಿ ಸಮಯಕ್ಕೆ ಸರಿಯಾಗಿ ಕೋರ್ಟ್‌ಗೆ ಹಾಜರಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ರಿಕಾಲ್ ಆದೇಶ ನೀಡಿದರು.
ರಾಜೂಗೌಡ ಅವರು ಕೋರ್ಟ್‌ಗೆ ಹಾಜರಾಗುವುದುನ್ನು ತಿಳಿದು ಆತಂಕದಿಂದ ನೂರಾರು ಅಭಿಮಾನಿಗಳ ಜಮಾಯಿಸಿದ್ದರು. ಕೋರ್ಟ್‌ನಿಂದ ಹೊರಬಂದ ರಾಜೂಗೌಡ, ಅಭಿಮಾನಿಗಳೊಂದಿಗೆ ಮಾತನಾಡಿ, ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಕಾರಣಾಂತರಗಳಿಂದ ನನಗೆ ಸರಿಯಾದ ಸಮಯಕ್ಕೆ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದರಿಂದ ವಾರಂಟ್ ಆಗಿತ್ತು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.