ADVERTISEMENT

ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತೆಗೆ ತೊಡಕು

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 6:11 IST
Last Updated 4 ಜುಲೈ 2017, 6:11 IST
ಬೆಳಗಾವಿಯ ಸುವರ್ಣ ವಿಧಾನಸೌಧ
ಬೆಳಗಾವಿಯ ಸುವರ್ಣ ವಿಧಾನಸೌಧ   

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಸ್ವಚ್ಛತೆ ಗುತ್ತಿಗೆಯಿಂದ ಗುತ್ತಿಗೆದಾರ ಹಿಂದೆ ಸರಿದ ಪರಿಣಾಮ, ಸ್ವಚ್ಛತೆ ಕೆಲಸಗಳಿಗೆ ತೊಡಕಾಗಿದೆ. ಲೋಕೋಪಯೋಗಿ ಇಲಾಖೆಯವರೇ ತಾತ್ಕಾಲಿಕವಾಗಿ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಕಾರ್ಮಿಕರಿಗೆ ವೇತನ ಹಾಗೂ ಇತರ ಸೌಲಭ್ಯ ಕಲ್ಪಿಸುವುದು ಗುತ್ತಿಗೆದಾರರಿಗೆ ಬಿಟ್ಟ ವಿಚಾರ. ಕಾರ್ಮಿಕರು ಹೆಚ್ಚಿನ ವೇತನ ಕೇಳಿದ್ದರಿಂದ ಗುತ್ತಿಗೆದಾರ ಗುತ್ತಿಗೆ ಕೈಬಿಟ್ಟಿದ್ದಾರೆ. ಹಾಗೆಂದು ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಯ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ.

ತಾತ್ಕಾಲಿಕವಾಗಿ ಕೆಲಸಗಾರರನ್ನು ನಿಯೋಜಿಸಲಾಗಿದೆ’ ಎಂದು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಬಿ. ದಾಮನ್ನವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕನಿಷ್ಠ ಕೂಲಿಗಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಗುತ್ತಿಗೆದಾರರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ  ಪ್ರತಿಭಟನೆ ನಡೆಸಿದ್ದರು.

ADVERTISEMENT

ಕಾರ್ಮಿಕ ಇಲಾಖೆಗೆ ದೂರನ್ನೂ ನೀಡಿದ್ದರು. ಇದನ್ನು ಆಧರಿಸಿ ಕಾರ್ಮಿಕ ಇಲಾಖೆಯು ಕ್ರಮಕ್ಕೆ ಮುಂದಾಗುತ್ತಿದ್ದಂತೆಯೇ, ಗುತ್ತಿಗೆದಾರ ಗುತ್ತಿಗೆ ಕೈಬಿಟ್ಟಿದ್ದಾನೆ. ಇದರಿಂದಾಗಿ
45 ಕಾರ್ಮಿಕರರಿಗೆ ಕೆಲಸ ಇಲ್ಲದಂತಾಗಿದೆ. ಸ್ವಚ್ಛತೆ ನಿರ್ವಹಿಸಲು ನೀಡಿದ್ದ ಗುತ್ತಿಗೆ ಅವಧಿ ಹೋದ ಮಾರ್ಚ್‌ನಲ್ಲೇ ಮುಕ್ತಾಯವಾಗಿತ್ತು.

ನಿರ್ವಹಣೆ ಹೊಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ತನ್ನ ವಶಕ್ಕೆ ಪಡೆದುಕೊಂಡಿದ್ದ (2016ರ ನವೆಂಬರ್‌) ವಿಧಾನಸಭೆ ಸಚಿವಾಲಯ ಸಕಾಲಕ್ಕೆ ಗುತ್ತಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿರಲಿಲ್ಲ. ಹೀಗಾಗಿ, ಗುತ್ತಿಗೆ ಮುಂದುವರಿಸಲಾಗಿತ್ತು. ಈ ನಡುವೆ, ನಿರ್ವಹಣೆಯನ್ನು ವಿಧಾನಸಭೆ ಸಚಿವಾಲಯದಿಂದ ಮತ್ತೆ ಲೋಕೋಪಯೋಗಿ ಇಲಾಖೆಗೇ ಹಸ್ತಾಂತರಿಸಲಾಗಿದೆ.

‘ಯಾರೇ ಗುತ್ತಿಗೆದಾರರು ಬಂದರೂ, ಐದು ವರ್ಷದಿಂದಲೂ ಅಲ್ಲಿ ಕೆಲಸ ಮಾಡುತ್ತಿರುವವರನ್ನೇ ಮುಂದುವರಿಸಬೇಕು. ತಿಂಗಳಿಡೀ ಕೆಲಸ ಕೊಡಬೇಕು. ಸರ್ಕಾರದ ನಿಯಮದಂತೆ ಕನಿಷ್ಠ ಕೂಲಿ ನಿಗದಿಪಡಿಸಬೇಕು. ನಮಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.

* * 

ತಿಂಗಳೊಳಗೆ ಹೊಸ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗುವುದು. ಅಲ್ಲಿಯವರೆಗೆ ನಿರ್ವಹಣೆ ಕಾರ್ಯ ನಡೆಯಲಿದೆ
ಆರ್‌.ಬಿ. ದಾಮನ್ನವರ
ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.