ವಿಶ್ವ ಕನ್ನಡ ಸಮ್ಮೇಳನವು ಬೆಳಗಾವಿ ಜಿಲ್ಲೆಯಲ್ಲಿ ಮಹಾಜಾತ್ರೆಯ ಸಂಭ್ರಮ ಸೃಷ್ಟಿಸಿದೆ. ನಗರವಂತೂ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಡೆ ಹಬ್ಬದ ವಾತಾವರಣ ಇದೆ. ಸ್ಮಾರಕಗಳಿಗೂ ಜೀವಕಳೆ ಬಂದಿದೆ. ಇಲ್ಲಿ ಭೇಟಿ ನೀಡುತ್ತಿರುವವರಿಗೆ ಪುಳಕ ನೀಡುತ್ತಿದೆ. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಂಡಿರುವ ಬೆಳಗಾವಿಯು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಹೆಬ್ಬಾಗಿಲು. ಮಲೆನಾಡ ಸೆರಗಿನಲ್ಲಿರುವ ಈ ಜಿಲ್ಲೆಯಲ್ಲಿ ಕೋಟೆ ಕೊತ್ತಲಗಳು ತುಂಬಿಕೊಂಡಿವೆ. ಜೊತೆಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ವೈವಿಧ್ಯದಿಂದ ಬೆಳಗಾವಿ ಜಿಲ್ಲೆ ಕೂಡಿದೆ. ಇಲ್ಲಿಯ ಸ್ಮಾರಕಗಳು ಇತಿಹಾಸದ ರಸ ನಿಮಿಷಗಳನ್ನು ಸಾರಿ ಹೇಳುತ್ತಿವೆ.
ಕೃಷ್ಣೆ, ಘಟಪ್ರಭೆ, ಮಲಪ್ರಭೆ ಮೈದೆಳೆವ ನಾಡಿನಲ್ಲಿ ಸುವರ್ಣಸೌಧ, ವೀರಸೌಧ, ಸರ್. ಎಂ. ವಿಶ್ವೇಶ್ವರಯ್ಯ, ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕೆಎಲ್‌ಇ ವಿಶ್ವವಿದ್ಯಾಲಯಗಳು ನವಕರ್ನಾಟಕದ ಮುದ್ರೆಯನ್ನು ಹಾಕಿವೆ. ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವವರು ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಇಲ್ಲಿಯ ಸೊಬಗನ್ನು ಸವಿಯಬಹುದು. ಪ್ರವಾಸಿಗರ ಅನುಕೂಲಕ್ಕಾಗಿಯೇ ಒಂದಿಷ್ಟು ಮಾಹಿತಿ ಇಲ್ಲಿದೆ.
ಸ್ವಾತಂತ್ರ್ಯ ಸಂಗ್ರಾಮವನ್ನು ಸ್ಮರಿಸುವ ಟಿಳಕವಾಡಿಯಲ್ಲಿರುವ ವೀರಸೌಧ, ಏಷ್ಯಾ ಖಂಡದಲ್ಲಿಯೇ ಕಮಾಂಡೋ ತರಬೇತಿಯ ಏಕೈಕ ಸ್ಥಾನವಾದ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್, ಯುದ್ಧ ಸ್ಮಾರಕ, ಮಿಲಿಟರಿ ವಸ್ತುಸಂಗ್ರಹಾಲಯ, ಶತಮಾನ ಪೂರೈಸಿರುವ ಕ್ಯಾಂಪಿನ ಸೇಂಟ್ ಮೇರಿ ಚರ್ಚ್, ಶಿವಾಜಿಯ ದಿಗ್ವಿಜಯದ ಕಥೆ ಹೇಳುವ ಮಿಲಿಟರಿ ಮಹಾದೇವ ಮಂದಿರದ ಆವರಣದಲ್ಲಿರುವ ಶಿವತೀರ್ಥ ಉದ್ಯಾನ, ಕೋಟೆ ಆವರಣದಲ್ಲಿರುವ ಜಿಲ್ಲಾ ವಸ್ತು ಸಂಗ್ರಹಾಲಯ, ದಕ್ಷಿಣಕಾಶಿ ಕಪಿಲೇಶ್ವರ ದೇವಸ್ಥಾನ ಮುಂತಾದವುಗಳು ನಗರದಲ್ಲಿನ ಪ್ರಮುಖ ನೋಡತಕ್ಕ ಸ್ಥಳಗಳು.
ಕೋಟೆ ಕೊತ್ತಲಗಳ ನಾಡು
ಬೆಳಗಾವಿ ಜಿಲ್ಲೆಯಲ್ಲಿ ಇರುವಷ್ಟು ಕೋಟೆ ಕೊತ್ತಲಗಳು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಾಣಸಿಗುವುದು ವಿರಳ. ಕುಂದಾನಗರಿಯ ಸುತ್ತಮುತ್ತವೇ ನಾಲ್ಕೈದು ಕೋಟೆಗಳಿವೆ. ಬೆಳಗಾವಿ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಬೆಳಗಾವಿ ಕೋಟೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. 100 ಎಕರೆ ಪ್ರದೇಶದಲ್ಲಿರುವ ಈ ಕೋಟೆ ವರ್ತುಲಾಕಾರದಲ್ಲಿದೆ. ಕೋಟೆಯೊಳಗೆ ವೀರಗಲ್ಲು, ಮಾಸ್ತಿಕಲ್ಲು, ಕಮಲಬಸದಿ, ಐತಿಹಾಸಿಕ ಸಫಾ ಮಸೀದಿ ಹಾಗೂ ಇತ್ತೀಚೆಗಷ್ಟೆ ನಿರ್ಮಿಸಲಾದ ರಾಮಕೃಷ್ಣ ಮಿಷನ್ ಆಶ್ರಮ ಕೋಟೆಯ ಮೆರುಗನ್ನು ಹೆಚ್ಚಿಸಿವೆ.
ಜಿಲ್ಲೆಯಲ್ಲಿ ಅತಿ ಎತ್ತರದಲ್ಲಿರುವ ಪ್ರಮುಖ ಕೋಟೆ ರಾಜಹಂಸಗಡ. ಬೆಳಗಾವಿ ನಗರದಿಂದ 7 ಕಿ.ಮೀ. ಅಂತರದಲ್ಲಿದೆ. 1674ರಲ್ಲಿ ಮರಾಠರು ಕೋಟೆ ನಿರ್ಮಿಸಿದರು. ಈ ಕೋಟೆಯೊಳಗಿನ ಸಿದ್ಧೇಶ್ವರ ಮಂದಿರ, ಬೆಟ್ಟದ ಮೇಲಿದ್ದರೂ ವರ್ಷವಿಡೀ ನೀರು ತುಂಬಿಕೊಂಡಿರುವ ಬಾವಿ, ಗಟ್ಟಿಮುಟ್ಟಾದ ಕೋಟೆಯ ಆವರಣ ಗೋಡೆ ಹಾಗೂ ವೀಕ್ಷಣಾ ಗೋಪುರ ನೋಡುಗರ ಕಣ್ಮನ ಸೆಳೆಯುತ್ತದೆ.
ನಗರದ ಬೋಗಾರವೇಸ್ (ಧರ್ಮವೀರ ಸಂಭಾಜಿವೃತ್ತ) ಹಾಗೂ ರೈಲ್ವೆ ಬಸ್ ನಿಲ್ದಾಣದಿಂದ ಯಳ್ಳೂರವರೆಗೆ ನೇರವಾಗಿ ಸಿಟಿ ಬಸ್ ಇವೆ. ಅಲ್ಲಿಂದ ಎರಡು ಕಿ.ಮೀ. ಕಾಲುದಾರಿಯಲ್ಲಿ ಸಾಗಿ ರಾಜಹಂಸಗಡ ತಲುಪಬಹುದು. ಬೆಳಗಾವಿ ಕೋಟೆಯ ಸಂರಕ್ಷಣೆಯಾಗಿಯೇ ಶಿವಾಜಿಯು ರಾಜಹಂಸಗಡ ಹಾಗೂ ಮಹಿಪಾಲಗಡ ಕೋಟೆಯನ್ನು ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಈ ಎರಡೂ ಕೋಟೆಗಳು ಬೆಳಗಾವಿ ಕೋಟೆಯಿಂದ ಅಷ್ಟೇ ಅಂತರದಲ್ಲಿವೆ. ಮಹಿಪಾಲಗಡಕ್ಕೂ ಸಾರಿಗೆ ಸೌಲಭ್ಯವಿದೆ.
ಬೆಳಗಾವಿ ಸಮೀಪದ ಕಾಕತಿ ಗ್ರಾಮವು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಚೆನ್ನಮ್ಮನ ಜನ್ಮಸ್ಥಳ. ಪುಣೆ-ಬೆಂಗಳೂರು (ಎನ್‌ಎಚ್-4) ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡದ ಮೇಲೆ ಕಲ್ಲಿನ ಕೋಟೆ ಇದೆ. ಗ್ರಾಮದಲ್ಲಿರುವ ಮಣ್ಣಿನ ವಾಡೆ ಹಾಳು ಬಿದ್ದಿದೆ. ಬೆಟ್ಟದ ಮೇಲಿನ ಕೋಟೆಯ ಕುರುಹುಗಳು ಮಾತ್ರ ಕಾಣಸಿಗುತ್ತವೆ. ಕಿತ್ತೂರಿನ ಕೋಟೆಯೂ ಚೆನ್ನಮ್ಮನ ಇತಿಹಾಸ ಹೇಳುತ್ತದೆ. ಅಲ್ಲಿನ ಕೋಟೆ ಆವರಣದಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯದಲ್ಲಿ ಚೆನ್ನಮ್ಮ ಬಳಸಿದ ಶಸ್ತ್ರಗಳನ್ನು ಸಂಗ್ರಹಿಸಿಡಲಾಗಿದೆ.
ಸವದತ್ತಿಯ ಕೋಟೆ, ರಾಮದುರ್ಗದ ಕಿಲ್ಲಾತೋರಗಲ್ಲದಲ್ಲಿರುವ ಏಳುಸುತ್ತಿನ ಕೋಟೆ, ಸಂಕೇಶ್ವರ ಸಮೀಪದ ಹರಗಾಪುರ ಗುಡ್ಡದ ಮೇಲಿರುವ ವಲ್ಲಭಗಡ ಹಾಗೂ ಖಾನಾಪುರ ತಾಲ್ಲೂಕಿನ ಭೀಮಗಡ ಜಿಲ್ಲೆಯ ಪ್ರಮುಖ ಕೋಟೆಗಳಾಗಿವೆ.
ಸ್ಮಾರಕಗಳ ಊರು..
ಖಾನಾಪುರದಿಂದ 15 ಕಿ.ಮೀ. ದೂರದಲ್ಲಿರುವ ಹಲಸಿ ಒಂದು ಐತಿಹಾಸಿಕ ಸ್ಥಳ. ಕದಂಬರ ಗತಕಾಲದ ವೈಭವವನ್ನು ಮೆರೆಯುತ್ತಿರುವ ಕಲಾ ನೈಪುಣ್ಯ ಸ್ಮಾರಕಗಳ ಬೀಡು. 3ನೇ ಶತಮಾನದಿಂದ 12ನೇ ಶತಮಾನದವರೆಗಿನ ವಿವಿಧ ಶಿಲ್ಪಕಲೆಗಳ ಸ್ಮಾರಕಗಳ ಅವಶೇಷಗಳು ಈ ಪರಿಸರದಲ್ಲಿವೆ. ವೈಷ್ಣವ, ಶೈವ, ಜೈನ ಹಾಗೂ ಮುಸ್ಲಿಮರ ಸಾಮರಸ್ಯಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ. ವರಾಹನರಸಿಂಹ ದೇವಾಲಯ, ಸುವರ್ಣೇಶ್ವರ ಮಂದಿರ, ಗ್ರಾಮದಿಂದ 3 ಕಿ.ಮೀ. ದೂರದಲ್ಲಿ ಬೆಟ್ಟದ ಮೇಲಿರುವ ರಾಮತೀರ್ಥ ಅಪೂರ್ವ ಶಿಲ್ಪಕಲಾ ಸೌಂದರ್ಯದ ಆಗರ.
ಹುಕ್ಕೇರಿಯಲ್ಲಿನ ಮುಸ್ಲಿಂ ಸ್ಮಾರಕಗಳು ಚಿತ್ತಾಕರ್ಷಕವಾಗಿವೆ. ಈ ಪಟ್ಟಣ ಕಾರಂಜಿಗಳಿಂದಾಗಿಯೇ ಪ್ರಸಿದ್ಧಿ ಪಡೆದಿದೆ. ಪಟ್ಟಣಕ್ಕೆ ಈ ಮೊದಲು ಕಾರಂಜಿಯಿಂದಲೇ ನೀರು ಪೂರೈಕೆ ಮಾಡಲಾಗುತ್ತಿತ್ತು ಎನ್ನುವುದು ವಿಶೇಷ. ಗೋಕಾಕ ಹಾಗೂ ಬೈಲಹೊಂಗಲ ತಾಲ್ಲೂಕಿನಲ್ಲೂ ಅನೇಕ ಸ್ಮಾರಕಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.